ಪ್ರತಿನಿಧಿಗಳ ಮೇಲೆ ವಿಶ್ವಾಸ ಕಳೆದುಕೊಂಡ ಜನ – ಆಕ್ರೋಶ

ನಗರದಲ್ಲಿ ಹದಗೆಟ್ಟ ರಸ್ತೆಗಳಿಗೆ ವಾರಸುದಾರರು ಇದ್ದಾರೆಯೇ?
ರಾಯಚೂರು.ಸೆ.೨೫- ನಗರದಲ್ಲಿ ರಸ್ತೆ ಮತ್ತು ಕಸದ ಅವ್ಯವಸ್ಥೆಯಿಂದ ಜನ ಬೇಸತ್ತು ಜನಪ್ರತಿನಿಧಿಗಳ ಬಗ್ಗೆ ವಿಶ್ವಾಸವನ್ನೇ ಕಳೆದುಕೊಳ್ಳುವಂತೆ ಮಾಡಿದೆ.
ಮಾಧ್ಯಮ ಮತ್ತು ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿ ನಗರಸಭೆ ಅಧಿಕಾರಿಗಳೊಂದಿಗೆ ನೇರ ಕಾರ್ಯಾಚರಣೆಯಿಂದ ಕಳೆದ ಒಂದು ವಾರದಿಂದ ನಗರದಲ್ಲಿ ನಿರಂತರ ಸ್ವಚ್ಛತೆ ಕಾರ್ಯವೇನು ಆರಂಭಗೊಂಡಿದೆ. ಆದರೆ, ರಸ್ತೆಗಳ ದುಸ್ಥಿತಿ ಸರಿ ಪಡಿಸುವುದು ಯಾರು? ಎನ್ನುವ ಪ್ರಶ್ನೆ ಈಗ ಜನರದ್ದಾಗಿದೆ. ನಗರದ ಕೆಲ ರಸ್ತೆಗಳಿಗೆ ಯಾರಾದರೂ ವಾರಸುದಾರರು ಇದ್ದಾರೆಯೇ ಎಂದು ಕೇಳುವಂತಹ ದಯಾನೀಯ ಸ್ಥಿತಿ ಈ ರಸ್ತೆಗಳದ್ದಾಗಿದೆ.
ಅತಿ ಹೆಚ್ಚಿನ ಜನ ಓಡಾಡುವ ರಸ್ತೆಗಳ ಪಾಡೇ ಹೀಗಾದರೇ ಉಳಿದ ರಸ್ತೆಗಳನ್ನು ಕೇಳುವವರು ಯಾರು?. ಮಾವಿನ ಕೆರೆ ರಸ್ತೆಯ ಮೇಲೆ ಸಂಚರಿಸುವ ಜನರಿಗೆ ಗೊತ್ತು ಸಂಚಾರ ಎಷ್ಟು ನರಕಮಯ ಎನ್ನುವುದು. ಚಂದ್ರಮೌಳೇಶ್ವರ ರಸ್ತೆಯಿಂದ ಗೋಶಾಲ ರಸ್ತೆಗೆ ಸಂಪರ್ಕ ಕಲ್ಪಿಸುವ ೮೦ ಅಡಿ ರಸ್ತೆಯಂತೂ ಗುಂಡಿಗಳಿಂದಲೇ ತುಂಬಿ ಹೋಗಿದೆ. ಸೂಪರ್ ಮಾರ್ಕೆಟ್‌ಯಿಂದ ಜೈನ್ ಮಂದಿರ್, ಕಂದುಗಡ್ಡೆ ಮಾರೆಮ್ಮ ದೇವಸ್ಥಾನದ ಮುಂಭಾಗದ ರಸ್ತೆಯೂ ಸಂಪೂರ್ಣ ಹದಗೆಟ್ಟು ಹೋಗಿದೆ. ಪಟೇಲ್ ರಸ್ತೆಯೂ ಅನೇಕ ಕಡೆ ಕಿತ್ತು ಹೋಗಿದೆ. ಬೋಳಮಾನದೊಡ್ಡಿ ಹೀಗೆ ನಗರದ ಬಹುತೇಕ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟು ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.
