ಪ್ರತಿದಿನ 10,000 ಎಬಿ-ಎಆರ್‍ಕೆ ಕಾರ್ಡ್ ವಿತರಿಸಿ:ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್

ಕಲಬುರಗಿ.ಆ.05:ದಿನಕ್ಕೆ 10,000 ಸಾವಿರದಷ್ಟು ಆಯುಷ್ಯಾನ್ ಭಾರತ್- ಆರೋಗ್ಯ ಕರ್ನಾಟಕ ಕಾರ್ಡ್‍ಗಳನ್ನು ವಿತರಿಸುವ ಗುರಿ ಸಾಧಿಸಬೇಕೆಂದು ಜಿಲ್ಲಾಧಿಕಾರಿಗಳಾದ ಯಶವಂತ್ ವಿ.ಗುರುಕರ್ ಅವರು ಸೂಚಿಸಿದರು.
ಶುಕ್ರವಾರದಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನ, ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನಾಚರಣೆಯ ಜಿಲ್ಲಾ ಸಮಿತಿ ಚಲನಾ ಸಭೆ, ಜಿಲ್ಲಾ ಆರೋಗ್ಯ ಅಭಿಯಾನ ಸಭೆ ಸೇರಿದಂತೆ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡುತ್ತಿದ್ದರು.
ವಿವಿಧ ಇಲಾಖೆಗಳ ನೆರೆವಿನೊಂದಿಗೆ ಕಲಬುರಗಿ ಜಿಲ್ಲೆಯಲ್ಲಿನ ಎಲ್ಲಾ ಗ್ರಾಮಗಳಲ್ಲಿ ಎಬಿ-ಎಆರ್‍ಕೆ ಕಾರ್ಡ್‍ಗಳನ್ನು ಒಂದು ತಿಂಗಳಲ್ಲಿ ವಿತರಿಸುವ ಗುರಿ ಸಾಧಿಸಬೇಕು. ಗ್ರಾಮ ಮಟ್ಟದಲ್ಲಿ ಕ್ಯಾಂಪ್‍ಗಳ ತೆರೆದು ಕಾರ್ಡ್ ವಿತರಿಸಬೇಕು ಎಂದು ಸಲಹೆ ನೀಡಿದರು.
ಕುಷ್ಠರೋಗ: ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಲಬುರಗಿ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿಯಲ್ಲಿ ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನವನ್ನು ಸೆಪ್ಟೆಂಬರ್ 12 ರಿಂದ 29ರವರೆಗೆ ಮಾಡುವ ಮೂಲಕ ಕುಷ್ಠರೋಗದ ಬಗ್ಗೆ ಅರಿವು ಮೂಡಿಸಬೇಕು. ಈ ಮೂಲಕ ಭಾರತವನ್ನು ಕುಷ್ಠರೋಗ ಮುಕ್ತ ಮಾಡಲು ಸರ್ವ ಪ್ರಯತ್ನ ಮಾಡೋಣ ಎಂದು ಕರೆ ನೀಡಿದರು.
ನಿಮ್ಮ ಮನೆಗೆ ಭೇಟಿ ನೀಡುವ ಆರೋಗ್ಯ ಸಹಾಯಕರು, ಆಶಾ ಮತ್ತು ಸ್ವಯಂ ಸೇವಕರಿಂದ ಪರೀಕ್ಷೆ ಮಾಡಿಸಿಕೊಳ್ಳಿ, ಹೆಚ್ಚಿನ ಮಾಹಿತಿಗಾಗಿ ಉಚಿತ ಆರೋಗ್ಯ ಸಹಾಯವಾಣಿ 104ಕ್ಕೆ ಕರೆ ಮಾಡುವಂತೆ ತಿಳಿಸಿದರು.
ಜುಲೈ 18ರಿಂದ ಆಗಸ್ಟ್ 15ರವರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಹಮ್ಮಿಕೊಂಡಿದ್ದು, ಎಲ್ಲರೂ ಒಗ್ಗೂಡಿ ಶ್ರಮಿಸುವ ಮೂಲಕ ಕರ್ನಾಟಕವನ್ನು ಕ್ಷಯ ಮುಕ್ತ ರಾಜ್ಯವನ್ನಾಗಿಸಲು ಎಲ್ಲಾ ಶ್ರಮಿಸಬೇಕು ಎಂದರು.
ಜಂತುಹುಳು: ಆಗಸ್ಟ್ 10ರಂದು 1 ರಿಂದ 19 ವರ್ಷ ವಯಸ್ಸಿನ ಎಲ್ಲಾ ಮಕ್ಕಳಿಗೆ ಜಂತುಹುಳು ನಾಶಕ ಮಾತ್ರೆಯನ್ನು ಎಲ್ಲಾ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಉಚಿತವಾಗಿ ನೀಡಲಾಗುತ್ತಿದೆ. ದಾಖಲಾಗದ ಹಾಗೂ ಶಾಲೆಯಿಂದ ಹೊರೆಗುಳಿದ ಮಕ್ಕಳಿಗೂ ಜಂತುಹುಳು ನಾಶಕ ಮಾತ್ರೆಯನ್ನು ಅಂಗನವಾಡಿ ಕೇಂದ್ರಗಳಲ್ಲೇ ನೀಡಲಾಗುತ್ತಿದೆ. ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದಂದು ಜಂತುಹುಳು ನಾಶಕ ಮಾತ್ರೆ ನೀಡದೇ ಬಾಕಿ ಇರುವ ಮಕ್ಕಳಿಗೆ ಆಗಸ್ಟ್ 17 ರಂದು ನಿರ್ಮೂಲನಾ ದಿನದಂದು ಈ ಮಾತ್ರೆಯನ್ನು ಕಡ್ಡಾಯವಾಗಿ ನೀಡಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ ಹಾಗೂ ಜಂತುಹುಳು ನಿವಾರಣಾ ದಿನದ ಪೋಸ್ಟರ್‍ಗಳು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಜಶೇಖರ್ ಮಾಲಿ, ಆರ್.ಸಿ.ಎಚ್ ಅಧಿಕಾರಿ ಡಾ. ಪ್ರಭುಲಿಂಗ ಮಾನಕರ್, ಜಿಲ್ಲಾ ಸರ್ಜನ್ ಡಾ.ಅಂಬರಾಯ ರುದ್ರವಾಡಿ, ಜಿಲ್ಲಾ ಕುಷ್ಠರೋಗÀ ನಿಯಂತ್ರಣಾಧಿಕಾರಿ ಡಾ.ರಾಜಕುಮಾರ್ ಕುಲಕರ್ಣಿ, ವಿವಿಧ ಇಲಾಖೆ ಅಧಿಕಾರಿಗಳು, ತಾಲ್ಲೂಕು ವೈದ್ಯಾಧಿಕಾರಿಗಳು ಮುಂತಾದವರು ಹಾಜರಿದ್ದರು.