ಪ್ರಣಾವನಂದ್ ಶ್ರೀಗಳಿಗೆ ಅವಮಾನ: ಡಾ. ತಿಮ್ಮೇಗೌಡ ಹೇಳಿಕೆ ಹಿಂಪಡೆಯಲು ಒತ್ತಾಯ

ಕಲಬುರಗಿ:ಸೆ.21:ಹಾವೇರಿ ಸಮೀಪದ ಅರೆ ಮಲ್ಲಾಪೂರದ ಶ್ರೀ ಶರಣಬಸವೇಶ್ವರ್ ಪೀಠ ಮತ್ತು ಕರದಾಳು ಬ್ರಹ್ಮಶ್ರೀ ನಾರಾಯಣಗುರುಗಳ ಶಕ್ತಿ ಪೀಠದ ಪ್ರಣವಾನಂದ್ ಸ್ವಾಮೀಜಿ ಅವರು ಆರ್ಯ ಈಡಿಗ ಸಮಾಜದ ಗುರುಗಳೇ ಅಲ್ಲ ಎಂಬ ಹೇಳಿಕೆಯನ್ನು ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ಡಾ. ತಿಮ್ಮೇಗೌಡ ಅವರು ಕೂಡಲೇ ಹಿಂಪಡೆಯಬೇಕು ಎಂದು ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿಯ ಮುಖಂಡ ಹಾಗೂ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ರಾಜ್ಯ ಕಾರ್ಯಕಾರಿ ಸದಸ್ಯ ಸತೀಶ್ ವಿ. ಗುತ್ತೇದಾರ್ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದ ರಾಜ್ಯಾಧ್ಯಕ್ಷ ಡಾ. ತಿಮ್ಮೇಗೌಡ ಅವರು ಬೆಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಕಳೆದ 20ರಂದು ಸುದ್ದಿಗೋಷ್ಠಿ ಮಾಡಿ, ಪ್ರಣವಾನಂದ್ ಸ್ವಾಮೀಜಿ ಅವರು ಈಡಿಗ ಸಮಾಜದ ಗುರುಗಳಲ್ಲ ಎಂದು ಹೇಳಿದ್ದು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನೂ ಸಹ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಇದ್ದೇನೆ. ಸುದ್ದಿಗೋಷ್ಠಿ ಮಾಡುವ ಮುನ್ನ ಡಾ. ತಿಮ್ಮೇಗೌಡ ಅವರು ನನಗೆ ಮಾಹಿತಿ ಕೊಡಬೇಕಾಗಿತ್ತು. ಪದಾಧಿಕಾರಿಗಳನ್ನು ಸಹ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಪಕ್ಷೀಯವಾಗಿ ಗುರುಗಳ ಕುರಿತು ಅವಹೇಳನ ಮಾಡಿದ್ದಾರೆ ಎಂದು ಅವರು ಕಿಡಿಕಾರಿದರು.
ಕಳೆದ ಮೂರು ವರ್ಷಗಳ ಹಿಂದೆ ಗಂಗಾವತಿ ಹೇಮಗುಡ್ಡದಲ್ಲಿ ಈಡಿಗ ಸಮಾಜದ ಎಲ್ಲ ಪಂಗಡಗಳ ಸಮಾವೇಶದ ಮೂಲಕ ಚಿಂತನ, ಮಂಥನ ಜರುಗಿತ್ತು. ಆಗ ಡಾ. ತಿಮ್ಮೇಗೌಡ, ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಜಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ಬೇಳೂರು ಗೋಪಾಲಕೃಷ್ಣ ಸೇರಿದಂತೆ ಸಮಾಜದ ಮುಖಂಡರು ಪಾಲ್ಗೊಂಡಿದ್ದರು. ಆಗ ಸಾನಿಧ್ಯವನ್ನು ಡಾ. ಪ್ರಣವಾನಂದ್ ಸ್ವಾಮೀಜಿ ವಹಿಸಿದ್ದರು. ಆಗ ಸಮಾಜದ ಗುರುಗಳಾಗಿದ್ದು, ಈಗ ಸಮಾಜದ ಗುರುಗಳಲ್ಲ ಎಂದು ಹೇಳಿದ್ದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು.