ಈ ಹದಗೆಟ್ಟ ರಸ್ತೆಗಳನ್ನು ಕಾಣದಷ್ಟು ನಗರದ ಜನಪ್ರತಿನಿಧಿಗಳು ಕುರುಡರಾಗಿದ್ದಾರೆಯೇ?. ಇತ್ತೀಚಿನ ಮಳೆಯಿಂದ ರಸ್ತೆಗಳ ಪರಿಸ್ಥಿತಿಯಂತೂ ಮತ್ತಷ್ಟು ದಾರುಣವಾಗಿದೆ. ಇಂತಹ ರಸ್ತೆಗಳಲ್ಲಿ ಜನ ಓಡಾಡುವುದಾದರೂ ಹೇಗೆ ಎನ್ನುವ ಬಗ್ಗೆ ಈ ಜನಪ್ರತಿನಿಧಿಗಳಿಗೆ ಏಕೆ ಹರಿವಿಗೆ ಬರುತ್ತಿಲ್ಲ ಎನ್ನುವುದೇ ಯಕ್ಷಪ್ರಶ್ನೆಯಾಗಿದೆ. ಕೋಟ್ಯಾಂತ ರೂ. ಅನುದಾನ ಬಿಡುಗಡೆಯಾಗಿದ್ದರೂ, ರಸ್ತೆ ಕಾಮಗಾರಿಗಳಿಗೆ ಬಳಸಬೇಕಾದ ಹಣ ಎಲ್ಲಿ ಮಾಯವಾಗಿದೆ ಎನ್ನುವ ಜನರ ಪ್ರಶ್ನೆಗಳಿಗೆ ಉತ್ತರ ಹೇಳಬೇಕಾದ ಜನಪ್ರತಿನಿಧಿಗಳು ಮೌನಕ್ಕೆ ಶರಣಾಗಿದ್ದಾರೆ.
ಆಯಾ ನಗರಸಭೆ ಸದಸ್ಯರಿಂದ ಹಿಡಿದು ಸಂಸದರು, ಶಾಸಕರವರೆಗೂ ಎಲ್ಲರೂ ಅಭಿವೃದ್ಧಿಯ ಬಗ್ಗೆ ಭಾಷಣ ಮಾಡುವವರೆ. ಆದರೆ, ಈ ಹದಗೆಟ್ಟ ರಸ್ತೆಗಳೇ ಅಭಿವೃದ್ಧಿಯೆಂದು ಜನ ಭಾವಿಯಸಬೇಕೇ?. ಜನರಿಗೆ ಕನಿಷ್ಟ ಮೂಲಭೂತ ಸೌಕರ್ಯಗಳಿಲ್ಲದ ಆಡಳಿತ ವ್ಯವಸ್ಥೆಗೆ ಯಾರು ಕಾರಣ. ಕಳೆದ ಅನೇಕ ತಿಂಗಳುಗಳಿಂದ ಘನತ್ಯಾಜ್ಯ ವಿಲೇವಾರಿ ಸಂಪೂರ್ಣ ಸ್ಥಗಿತಗೊಂಡು ರಸ್ತೆಗಳಲ್ಲಿ ಕಸ, ಚರಂಡಿಗಳಲ್ಲಿ ಕೊಳಚೆಯಿಂದ ನಗರ ಗಬ್ಬು ನಾರುತ್ತಿದೆ. ಡೆಂಗ್ಯೂ, ಮಲೇರಿಯಾ ಮತ್ತಿತರ ಸಾಂಕ್ರಾಮಿಕ ರೋಗ ಮತ್ತು ಮಾಧ್ಯಮಗಳ ಟೀಕೆಗಳಿಂದ ಜಿಲ್ಲಾಧಿಕಾರಿಗಳ ಮಧ್ಯ ಪ್ರವೇಶಿಸುವಂತಾಗಿ ನಗರದಲ್ಲಿ ಈಗ ಒಂದಷ್ಟು ಸ್ವಚ್ಛತೆ ಕಾರ್ಯ ಕೈಗೊಳ್ಳುವಂತಾಗಿದೆ.
ಆದರೆ, ರಸ್ತೆ ದುರಸ್ತಿಗೂ ಜಿಲ್ಲಾಧಿಕಾರಿಗಳೇ ಮಧ್ಯ ಪ್ರವೇಶಿಸಬೇಕೇ? ಎಲ್ಲದ್ದಕ್ಕೂ ಅಧಿಕಾರಿಗಳೇ ಮಧ್ಯ ಪ್ರವೇಶಿಸಬೇಕು ಎನ್ನುವುದಾದರೇ ಈ ಜನಪ್ರತಿನಿಧಿಗಳು ಇರುವುದಾದರೂ ಏಕೆ?. ಕೇವಲ ಗುತ್ತೇದಾರಿಕೆ, ಕಮಿಷನ್ ಪಡೆಯುವ, ಅಧಿಕಾರಿಗಳ ವರ್ಗಾವಣೆಯ ಲಂಚ ಕೇಳುವ ಮತ್ತು ಇನ್ನಿತರ ಮಧ್ಯವರ್ತಿ ಕೆಲಸಕ್ಕಾಗಿಯೇ ಇದ್ದಾರೆಯೇ? ಎಂದು ಜನ ಕೇಳುವ ಮಟ್ಟಕ್ಕೆ ಅಸಮಾಧಾನಗೊಂಡಿದ್ದಾರೆ. ಪದೇ ಪದೇ ಈ ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದರೂ, ತೆಪೆ ಹಾಕುವ ಕೆಲಸಬಿಟ್ಟರೇ ಶಾಶ್ವತ ಕೆಲಸ ನಡೆಯದಿರುವುದು ಈಗ ನಗರ ಅಭಿವೃದ್ಧಿಗಿಂತ ಅವನತಿಯತ್ತ ಸಾಗಲು ಕಾರಣವಾಗಿದೆ.