ಪ್ರತಿದಿನ ೩,೦೦೦ ಮಂದಿ ಗಂಟಲು ದ್ರವ ಪರೀಕ್ಷೆ: ಡಿಸಿ


ಉಡುಪಿ, ಎ.೨೦- ಕೋವಿಡ್-೧೯ಗೆ ಸಂಬಂಧಿಸಿ ಉಡುಪಿ ಜಿಲ್ಲೆಯಲ್ಲಿ ಪ್ರತಿದಿನ ೩,೦೦೦ ಮಂದಿಯ ಗಂಟಲು ದ್ರವ ಪರೀಕ್ಷೆ ಮಾಡಲಾಗುತ್ತಿದೆ. ಇದರಿಂದ ಪಾಸಿಟಿವ್ ಪ್ರಕರಣಗಳು ೧೦೦ ದಾಟುತ್ತಿದೆ. ನಮ್ಮಲ್ಲಿ ಕೇವಲ ಒಂದೇ ಪ್ರದೇಶದಲ್ಲಿ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿಲ್ಲ. ಎಲ್ಲ ಕಡೆಗಳಲ್ಲೂ ಪ್ರಕರಣಗಳು ಬೆಳಕಿಗೆ ಬರುತ್ತಿವೆಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಸೋಮವಾರ ಪರ್ಕಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮನೆಯವರ ಹಿತದೃಷ್ಟಿಯಿಂದ ಬೆಂಗಳೂರಿನಿಂದ ಜಿಲ್ಲೆಗೆ ಆಗಮಿ ಸುವವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕು. ಈ ಸಂಬಂಧ ಸಹಾಯ ವಾಣಿಗೆ ಕರೆ ಮಾಡಿದರೆ ಪರೀಕ್ಷೆಗೆ ಅಗತ್ಯವಿರುವ ಎಲ್ಲ ವ್ಯವಸ್ಥೆ ಮಾಡಲಾಗುವುದು ಎಂದರು. ಜಿಲ್ಲೆಯಲ್ಲಿ ಐದು ಪಾಸಿಟಿವ್ ಪ್ರಕರಣಗಳು ಕಂಡು ಬಂದ ಪರಿಸರದಲ್ಲೂ ಮೈಕ್ರೋ ಕಂಟೋನ್ಮೆಂಟ್ ಝೋನ್ ಘೋಷಿಸಲಾಗುವುದು. ಎ.೧೯ರಂದು ಕುಂದಾಪುರ ಹಾಗೂ ಕಾರ್ಕಳದಲ್ಲಿ ತಲಾ ಒಂದು ಮೈಕ್ರೋ ಕಂಟೋನ್ಮೆಂಟ್ ಝೋನ್ ಮಾಡಲಾಗಿದೆ. ಎರಡು ದಿನದಲ್ಲಿ ಮಣಿಪಾಲದ ಎಂಐಟಿ ಕಂಟೈನ್ಮೆಂಟ್ ಮುಕ್ತವಾಗಲಿದೆ. ಜಿಲ್ಲೆಯಲ್ಲಿ ಐಸಿಯು, ವೆಂಟಿಲೇಟರ್, ಆಕ್ಸಿಜನ್‌ಗೆ ಯಾವುದೇ ಕೊರತೆ ಇಲ್ಲ. ಎಲ್ಲ ವ್ಯವಸ್ಥೆ ಕೂಡ ನಮ್ಮಲ್ಲಿ ಇದೆ ಎಂದು ಅವರು ಹೇಳಿದರು.