ಪ್ರಜ್ವಲ್ ರೇವಣ್ಣ ರಾಸಲೀಲೆ ಪ್ರಕರಣ: ಸಮಗ್ರ ತನಿಖೆಗೆ ಮುಖ್ಯಮಂತ್ರಿಗಳಿಗೆ ಪ್ರಜ್ಞಾವಂತ ನಾಗರಿಕರ ಬಹಿರಂಗ ಪತ್ರ

ಕಲಬುರಗಿ:ಮೇ.15: ಹಾಸನ್ ಸಂಸದ ಪ್ರಜ್ವಲ್ ರೇವಣ್ಣ ಅವರ ರಾಸಲೀಲೆ ಪ್ರಕರಣವನ್ನು ಎರಡು ತಿಂಗಳೊಳಗೆ ವಿಶೇಷ ತನಿಖಾದಳವು ತನಿಖೆ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿ ಬುಧವಾರ ನಗರದ ಜಗತ್ ವೃತ್ತದಲ್ಲಿನ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಯ ಬಳಿ ಮುಖ್ಯಮಂತ್ರಿಗಳಿಗೆ ಪ್ರಜ್ಞಾವಂತ ನಾಗರಿಕರು ಬರೆದ ಪತ್ರವನ್ನು ಬಹಿರಂಗವಾಗಿ ಪ್ರದರ್ಶಿಸಿದರು.
ರಾಸಲೀಲೆ ಪ್ರಕರಣದ ವಿಡಿಯೋಗಳು ಲಕ್ಷಾಂತರ ಜನರಿಗೆ ತಲುಪಿರುವುದರಿಂದ ಅವು ಯುವಜನರು, ಕಾಮುಕರು ಮತ್ತು ಮಕ್ಕಳ ಮೇಲೆ ಬೀರಬಹುದಾದ ಪರಿಣಾಮ ಘೋರವಾಗಲಿದ್ದು, ಕೂಡಲೇ ಆರೋಪಿ ಪ್ರಜ್ವಲ್ ರೇವಣ್ಣ ಅವರಿಗೆ ಎಲ್ಲಿದ್ದರೂ ಬಂಧಿಸಿ, ಐಟಿ ಮತ್ತು ಐಪಿಸಿ ಕಾಯ್ದೆಯಡಿ ಮೊಕದ್ದಮೆ ಹೂಡಬೇಕು ಎಂದು ಮುಖ್ಯಮಂತ್ರಿಗಳಿಗೆ ಬರೆದ ಬಹಿರಂಗ ಪತ್ರದಲ್ಲಿ ಅವರು ಒತ್ತಾಯಿಸಿದರು.
ಸಂತ್ರಸ್ತ ಮಹಿಳೆಯರು ಯಾವುದೇ ಭೀತಿ ಇಲ್ಲದೇ ದೂರು ನೀಡುವಂತಹ ವಾತಾವರಣ ನಿರ್ಮಾಣ ಮಾಡುವಂತೆ, ಸಂತ್ರಸ್ತ ಮಹಿಳೆಯರಿಗೆ ಧೈರ್ಯ ತುಂಬುವ ಕೆಲಸ ಆಗಬೇಕು. ಸಂತ್ರಸ್ತರಿಗೆ ತೊಂದರೆ ಕೊಡುವ, ದೂರು ನೀಡದಂತೆ ತಡೆಯೊಡ್ಡುವ, ದೂರು ಹಿಂತೆಗೆದುಕೊಳ್ಳುವಂತೆ ಒತ್ತಡ ತರುವ, ಸಂತ್ರಸ್ತರ ಕುರಿತು ಅವಹೇಳನ, ಅಪಪ್ರಚಾರ ಮಾಡುವ, ಸಂತ್ರಸ್ತರ ಮಕ್ಕಳು ಹಾಗೂ ಕುಟುಂಬದವರಿಗೆ ತೊಂದರೆ ನೀಡುವ ಯಾರದೇ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಕುರಿತು ಹೇಳಿಕೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ವಿಶೇಷ ತನಿಖಾದಳದ ತನಿಖೆಯು ಕಾಲಮಿತಿಯಲ್ಲಿ ಪೂರ್ಣಗೊಳ್ಳಬೇಕು. 2018ರಲ್ಲಿ ಜಾರಿಗೆ ತಂದಿರುವ ತಿದ್ದುಪಡಿಯ ಪ್ರಕಾರ ಅತ್ಯಾಚಾರ ಪ್ರಕರಣಗಳ ತನಿಖೆಯನ್ನು ಎರಡು ತಿಂಗಳೊಳಗೆ ಪೂರ್ಣಗೊಳಿಸಬೇಕು. 60 ದಿನಗಳೊಳಗೆ ತನಿಖೆ ಮುಗಿಯದೇ ಇದ್ದಲ್ಲಿ ಆರೋಪಿಗೆ ಜಾಮೀನು ಪಡೆಯಲು ಅವಕಾಶ ಕಲ್ಪಿಸಿದಂತಾಗುತ್ತದೆ. ಹಾಗಾಗಿ ತನಿಖೆಯನ್ನು ಕಾಲಮಿತಿಯಲ್ಲಿ ಮುಗಿಸಬೇಕು ಎಂದು ಅವರು ಒತ್ತಾಯಿಸಿದರು.
