ಬೆಂಗಳೂರು,ಜೂ.೨೦:ಬಿಜೆಪಿಯ ಸಂಸದ ಪ್ರತಾಪ್‌ಸಿಂಹ ಅವರಿಗೆ ಚೇಲಾಗಿರಿ ಮಾಡಿ ಅಭ್ಯಾಸವಿರಬೇಕು. ಹಾಗಾಗಿ, ನನ್ನಂತಹ ಕೆಲ ಸಚಿವರನ್ನು ಅವರು ಸಿದ್ದದರಾಮಯ್ಯನವರ ಚೇಲಾಗಳು ಎಂದು ಹೇಳುತ್ತಿದ್ದಾರೆ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಪ್ರತಾಪ್‌ಸಿಂಹಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಾಪ್‌ಸಿಂಹ ಅವರು, ಸಿದ್ದರಾಮಯ್ಯರವರು ನನ್ನ ಹೆಗಲ ಮೇಲೆ ಬಂದೂಕವನ್ನಿಟ್ಟು ಬೇರೆಯವರತ್ತ ಹೊಡೆಯುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ನಾನು ವಿಜಯಪುರದವನು ಯಾರಿಗಾದರೂ ಹೊಡೆಯಬೇಕಾದರೆ ನೇರವಾಗಿ ಹೊಡೆಯುವ ತಾಕತ್ತು ನನಗಿದೆ ಎಂದರು.
ನನ್ನನ್ನು ಸಿದ್ದರಾಮಯ್ಯರವರು ಚೇಲಾ ಎಂದು ಪ್ರತಾಪ್‌ಸಿಂಹ ಹೇಳಿದ್ದಾರೆ. ಈ ಪ್ರತಾಪ್‌ಸಿಂಹ ಸಂತೋಷ್ ಸಾಕಿಕೊಂಡಿರುವ ಒಂದು ಚೇಳು, ಸಂತೋಷ್ ಬುಟ್ಟಿಯಲ್ಲಿ ಇಂತಹ ಹಲವು ಚೇಳುಗಳಿವೆ. ಇವತ್ತು ಅವರಿಗೆ ಕಡಿಯಲಿ, ನಾಳೆ ಇವರಿಗೇ ಕಡಿಯಲಿ ಎಂದು ಸಂತೋಷ್ ಚೇಳು ಬಿಡುತ್ತಾರೆ ಅನಿಸುತ್ತದೆ. ಇಂತ ಚೇಳುಗಳನ್ನು ಬಿಟ್ಟು ಬಿ.ಎಲ್ ಸಂತೋಷ್ ಮಜಾ ತೆಗೆದುಕೊಳ್ಳುತ್ತಿದ್ದಾರೆ ಎಂದು ಕುಟುಕಿದರು.
ಬಿಜೆಪಿಯ ಬಿ.ಎಲ್ ಸಂತೋಷ್ ವಿರುದ್ಧ ಮಾತನಾಡಿದ ತಕ್ಷಣ ನಾನು ಇಡೀ ಬ್ರಾಹ್ಮಣ ಸಮುದಾಯವನ್ನು ನಿಂದಿಸಿದ್ದೇನೆ ಎಂದು ಹೇಳುತ್ತಿರುವುದು ಸರಿಯಲ್ಲ, ನನ್ನ ಮತ್ತು ಬ್ರಾಹ್ಮಣ ಸಮುದಾಯದ ಸಂಬಂಧ ಎಷ್ಟು ಮಧುರವಾಗಿದೆ ಎಂಬುದನ್ನು ಪ್ರತಾಪ್‌ಸಿಂಹ್ ವಿಜಯಪುರಕ್ಕೆ ಬಂದು ನೋಡಲಿ, ನನ್ನ ವಿರುದ್ಧ ವೈಯಕ್ತಿಕ ಟೀಕೆ ಮಾಡುವುದನ್ನು ನಿಲ್ಲಿಸಲಿ. ಇವರ ಕೀಳು ಟೀಕೆಗಳಿಗೆಲ್ಲ ನಾನು ತಲೆ ಕೆಡಿಸಿಕೊಳ್ಳಲ್ಲ. ನಾನು ಎಂದೂ ಬ್ರಾಹ್ಮಣ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿಲ್ಲ. ರಾಜಕೀಯವಾಗಿ ಸಂತೋಷ್‌ರವರನ್ನು ಟೀಕೆ ಮಾಡಿದ್ದೇನಷ್ಟೇ ಎಂದರು.
ನನ್ನದು ಚಿಲ್ಲರೆ ಖಾತೆ ಎಂದು ಪ್ರತಾಪ್‌ಸಿಂಹ ಹೇಳಿದ್ದಾರೆ. ಕೈಗಾರಿಕೆ ಖಾತೆಯ ಮಹತ್ವದ ಬಗ್ಗೆ ಅವರು ಪ್ರಧಾನಿ ಮೋದಿ ಅವರು ಬಳಿ ಕೇಳಿ ತಿಳಿದುಕೊಳ್ಳಲಿ. ಖಾತೆ ಯಾವುದಾದರೂ ನಾವು ಮಾಡುವ ಕೆಲಸ ಮುಖ್ಯ. ಇದು ಪ್ರತಾಪ್‌ಸಿಂಹನಂತಹ ಸಂಸದರಿಗೆ ಗೊತ್ತಿಲ್ಲದಿರುವುದು ವಿಷಾದನೀಯ ಎಂದು ವ್ಯಂಗ್ಯವಾಡಿದರು.