ಪ್ರತಿಪಕ್ಷಗಳ ವಿರೋಧದ ನಡುವೆಯೂ ಆಸ್ತಿ ತೆರಿಗೆ ಹೆಚ್ಚಳಕ್ಕೆ ಪುರಸಭೆ ನಿರ್ಧಾರ

ಮೂಡುಬಿದಿರೆ, ಎ.೧೪- ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿ ಕಳೆದ ವರ್ಷ ಚಾಲ್ತಿಯಲ್ಲಿದ್ದ  ಆಸ್ತಿ ತೆರಿಗೆಗಿಂತ ಈ ವರ್ಷ ೦.೬%-೦.೭%ವರೆಗೆ ಆಸ್ತಿ ತೆರಿಗೆ ಹಾಗೂ ಖಾಲಿ ಸ್ಥಳಕ್ಕೆ ೦. ೨% ಹೆಚ್ಚಳಕ್ಕೆ ಪುರಸಭೆಯು ಸೋಮವಾರ ನಡೆದ ವಿಶೇಷ ಸಭೆಯಲ್ಲಿ ಪ್ರತಿಪಕ್ಷಗಳ ಆಕ್ಷೇಪಗಳ ಮಧ್ಯೆಯೇ ಹಿಂದಿನ ತೆರಿಗೆಗಿಂತ ರೂ ೧೦೦ಗಳಷ್ಟು ಹೆಚ್ಚು ಹೊರೆಯಾಗದಂತೆ ಮತ್ತು ಬಡ ಸಾಮಾನ್ಯ ಜನರಿಗೆ ಕಡಿಮೆ ಹೊರೆಯಾಗುವಂತೆ ತೆರಿಗೆ ಹೆಚ್ಚಿಸಲು ನಿರ್ಣಯ ಕೈಗೊಳ್ಳಲಾಯಿತು. 

ಶಾಸಕ ಉಮಾನಾಥ ಕೋಟ್ಯಾನ್ ನೇತೃತ್ವದಲ್ಲಿ ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಬಡ ಮಧ್ಯಮ ವರ್ಗದ ಜನರಿಗೆ ತೊಂದರೆಯಾಗದಂತೆ ಆಸ್ತಿ ತೆರಿಗೆ ಹೆಚ್ಚಳದ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಕಳೆದ ೨ ತಿಂಗಳ ಸಭೆಯಲ್ಲಿ ಆಸ್ತಿ ತೆರಿಗೆ ಹೆಚ್ಚಳಕ್ಕೆ ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವುದೆಂದು ನಿರ್ಧರಿಸಲಾಗಿತ್ತು. ಈ ಹಿನ್ನಲೆಯಲ್ಲಿ ನಡೆದ ವಿಶೇಷ ಸಭೆಯಲ್ಲೂ  ಪ್ರತಿ ಪಕ್ಷಗಳ ೧೧ ಸದಸ್ಯರು ಕೊರೋನಾ ಸಂಕಷ್ಠದ ಕಾರಣ ನೀಡಿ ಆಸ್ತಿ ತೆರಿಗೆ ಒಂದು ವರ್ಷ ಮುಂದೂಡುವಂತೆ ಮನವಿ ಮಾಡಿದರು. ಈ ವೇಳೆ ಪ್ರತಿಪಕ್ಷಗಳ ಸದಸ್ಯರನ್ನು ಸಮಧಾನ ಪಡಿಸಿದ ಶಾಸಕ ಉಮಾನಾಥ ಕೋಟ್ಯಾನ್ ಕೇಂದ್ರದ ಅನುದಾನ ಪಡೆಯಲು ತೆರಿಗೆ ಹೆಚ್ಚಳ ಅನಿವಾರ್ಯ ಎಂದರು.

ಈ ವೇಳೆ ಪ್ರತಿಪಕ್ಷದ ಸದಸ್ಯರು ಅನುದಾನವನ್ನು ಹೆಚ್ಚಿಸಬೇಕೆಂದು ಪಟ್ಟು ಹಿಡಿದರು.

