ಪ್ರತಿಭಟನಾ ಶಿಬಿರದ ಮೇಲೆ ದಾಳಿ ೯ ಮಂದಿ ಬಂಧನ

ಕೊಲಂಬೊ,ಜು.೨೨- ಶ್ರೀಲಂಕಾದ ವಾಣಿಜ್ಯ ರಾಜಧಾನಿ ಕೊಲಂಬೊದಲ್ಲಿರುವ ಸರ್ಕಾರಿ ವಿರೋಧಿ ಪ್ರತಿಭಟನಾ ಶಿಬಿರದ ಮೇಲೆ ಭದ್ರತಾ ಪಡೆಗಳು ದಾಳಿ ನಡೆಸಿ ೯ ಮಂದಿಯನ್ನು ಬಂಧಿಸಿದ್ದಾರೆ.

ದಾಳಿಯ ಸಂಬಂದರ್ಭದಲ್ಲಿ ಕೆಲವು ಪತ್ರಕರ್ತರು ಸೇರಿದಂತೆ ಕನಿಷ್ಠ ೫೦ ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

ಶ್ರೀಲಂಕಾದ ಮಾಜಿ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರ ಹೆಸರನ್ನು ಅಪಹಾಸ್ಯ ಮಾಡುವ “ಗೋಟಾ ಗೋ ಗಾಮಾ” ಪ್ರತಿಭಟನಾ ಶಿಬಿರವನ್ನು ನೂರಾರು ಭದ್ರತಾ ಸಿಬ್ಬಂದಿಗಳು ಸುತ್ತುವರಿದು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ.

ದೇಶದ ನೂತನ ಅಧ್ಯಕ್ಷ ರನಿಲ್ ವಿಕ್ರಮ ಸಿಂಘೆ ಅವರ ಪ್ರಮಾಣವಚನ ಸ್ವೀಕರಿಸಿದ ಒಂದು ದಿನದ ನಂತರ ನಾಗರಿಕರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

“ಇದು ವ್ಯವಸ್ಥಿತ ಮತ್ತು ಪೂರ್ವನಿಯೋಜಿತ ದಾಳಿ”. ಜನರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಲಾಗಿದೆ. ಎಂದು ಪ್ರತಿಭಟನಾ ಸಂಘಟಕ ಚಮೀರ ಡೆಡ್ಡುವಾಗೆ ತಿಳಿಸಿದ್ದಾರೆ..

ಶ್ರೀಲಂಕಾದಲ್ಲಿ ನೂತನ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರು ತುರ್ತು ಪರಿಸ್ಥಿತಿ ಹೇರಿದ್ದಾರೆ. ಪ್ರತಿಭಟನಾಕಾರರನ್ನು ಬಂಧಿಸಲು ಮತ್ತು ಬಂಧಿಸಲು ಮತ್ತು ಪ್ರತಿಭಟಿಸುವ ಹಕ್ಕನ್ನು ಮೊಟಕುಗೊಳಿಸಲು ಸೇನೆಗೆ ಅಧಿಕಾರ ನೀಡಲು ಹಿಂದಿನ ತುರ್ತು ನಿಯಮಾವಳಿಗಳನ್ನು ಬಳಸಲಾಗಿದೆ.

ಏಳು ದಶಕಗಳಲ್ಲಿ ದೇಶದ ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟಿನಿಂದ ಉಂಟಾದ ಬೃಹತ್ ಸಾರ್ವಜನಿಕ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಶ್ರೀಲಂಕಾದಿಂದ ಪಲಾಯನ ಮಾಡಿದ ರಾಜಪಕ್ಸೆ ಅವರ ರಾಜೀನಾಮೆಯ ನಂತರ ಮಾಜಿ ಪ್ರಧಾನಿ ವಿಕ್ರಮಸಿಂಘೆ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.