ಬೆಂಗಳೂರು, ಜೂ.23-ಯಡಿಯೂರಪ್ಪನವರಿಗೆ ಪ್ರತಿಭಟನೆ ಮಾಡಲು ಯಾವ ನೈತಿಕ ಹಕ್ಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಡವರಿಗೆ 10 ಕೆ.ಜಿ. ಅಕ್ಕಿ ಕೊಡದಿದ್ದರೆ ಸದನದ ಒಳಗೆ ಮತ್ತು ಹೊರಗಡೆ ಹೋರಾಟ ಮಾಡುವುದಾಗಿ ಯಡಿಯೂರಪ್ಪ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜುಲೈ 1 ರಿಂದ ವಿದ್ಯುತ್ ಕೊಡುತ್ತಿದ್ದೇವೆ. ಅಕ್ಕಿ ಕೊಡಲು ನಿರ್ಧಾರ ಮಾಡಲಾಗಿತ್ತು. ಆದರೆ ಅಕ್ಕಿ ಸಿಗುತ್ತಿಲ್ಲ. ತೆಲಂಗಾಣದವರು ಭತ್ತ ಕೊಡುತ್ತೇವೆ. ಛತ್ತೀಸಗಡದಿಂದ 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಕೊಡುತ್ತೇವೆ ಎಂದಿದ್ದಾರೆ.
ಪಂಜಾಬ್ ರಾಜ್ಯದವರು ನವೆಂಬರ್ ನಿಂದ ಕೊಡುವುವದಾಗಿ ಹೇಳುತ್ತಿದ್ದಾರೆ.
ಹೀಗಾಗಿ ಎನ್ ಸಿಸಿಎಫ್ ಕೇಂದ್ರಿಯ ಭಂಡಾರ, ನಫೆಡ್ ನಿಂದ ಕೊಟೆಷನ್ ಕೇಳಿದ್ದೇವೆ.ಅವರು ಕೊಟ್ಟ ಬಳಿಕ ದರ, ಗುಣಮಟ್ಟ, ಪ್ರಮಾಣ ನೋಡಿಕೊಂಡು ಅಕ್ಕಿ ಖರೀದಿ ಕುರಿತು ನಿರ್ಧರಿಸುವುದಾಗಿ ತಿಳಿಸಿದರು.
ಮುಕ್ತ ಮಾರುಕಟ್ಟೆಯಿಂದ ಅಕ್ಕಿ ಖರೀದಿ ಮಾಡಬೇಕಾದರೆ, ಟೆಂಡರ್ ಕರೆಯಬೇಕಾಗುತ್ತದೆ ಅದಕ್ಕೆ ಸಮಯ ಬೇಕಾಗುತ್ತದೆ. ರಾಗಿ, ಜೋಳ ಎರಡೆರಡು ಕೆ.ಜಿ. ಕೊಡಬಹುದು, ಆದರೆ ಇನ್ನು 3 ಕೆ.ಜಿ. ಅಕ್ಕಿ ಕೊಡಬೇಕಲ್ಲ, ಅದೇ ಸಮಸ್ಯೆ ಎಂದರು.
ಹಾಲಿನ ದರ ಏರಿಕೆ ವಿಚಾರ ಸಂಬಂಧಿಸಿ ಚರ್ಚೆ ಮಾಡಿ ಪರಿಶೀಲನೆ ನಡೆಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಾಜ್ಯದಲ್ಲಿ ಮಳೆ ಬರುತ್ತಿದೆ, ವ್ಯಾಪಕವಾಗಿ ಬರುತ್ತಿಲ್ಲ ಅಷ್ಟೇ.ಒಂದು ವೇಳೆ ಸಮಸ್ಯೆಯಾದರೆ, ಪರಿಸ್ಥಿತಿ ಎದುರಿಸುವ ಸಾಮರ್ಥ್ಯ ರಾಜ್ಯ ಸರ್ಕಾರಕ್ಕಿದೆ.ಮಳೆ ಬರಲಿ ಎಂದು ಪ್ರಾರ್ಥನೆ ಮಾಡ್ತಿದ್ದೇವೆ. ಬಿತ್ತನೆ ಕೆಲವೆಡೆ ಆರಂಭವಾಗಿದೆ ಕೆಲವು ಕಡೆ ಮಳೆಯಾಗಿಲ್ಲ ಎಂದು ತಿಳಿಸಿದರು.
ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತಿದ್ದೇವೆ.ಕುಡಿಯುವ ನೀರಿನ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಡಿ ಸಿ ಗಳಿಗೆ ಸೂಚಿಸಿದ್ದೇನೆ. ಎರಡು ಬಾರಿ ಡಿ ಸಿ ಗಳ ಸಭೆ ನಡೆಸಿದ್ದೇನೆ.ಮಳೆ ಯಾವಾಗ ಬಂದರೂ ಬಿತ್ತನೆಗೆ ಕ್ರಮ ಕೈಗೊಂಡಿದ್ದೇವೆ.ಬಿತ್ತನೆ ಬೀಜ, ಗೊಬ್ಬರ ಸಿದ್ಧವಾಗಿಟ್ಟುಕೊಳ್ಳುವಂತೆ ಕೃಷಿ ಇಲಾಖೆಗೆ ಸೂಚಿಸಿರುವುದಾಗಿ ಸಿದ್ದರಾಮಯ್ಯ ವಿವರಿಸಿದರು.