ಪ್ರತಿಭಟನೆಯಲ್ಲಿ ಮೃತ ರೈತರ ಗೌರವಾರ್ಥ ಡಿ. 23ರಂದು ಶೋಕ ದಿನಾಚರಣೆ

ಕಲಬುರಗಿ.ಡಿ.19: ಕಳೆದ 24 ದಿನಗಳಿಂದ ದೆಹಲಿ ಗಡಿಗಳಲ್ಲಿ ಲಕ್ಷಾಂತರ ರೈತರು ಪ್ರತಿಭಟನೆ ಮಾಡುತ್ತಿದ್ದು, ಈವರೆಗೆ ಸುಮಾರು 23 ಜನರು ಮೃತಪಟ್ಟಿದ್ದಾರೆ. ಅವರ ಗೌರವಾರ್ಥ ನಗರದಲ್ಲಿ ಡಿಸೆಂಬರ್ 23ರಂದು ಶೋಕ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಮತ್ತು ರೈತರ ಕಾರ್ಮಿಕರ ದಲಿತರ ಐಕ್ಯ ಹೋರಾಟ ಸಮಿತಿಯ ಪ್ರಮುಖ ಮಹೇಶ್ ಎಸ್.ಬಿ., ಅವರು ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ನಗರದ ಸಾರ್ವಜನಿಕ ಉದ್ಯಾನವನದಲ್ಲಿನ ಟೌನ್ ಹಾಲ್ ಆವರಣದಲ್ಲಿರುವ ಮಹಾತ್ಮಾಗಾಂಧಿ ಪ್ರತಿಮೆ ಬಳಿ ಶೃದ್ಧಾಂಜಲಿ ಸಭೆಯನ್ನು ಆಯೋಜಿಸಲಾಗಿದೆ ಎಂದರು.
ಅಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಪ್ಪು ಪಟ್ಟಿಯನ್ನು ಧರಿಸಿ ಕೇಂದ್ರದ ಮಾರಕ ಕಾಯ್ದೆಗಳ ವಿರುದ್ಧವೂ ಪ್ರತಿಭಟಿಸಲಾಗುವುದು ಎಂದು ಅವರು ತಿಳಿಸಿದರು.
ಕಳೆದ ನವೆಂಬರ್ 26ರಿಂದ ದೆಹಲಿಯ ಗಡಿಗಳಲ್ಲಿ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಸಿಂಘಂ ಗಡಿಯಲ್ಲಿ 32ಕ್ಕೂ ಹೆಚ್ಚು ರೈತ ಸಂಘಟನೆಗಳು ಪ್ರತಿಭಟನೆ ಮಾಡುತ್ತಿವೆ. ಈ ಸಂದರ್ಭದಲ್ಲಿ ಹುತಾತ್ಮರಾದ ರೈತರಿಗೆ ಗೌರವ ಸಲ್ಲಿಸುವ ದಿಸೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ಹೇಳಿದರು.
ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಚಳಿಯಿಂದಾಗಿ ತೀವ್ರತೆರನಾದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ದೆಹಲಿಯ ತಾಪಮಾನ ರಾತ್ರಿ ವೇಳೆ ಬಹಳ ಕಡಿಮೆ ಆಗುತ್ತಿದೆ. ಇದರಿಂದ ಸಹಜವಾಗಿ ಗಡಿಯಲ್ಲಿ ಅಂದರೆ ಬಯಲಲ್ಲಿ ಪ್ರತಿಭಟನೆ ಮಾಡುತ್ತಿರುವವರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಇದುವರೆಗೆ ನಡೆದ ಐದು ಸುತ್ತಿನ ಸಭೆಗಳು ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಡೆಸಿದ ಅನೌಪಚಾರಿಕ ಮಾತುಕತೆಗಳೂ ವಿಫಲವಾಗಿವೆ. ಇದರಿಂದಾಗಿ ರಾಷ್ಟ್ರ ರಾಜಧಾನಿ ದಹಲಿ ಗಡಿಯಲ್ಲಿ ರೈತರ ಅನಿರ್ಧಿಷ್ಟಾವಧಿ ಮುಂದುವರೆದಿದೆ ಎಂದು ಅವರು ಹೇಳಿದರು.
ರೈತರ ಹೋರಾಟವನ್ನು ಬೆಂಬಲಿಸಲಾಗುವುದು ಎಂದು ಹೇಳಿದ ಅವರು, ರೈತ ವಿರೋಧಿ ಕಾಯ್ದೆಗಳ ವಿರುದ್ಧ ಹೋರಾಟ ಪ್ರಬಲಗೊಳ್ಳುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಗದೇವಿ ಹೆಗಡೆ, ಭೀಮಾಶಂಕರ್ ಮಾಡ್ಯಾಳ್, ಶೌಕತ್ ಅಲಿ ಆಲೂರ್, ಅರ್ಜುನ್ ಭದ್ರೆ ಮುಂತಾದವರು ಉಪಸ್ಥಿತರಿದ್ದರು.