ಲೈಂಗಿಕ ಕೃತ್ಯಗಳ ಚಿತ್ರೀಕರಣದಲ್ಲಿ ಪ್ರಜ್ವಲ್ ಜೊತೆಗೆ ಭಾಗಿಯಾದವರಿಗೆ ಪತ್ತೆ ಮಾಡಿ ಅವರ ವಿರುದ್ಧ ಮೊಕದ್ದಮೆ ಹೂಡುವಂತೆ, ವಿಡಯೋಗಳು ತಮ್ಮ ಬಳಿ ಇದ್ದವೆಂದು ಹಲವಾರು ತಿಂಗಳಿಂದ ಹೇಳುತ್ತಿರುವ ಪ್ರಜ್ವಲ್ ರೇವಣ್ಣನ ಕಾರು ಚಾಲಕ ಕಾರ್ತಿಕ್‍ನಿಗೆ ಕೂಡಲೇ ಬಂಧಿಸುವಂತೆ, ವಿಡಿಯೋಗಳು ತಮ್ಮ ಬಳಿ ಇದ್ದವೆಂದು ಹೇಳಿರುವ ಬಿಜೆಪಿ ನಾಯಕ ಬಿ. ದೇವರಾಜೇಗೌಡ ಮತ್ತು ಕಾರ್ತಿಕ್ ಅವರ ವಿರುದ್ಧ ಸೂಕ್ತ ಕಾನೂನುಗಳ ಮೂಲಕ ಮೊಕದ್ದಮೆ ಹೂಡುವಂತೆ ಅವರು ಆಗ್ರಹಿಸಿದರು.
ವಿಡಿಯೋಗಳನ್ನು ಸಾರ್ವಜನಿಕರಿಗೆ ಹಂಚಿದವರ ವಿರುದ್ಧ ಮೊಕದ್ದಮೆ ಹೂಡುವಂತೆ, ವಿಡಿಯೋಗಳ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮತ್ತು ರಾಜ್ಯ ಅಧ್ಯಕ್ಷರಿಗೆ ಬಿ. ದೇವರಾಜೇಗೌಡ ಬರೆದಿರುವುದಾಗಿ ಹೇಳುತ್ತಿರುವ ಪತ್ರಗಳನ್ನು ಆಧರಿಸಿ ಆ ಇಬ್ಬರು ರಾಜಕೀಯ ನಾಯಕರು ಪೋಲಿಸರಿಗೆ ಮಾಹಿತಿ ನೀಡದೇ ಇರುವುದಕ್ಕೆ ಅವರಿಗೂ ಸಹ ಸಂಚಿನ ಭಾಗವಾಗಿ ಪರಿಗಣಿಸುವಂತೆ ಅವರು ಒತ್ತಾಯಿಸಿದರು.