ಪ್ರಣವಾನಂದ್ ಸ್ವಾಮೀಜಿ ಅವರು ಶ್ರೀ ಶರಣಬಸವೇಶ್ವರ್ ಸಂಸ್ಥಾನ ಪೀಠಾಧಿಪತಿ ಡಾ. ಶರಣಬಸಪ್ಪ ಅಪ್ಪಾ ಅವರಿಂದ ವೀರಶೈವ ಪರಂಪರೆಯ ದೀಕ್ಷೆ ಪಡೆದು ಸನ್ಯಾಸತ್ವ ಸ್ವೀಕರಿಸಿದ್ದಾರೆ. ಈಡಿಗ ಸಮಾಜವೂ ಸೇರಿದಂತೆ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಕಲ್ಯಾಣಕ್ಕಾಗಿ ಅವರು ಪರಿಶ್ರಮಿಸುತ್ತಿದ್ದಾರೆ ಅದರಲ್ಲಿಯೂ ಈಡಿಗ ಸಮಾಜದ ಕುಲಕಸುಬು ಕಸಿದುಕೊಂಡ ಸರ್ಕಾರದ ವಿರುದ್ಧ ಕಲ್ಯಾಣ ಕರ್ನಾಟಕದಿಂದಲೇ ಹೋರಾಟ ಮಾಡಿದ್ದಾರೆ. ಚಿತ್ತಾಪುರ ತಾಲ್ಲೂಕಿನ ಕರದಾಳ್‍ದಿಂದ 81 ಕಿ.ಮೀ. ಪಾದಯಾತ್ರೆ ಮಾಡಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಆದಾಗ್ಯೂ, ಅವರು ಸಮಾಜದ ಗುರುಗಳಲ್ಲ ಎಂಬ ಹೇಳಿಕೆ ಖಂಡನಾರ್ಹವಾಗಿದೆ ಎಂದು ಅವರು ತಿಳಿಸಿದರು.
ವಿಖ್ಯಾತಾನಂದ್ ಸೋಲೂರ್ ಶ್ರೀಗಳು ಈಡಿಗ ಸಮಾಜದ ಗುರುಗಳು ಎಂದು ಡಾ. ತಿಮ್ಮೇಗೌಡ ಅವರು ಹೇಳಿದ್ದಾರೆ. ಅವರೂ ಸಹ ನಮ್ಮ ಸಮಾಜದ ಗುರುಗಳೇ. ಅವರಿಗೆ ಬಿಟ್ಟು ಇನ್ನೂ ನಾಲ್ಕೈದು ಸ್ವಾಮೀಜಿಗಳಿದ್ದಾರೆ. ಅದೇ ರೀತಿ ಪ್ರಣವಾನಂದ್ ಸ್ವಾಮೀಜಿ ಅವರು ಎಲ್ಲಿಯೂ ಕೂಡ ನಾನೇ ಸಮಾಜದ ಗುರುಗಳು. ನಾನೇ ಸರ್ವಾಧಿಕಾರಿ ಎಂದು ಹೇಳಿಲ್ಲ. ಕಲ್ಯಾಣ ಕರ್ನಾಟಕದ ಪ್ರತಿ ಗ್ರಾಮಕ್ಕೆ ಭೇಟಿ ನೀಡಿ ತೊಂದರೆಯನ್ನು ಅರ್ಥ ಮಾಡಿಕೊಂಡಿದ್ದಾರೆ. ಏಪ್ರಿಲ್, ಮೇನಲ್ಲಿ 81 ಕಿ.ಮೀ. ಪಾದಯಾತ್ರೆಯನ್ನು ಕಲ್ಯಾಣ ಕರ್ನಾಟಕದಲ್ಲಿ ಮಾಡಿದರು. ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿ, ಒಂದು ತಿಂಗಳಿನ ನಂತರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು. ಸಮಾಜದ ಜನರು ಆದಿವಾಸಿಗಳಿಗಿಂತ ಕಟ್ಟ ಕಡೆಯಲ್ಲಿದ್ದಾರೆ. ಊರಲ್ಲಿ ಮನೆ ಇಲ್ಲ. ಊರ ಹೊರಗಡೆ ಹೊಲ ಇಲ್ಲ. ಹೀಗಾಗಿ ಕುಲಕಸುಬು ಕಳೆದುಕೊಂಡವರಿಗೆ ಪರ್ಯಾಯ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಹೋರಾಟ ಮಾಡಿದ್ದಾರೆ ಎಂದು ಅವರು ಹೇಳಿದರು.
ಸಮಾಜ ಒಡೆಯುವಂತಹ ಯಾವುದೇ ಹೇಳಿಕೆಯನ್ನು ಡಾ. ತಿಮ್ಮೇಗೌಡ ಅವರು ಕೊಡಬಾರದು. ಪ್ರಣವಾನಂದ್ ಸ್ವಾಮೀಜಿ ಅವರ ಅವಹೇಳನವನ್ನು ಕೂಡಲೇ ನಿಲ್ಲಿಸಬೇಕು. ಹೇಳಿಕೆ ಕುರಿತು ಸ್ಪಷ್ಟೀಕರಣ ಕೊಡಬೇಕು. ಇಲ್ಲದೇ ಹೋದಲ್ಲಿ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ರಾಘವೇಂದ್ರಗೌಡ, ನಾಗರಾಜಗೌಡ ಮಾನಸಗರ್, ಮಹಾದೇವ್ ಗುತ್ತೇದಾರ್, ಬಾಲಯ್ಯ ಕರದಾಳ್ ಮುಂತಾದವರು ಉಪಸ್ಥಿತರಿದ್ದರು.