ಪ್ರತಿಫಲ ಅಪೇಕ್ಷೆ ಇಲ್ಲದೆ ಮಾಡುವುದೇ ನಿಜವಾದ ಸೇವೆ: ಬಿ.ಟಿ. ಪ್ರಕಾಶ್

ಸಂಜೆವಾಣಿ ವಾರ್ತೆ

ದಾವಣಗೆರೆ.ಏ.೪; ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ಡಿಸಿಎಂ ಟೌನ್‌ಶಿಪ್‌ನ ಶ್ರೀ ವಿವೇಕಾನಂದ ವೃದ್ಧಾಶ್ರಮ ಹಾಗೂ ಹಿರಿಯ ನಾಗರಿಕರ ಸಹಾಯವಾಣಿ  ಸಹಯೋಗದಲ್ಲಿ ಸಾಹಿತ್ಯೋತ್ಸವದ ಅಂಗವಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮ ಶ್ರೀ ವಿವೇಕಾನಂದ ವೃದ್ಧಾಶ್ರಮದ ಆವರಣದಲ್ಲಿ ನಡೆಯಿತು.ಶ್ರೀ ಸ್ವಾಮಿ ವಿವೇಕಾನಂದ ವೃದ್ಧಾಶ್ರಮದ ಸಂಸ್ಥಾಪಕರಾದ ಶ್ರೀ ಮರಿಯಾಚಾರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಕೆ.ಬಿ. ಪರಮೇಶಪ್ಪನವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಶ್ರೀ ವಿವೇಕಾನಂದ ವೃದ್ಧಾಶ್ರಮದ ಸೇವೆಯ ಪರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ನಾವು ಒಂದು ದಿನ ಬೆಳಗ್ಗೆಯಿಂದ ಸಾಯಂಕಾಲದವರೆಗೂ ವೃದ್ಧಾಶ್ರಮದಲ್ಲಿ ಇದ್ದು ಅವರ ಜೊತೆ ಒಂದು ದಿನ ಕಾಲ ಕಳೆದಲ್ಲಿ ಈ ಇಳಿ ವಯಸ್ಸಿನಲ್ಲಿ ಅವರಿಗೆ ಸ್ಪೂರ್ತಿ ತುಂಬಿದಂತಾಗುತ್ತದೆ ಎಂದು ತಿಳಿಸಿದರು. ನಿವೃತ್ತ ಸಹಾಯಕ ನಿರ್ದೇಶಕರು ಆಹಾರ ಇಲಾಖೆ ದಾವಣಗೆರೆ ಬಿ.ಟಿ. ಪ್ರಕಾಶ್ ಸಮಾಜ ಸೇವೆ ಕುರಿತು ದತ್ತಿ ಉಪನ್ಯಾಸ ನೀಡುತ್ತಾ, ಸೇವೆಯ ಪ್ರತಿಫಲ ಸೇವೆಯೇ; ಎಂದೂ ತನಗಾಗಿ ಬದುಕುವುದು ನಿಜವಾದ ಬದುಕಲ್ಲ ಇತರರಿಗೆ ಬದುಕುವುದೇ ನಿಜವಾದ ಬದುಕು. ಹಾಗಾಗಿ ಮನುಷ್ಯ ಹುಟ್ಟಿದ ಮೇಲೆ ಕೆಲವೊಂದು ಋಣಗಳನ್ನು ತೀರಿಸಬೇಕಾಗುತ್ತದೆ. ಆ ನಿಟ್ಟಿನಲ್ಲಿ ಸಮಾಜ ಸೇವೆಯೂ ಒಂದಾಗಿದೆ. ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಮಾಡುವುದೇ ನಿಜವಾದ ಸೇವೆ. ಸಮಾಜ ಸೇವೆಯ ಮೂಲಕ ಸಮಾಜದ ಋಣವನ್ನು ತೀರಿಸಬಹುದು, ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚುವುದು, ನೊಂದವರ ನೋವಿಗೆ ಸ್ಪಂದಿಸುವುದು, ಇತರರಿಗೆ ತನ್ನ ಕೈಲಾದಷ್ಟು ಸಹಾಯ ಮಾಡುವುದು, ಇದ್ದವರೆಲ್ಲ ಇಲ್ಲದವರಿಗೆ ನೀಡುವುದು, ಕಷ್ಟದಲ್ಲಿರುವವರಿಗೆ ನಾಲ್ಕು ಸಾಂತ್ವನದ ಮಾತನ್ನು ಹೇಳುವುದು… ಹೀಗೆ ಹಲವು ವಿಧದಲ್ಲಿ ಸಮಾಜ ಸೇವೆ ಮಾಡಬಹುದು ಸಮಾಜಸೇವೆ ಮಾಡಲು ಹಣವೇ ಇರಬೇಕೆಂದಿಲ್ಲ ಹಣವಿಲ್ಲದಿದ್ದರೂ ಸಮಾಜಸೇವೆ ಮಾಡಬಹುದು. ಅನಾಥರಿಗೆ, ವೃದ್ಧರಿಗೆ, ದುರ್ಬಲರಿಗೆ, ಶೋಷಿತರಿಗೆ ಸಹಾಯ ಮಾಡುವ ಗುಣವನ್ನು ಎಲ್ಲರೂ ಹೊಂದಬೇಕಾಗಿದೆ. ಯಾರ ಮನಸ್ಸಿಗೂ ನೋವು ಮಾಡದಂತೆ ಬದುಕಬೇಕಾಗಿದೆ. ಬೇರೆಯವರ ದಾರಿಗೆ ಹೂವಾಗದಿದ್ದರೂ ಪರವಾಗಿಲ್ಲ ಮುಳ್ಳಾಗದಿದ್ದರೆ ಅಷ್ಟೇ ಸಾಕೆಂದು ಈ ಸಂದರ್ಭದಲ್ಲಿ ತಿಳಿಸಿದರು.