ಪ್ರತಾಪ ಸಿಂಹ ಹೇಳಿಕೆಗೆ ಜಗದೇವ ಗುತ್ತೇದಾರ ಆಕ್ರೋಶ

ಕಲಬುರಗಿ,ನ.19-ಮೈಸೂರು ಲೋಕಸಭೆ ಸದಸ್ಯ ಪ್ರತಾಪ ಸಿಂಹ ಅವರು, ಶಾಸಕ, ಮಾಜಿ ಸಚಿವ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಎಂ. ಖರ್ಗೆ ಅವರ ಬಗ್ಗೆ ಹಗುರವಾಗಿ ಹೇಳಿಕೆ ನೀಡುತ್ತಿರುವದನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ ಕಾಳಗಿ ತೀವ್ರವಾಗಿ ಖಂಡಿಸಿದ್ದಾರೆ.
ಸಂಸದ ಪ್ರತಾಪ ಸಿಂಹ ಅವರು ಪ್ರಿಯಾಂಕ್ ಖರ್ಗೆ ಅವರಿಗೆ ಅಪ್ಪನ ನೆರಳು ಎಂದು ಟೀಕಿಸಿರುವುದು ಸರಿಯಲ್ಲ. ಪ್ರತಾಪ ಸಿಂಹ ಅವರು ಹುಟ್ಟುತ್ತಲೇ ತನ್ನ ಕೈಯಿಂದ ತಾನು ಊಟ ಮಾಡಿಲ್ಲ. ಎಲ್ಲರೂ ತಂದೆ-ತಾಯಿ ನೆರಳು ಹಾಗೂ ಮಾರ್ಗದರ್ಶನದಲ್ಲೇ ಬೆಳೆಯುತ್ತಾರೆ. ಆದರೆ, ಪ್ರತಾಪಸಿಂಹ ಅವರು ತಂದೆ-ತಾಯಿ ನೆರಳಿನಲ್ಲಿ ಬೆಳೆದಿದ್ದಾರೋ ಅಥವಾ ಬೇರೆ ಯಾರೋ ನೆರಳಿನಲ್ಲಿ ಬೆಳೆದಿದ್ದಾರೋ ಗೊತ್ತಿಲ್ಲ ಎಂದು ಕಿಡಿ ಕಾರಿದ್ದಾರೆ.
ಅದೇ ರೀತಿ ಪ್ರಿಯಾಂಕ್ ಎಂ. ಖರ್ಗೆ ಅವರು ಯಾವ ಲಿಂಗಕ್ಕೆ ಸೇರಿದವರಾಗಿದ್ದಾರೆ ಎಂದು ಕೂಡಾ ಪ್ರತಾಪ ಸಿಂಹ ನೀಡಿದ ಹೇಳಿಕೆ ಹಾಸ್ಯಸ್ಪದವಾಗಿದೆ. ಪ್ರತಾಪ ಸಿಂಹ ಅವರು ಪ್ರಿಯಾಂಕ್ ಎಂ. ಖರ್ಗೆಯವರ ಹತ್ತಿರ ಸಮಯ ಕೇಳಿಕೊಂಡು ಬಂದು ಪ್ರಿಯಾಂಕ್ ಎಂ. ಖರ್ಗೆ ಗಂಡೋ ಹೆಣ್ಣೋ ಎಂಬುದು ಪರೀಕ್ಷಿಸಿಕೊಂಡು ಹೊಗಲಿ ಅಂದಾಗ ಮಾತ್ರ ಪ್ರತಾಪಸಿಂಹ ಅವರಿಗೆ ಅರ್ಥವಾಗುತ್ತದೆ ಎಂದು ತಿವಿದಿದ್ದಾರೆ.
ಪ್ರತಾಪ ಸಿಂಹ ಅವರು ಹೇಳಿಕೆ ನೀಡುವಾಗ ತಮ್ಮ ಪ್ರಚಾರಕ್ಕಾಗಿ ಕೀಳುಮಟ್ಟದ ಶಬ್ದಗಳನ್ನು ಉಪಯೋಗಿಸಿ ನಾಲಿಗೆ ಹರಿಬಿಡುವದನ್ನು ಬಿಟ್ಟು ಸರಿಯಾದ ಹೇಳಿಕೆ ನೀಡಬೇಕೆಂದು ಎಚ್ಚರಿಸಿದ್ದಾರೆ.