ಮೆಸ್ಕಾಂ ಇಲಾಖೆಯು ಪ್ರತಿದಿನ ಪವರ್ ಕಟ್ ಮಾಡುತ್ತಿರುವುದರಿಂದ  ನೀರು ಸರಬರಾಜಿಗೆ ತೊಂದರೆಯಾಗುತ್ತಿರುವ ಬಗ್ಗೆ ಸದಸ್ಯ ಸುರೇಶ್ ಪ್ರಭು ಮೆಸ್ಕಾಂ ಎಸ್‌ಒ ಪ್ರವೀಣ್ ಅವರನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ  ಶಾಖಾಧಿಕಾರಿ ಪೋನ್ ಕರೆ ಸ್ವೀಕರಿಸದಿರುವುದರ ಬಗ್ಗೆ  ಎಲ್ಲಾ ಸದಸ್ಯರು ಸಭೆಯಲ್ಲಿ ಆಕ್ರೋಶ ವ್ಯಕ್ತ ಪಡಿಸಿದ್ದಲ್ಲದೆ,  ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ ಮಾತನಾಡಿ ಮೆಸ್ಕಾಂ ಬಿಲ್ಲ್ ಕಟ್ಟದಿದ್ದರೆ ಮನೆಯವರಿಗೆ ಮಾಹಿತಿ ನೀಡದೆ, ಮನೆಯಲ್ಲಿ ಯಾರೂ ಇಲ್ಲದಾಗ ನಾಯಿಗಳಿಗೆ ತಮ್ಮ ಸಿಬಂದಿಗಳು ಬಿಸ್ಕತ್ತು ಹಾಕಿ ಫೀಸ್ ತೆಗೆದುಕೊಂಡು ಹೋಗುತ್ತೀರಿ ಎಂದು ಅಧಿಕಾರಿಯ ಗಮನಕ್ಕೆ ತಂದರು. ಇದಕ್ಕೆ ಉತ್ತರಿಸಿದ ಶಾಖಾಧಿಕಾರಿ ಅಕಾಲಿಕ ಲೋಡ್ ಶೆಡ್ಡಿಂಗ್‌ನಿಂದ ಸಮಸ್ಯೆಯಾಗಿರುವುದು ನಿಜ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುವುದೆಂದು ಭರವಸೆ ನೀಡಿದರು.

ಈ ಸಂದರ್ಭ ಮಧ್ಯೆ ಪ್ರವೇಶಿದ ಶಾಸಕ ಕೋಟ್ಯಾನ್ ಮೆಸ್ಕಾಂ ಅಧಿಕಾರಿ ಮತ್ತು ಸಿಬಂಧಿಗಳ ವೈಪಲ್ಯ ನನ್ನ ಗಮನಕ್ಕೆ ಬಂದಿದೆ. ಅಧಿಕಾರಿಗಳು ಲೈನ್‌ಮೆನ್‌ಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಸಿಬಂದಿಗಳು ಕೂಡಾ ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಬೇಕು. ನಾನು ಯಾವುದೇ ಸಂದರ್ಭದಲ್ಲಿ ದಿಢೀರ್ ಬೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಎಚ್ಚರಿಸಿದರು.

 ಕಂದಾಯ ಅಧಿಕಾರಿ ಪುರುಷೋತ್ತಮ ಆಸ್ತಿ ತೆರಿಗೆಯ ಬಗ್ಗೆ ಮಾಹಿತಿ ನೀಡಿದರು. ಉಪಾಧ್ಯಕ್ಷೆ ಸುಜಾತ ಶಶಿಕಿರಣ್, ಸ್ಥಾಯಿ ಸಮಿತಿ ಸದಸ್ಯ ನಾಗರಾಜ ಪೂಜಾರಿ, ಪುರಸಭಾ ಮುಖ್ಯಾಧಿಕಾರಿ ಇಂದು ಎಂ, ಕಂದಾಯ ಅಧಿಕಾರಿ ಪುರುಷೋತ್ತಮ ಹಾಗೂ ಮೆಸ್ಕಾಂ ಅಧಿಕಾರಿ ಪ್ರವೀಣ್ ಮತ್ತು ಪುರಸಭಾ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.