ಪ್ರತಿದಿನ ಅಂಗಡಿ ತೆರೆಯಲು ಅನುಮತಿ ನೀಡಿ-ಚಿಂಚೋರೆ

ಧಾರವಾಡ ಮೇ.28-: ಜಿಲ್ಲೆಯಲ್ಲಿ ಕಿರಾಣಿ ಮತ್ತು ಮಾಂಸದ ಅಂಗಡಿಗಳನ್ನು ಪ್ರತಿದಿನ ಬೆಳಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆವರೆಗೆ ತೆರೆಯಲು ಅವಕಾಶ ಕಲ್ಪಿಸಬೇಕು ಎಂದು ಎಐಸಿಸಿ ಸದಸ್ಯ, ಹಿರಿಯ ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಅವರು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಜಿಲ್ಲೆಯಾದ್ಯಂತ ಕೋವಿಡ್-19 ಸೋಂಕು ಹರಡದಂತೆ ಪರಿಣಾಮಕಾರಿ ಅನುಸರಣಾ ಕ್ರಮ ಜರುಗಿಸಲು ಮತ್ತು ಸಾರ್ವಜನಿಕರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಮುಂಜಾಗೃತಾ ಕ್ರಮವಾಗಿ ಜಿಲ್ಲೆಯಾದ್ಯಂತ ಮೇ. 24 ರ ಬೆಳಿಗ್ಗೆ 6 ಗಂಟೆಯಿಂದ ಜೂ.7 ರ ಬೆಳಗ್ಗೆ 6 ಗಂಟೆಯವರೆಗೆ ಲಾಕ್‍ಡೌನ್ ಮಾಡಲಾಗಿದೆ.ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ದಿ.27ರಿಂದ 29 ರವರೆಗೆ ಕೇವಲ 3 ದಿನ ಮಾತ್ರ ಬೆಳಿಗ್ಗೆ 6 ಗಂಟೆಯಿಂದ ಅಪರಾಹ್ನ 12 ಗಂಟೆಯವರೆಗೆ ಕಿರಾಣಿ ಹಾಗೂ ಮಾಂಸ ಪದಾರ್ಥಗಳ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ.
ಈ ಮೂರು ದಿನಗಳ ಅವಕಾಶದ ನಂತರ ಕಠಿಣ ಲಾಕ್‍ಡೌನ್ ಅವಧಿ ಪೂರ್ಣಗೊಂಡ ಬಳಿಕ ಜೂ. 7 ರ ನಂತರವೇ ಈ ವಸ್ತುಗಳು ದೊರೆಯಲಿವೆ ಎಂದು ಆದೇಶಿಸಲಾಗಿದೆ.ಇದರಿಂದ ಸಾರ್ವಜನಿಕರು ಈ ಮೂರು ದಿನಗಳ ನಿಗದಿತ ಸಮಯದಲ್ಲಿ ಕಿರಾಣಿ ಮತ್ತು ಮಾಂಸ ಖರೀದಿಸಲು ಮುಂದಾಗುತ್ತಾರೆ. ಬರೀ ಮೂರು ದಿನಗಳಲ್ಲಿ ಮಾತ್ರ ಅವಕಾಶ ಇದೆ ಎಂಬ ಕಾರಣದಿಂದ ಮಾರುಕಟ್ಟೆ ಪ್ರದೇಶಗಳಲ್ಲಿ ಜನಸಂದಣಿ ಉಂಟಾಗಲಿದೆ. ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಸೇರಿದಂತೆ ಇನ್ನಿತರ ಸುರಕ್ಷತಾ ಕ್ರಮಗಳ ಪಾಲನೆ ಅಸಾಧ್ಯವಾಗುತ್ತದೆ. ಇದರಿಂದ ವ್ಯಾಪಾರಸ್ಥರು ಮತ್ತು ಸಾರ್ವಜನಿಕರಲ್ಲಿ ಮತ್ತ?À್ಟು ಆತಂಕ ಹೆಚ್ಚಳವಾಗಲಿದೆ.ಆದ್ದರಿಂದ ಈ ಮೂರು ದಿನಗಳಲ್ಲಿ ಮಾತ್ರ ಖರೀದಿಗೆ ಅವಕಾಶ ನೀಡುವ ಬದಲು ಪ್ರತಿದಿನ ಖರೀದಿಗೆ ಇದೇ ಸಮಯ ನಿಗದಿಪಡಿಸಬೇಕು. ಇದರಿಂದ ಸಾರ್ವಜನಿಕರು ಮತ್ತು ವ್ಯಾಪಾರಸ್ಥರು ಯಾವುದೇ ಆತಂಕ ಉಂಟಾಗಲಾರದು.
ಆದ್ದರಿಂದ ಪ್ರತಿದಿನ ಬೆಳಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆವರೆಗೆ ಖರೀದಿಸಲು ಮಾರ್ಗಸೂಚಿಯಲ್ಲಿ ತಿದ್ದುಪಡಿ ಮಾಡಿ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.ಇದೇ ರೀತಿ ಹೊಟೆಲ್ ಮತ್ತು ಬೇಕರಿಗಳನ್ನು ತೆರೆದು ಪಾರ್ಸಲ್ ಒಯ್ಯಲು ಅವಕಾಶ ನೀಡಬೇಕು. ಇದರಿಂದ ಸಾರ್ವಜನಿಕರಿಗೂ ಅನುಕೂಲ ಮತ್ತು ಇದನ್ನೇ ಅವಲಂಬಿಸಿ ಬದುಕಿರುವ ಹೊಟೆಲ್ ಮಾಲಕರು ಹಾಗೂ ಕಾರ್ಮಿಕರ ಬದುಕಿಗೂ ಅನುಕೂಲ ಆಗಲಿದೆ. ಈ ಕುರಿತು ಜಿಲ್ಲಾಡಳಿತ ತನ್ನ ಮಾರ್ಗಸೂಚಿಯಲ್ಲಿ ರಿಯಾಯಿತಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.