ಪ್ರತಿಭಟನೆ ಬಿಸಿ ಎದುರಿಸಿದ ಸಿಎಂ

Cm yudiurappa offerings flower on the occassion of jajivaram brithaday celebration infront of v.soudha


ಬೆಂಗಳೂರು, ಏ. ೫- ದೇಶದ ಮಾಜಿ ಉಪಪ್ರಧಾನಿ ದಿ. ಬಾಬು ಜಗಜೀವನರಾಂ ಅವರ ಜಯಂತಿ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿರುವ ಬಾಬು ಜಗಜೀವನರಾಂ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಆಗಮಿಸಿದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪ್ರತಿಭಟನೆಯ ಬಿಸಿ ತಟ್ಟಿತು.
ಮುಖ್ಯಮಂತ್ರಿ ಯಡಿಯೂರಪ್ಪನವರು ಬಾಬು ಜಗಜೀವನ ರಾಂ ಅವರ ಪ್ರತಿಮೆಗೆ ಇಂದು ಬೆಳಿಗ್ಗೆ ಮಾಲಾರ್ಪಣೆ ಮಾಡುತ್ತಿದ್ದಂತೆಯೇ ರಾಮನಗರ ಮತ್ತು ಮಾಗಡಿ ತಾಲ್ಲೂಕಿನಿಂದ ಈ ಕಾರ್ಯಕ್ರಮಕ್ಕೆ ಬಂದಿದ್ದ ದಲಿತ ಸಂಘಟನೆಗಳ ಕಾರ್ಯಕರ್ತರು, ಮುಖಂಡರುಗಳು ದಲಿತರ ದೌರ್ಜನ್ಯ ಹೆಚ್ಚಾಗಿದೆ. ಮಾಗಡಿಯಲ್ಲಿ ಜಗಜೀವನರಾಂ ಭವನ ಅಪೂರ್ಣವಾಗಿದೆ ಎಂದು ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು.
ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ, ಅವರನ್ನು ವರ್ಗಾಯಿಸಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿ, ಕಾಡಗೋಡಿಯಲ್ಲಿ ದಲಿತರ ಮೇಲೆ ದೌರ್ಜನ್ಯವೆಸಗಿದವರ ಮೇಲೂ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಈ ಪ್ರತಿಭಟನೆಯಿಂದ ಸ್ವಲ್ಪ ವಿಚಲಿತರಾದ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಜತೆಗಿದ್ದ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರಿಗೆ ಈ ಬಗ್ಗೆ ಗಮನ ಹರಿಸುವಂತೆ ಸೂಚಿಸಿದರು.
ತಕ್ಷಣ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು, ಪ್ರತಿಭಟನಾನಿರತರನ್ನು ಸಮಾಧಾನಪಡಿಸಿ, ಅವರಿಂದ ಅಹವಾಲು ಸ್ವೀಕರಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿ ಎಲ್ಲವನ್ನೂ ಪರಿಸ್ಥಿತಿ ತಿಳಿಯಾಗಿಸಿದರು.
ಗುಣಗಾನ
ದಿ. ಮಾಜಿ ಉಪ ಪ್ರಧಾನಿ ಜಗಜೀವನರಾಂ ಅವರ ಜಯಂತಿ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು, ಜಗಜೀವನರಾಂ ಅವರ ಸೇವೆ, ಅವರು ಜಾರಿಗೊಳಿಸಿದ ಯೋಜನೆಗಳು ಎಲ್ಲವನ್ನೂ ನೆನಪಿಸಿಕೊಂಡರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ಮಾಜಿ ಸಂಸದ ಕೆ.ಹೆಚ್. ಮುನಿಯಪ್ಪ, ಮಾಜಿ ಸಚಿವ ಆಂಜನೇಯ, ಮುಖ್ಯ ಕಾರ್ಯದರ್ಶಿ ರವಿಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.