ಕೆಲವು ವಿಡಿಯೋಗಳು ಐದಾರು ವರ್ಷಗಳು ಹಳೆಯದವು ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಹೇಳಿರುವುದು ವರದಿಯಾಗಿದೆ. ಅಷ್ಟು ವರ್ಷಗಳಿಂದ ನಡೆಯುತ್ತಿರುವ ಈ ಲೈಂಗಿಕ ಕೃತ್ಯಗಳನ್ನು ಮುಂದುವರೆಯಲು ಬಿಟ್ಟಿದ್ದರಿಂದ ಕುಟುಂಬಸ್ಥರೆಲ್ಲರ ವಿರುದ್ಧ ಮೊಕದ್ದಮೆ ಹೂಡುವಂತೆ, ಪ್ರಜ್ವಲ್ ತಾಯಿಯನ್ನೂ ಸಹ ವಿಚಾರಣೆಗೆ ಗುರಿಪಡಿಸುವಂತೆ ಅವರು ಆಗ್ರಹಿಸಿದರು.
ಪ್ರಜ್ವಲ್ ರೇವಣ್ಣ ಪರಾರಿಯಾಗಿರುವುದಕ್ಕೆ ಸಂಬಂಧಿಸಿದಂತೆ ವೈಫಲ್ಯತೆ ಹೊಂದಿದ ಗೃಹ ಇಲಾಖೆ ಹಾಗೂ ಗುಪ್ತದಳದ ಸಂಬಂಧಿಸಿದ ಅಧಿಕಾರಿಗಳನ್ನು ವಜಾಗೊಳಿಸಿ ವಿಚಾರಣೆಗೆ ಒಳಪಡಿಸುವಂತೆ, ಕಳೆದ ಒಂದು ವರ್ಷದ ಹಿಂದೆಯೇ ಪ್ರಜ್ವಲ್ ರೇವಣ್ಣ 86 ಮಾಧ್ಯಮ ಸಂಸ್ಥೆಗಳು ಮತ್ತು ಮೂವರು ವ್ಯಕ್ತಿಗಳು ತಮ್ಮ ವಿರುದ್ಧ ಯಾವುದೇ ಮಾನಹಾನಿಕರ ವರದಿ, ವಿಡಿಯೋ, ಚಿತ್ರ ಪ್ರಸಾರ ಮಾಡದಿರುವಂತೆ ತಡೆಯಾಜ್ಞೆ ಪಡೆದಿದ್ದಾರೆ. ಒಬ್ಬ ಜನಪ್ರತಿನಿಧಿ ಹೀಗೆ ದೀರ್ಘಕಾಲದ ತಡೆಯಾಜ್ಞೆಯನ್ನು ಪಡೆಯುವುದು ಜನರ ಮಾಹಿತಿಯ ಹಕ್ಕಿನ ಉಲ್ಲಂಘನೆಯಾಗುತ್ತದೆ. ಕೂಡಲೇ ರಾಜ್ಯ ಸರ್ಕಾರವು ಮೊಕದ್ದಮೆ ಹೂಡಿ ಜನರ ಮಾಹಿತಿ ಹಕ್ಕನ್ನು ಎತ್ತಿ ಹಿಡಿಯಬೇಕು ಎಂದು ಅವರು ಒತ್ತಾಯಿಸಿದರು.
ಹೆಚ್.ಡಿ. ರೇವಣ್ಣ ಕುಟುಂಬವು ಹಾಸನ್ ಜಿಲ್ಲೆಯ ಕಂದಾಯ ಇಲಾಖೆ, ಪೋಲಿಸ್ ಇಲಾಖೆಗಳಲ್ಲಿ ಆಯಕಟ್ಟಿನ ಜಾಗಗಳಲ್ಲಿ ತಮಗೆ ಬೇಕಾದ ಅಧಿಕಾರಿಗಳನ್ನು ನೇಮಕ ಮಾಡಿಕೊಂಡು ಅನೇಕ ಭೂ ವ್ಯವಹಾರಗಳನ್ನು ಮಾಡುತ್ತಿರುವ ಆರೋಪಗಳಿವೆ. ಹಾಗಾಗಿ ಅಂತಹ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡುವಂತೆ ಆಗ್ರಹಿಸಿದ ಅವರು, ತನಿಖೆ ಮುಗಿಯುವವರೆಗೂ ಎಚ್.ಡಿ. ರೇವಣ್ಣ ಅವರ ವಿಧಾನಸಭಾ ಸದಸ್ಯತ್ವವನ್ನು ತಾತ್ಕಾಲಿಕವಾಗಿ ರದ್ದುಪಡಿಸುವಂತೆ ಒತ್ತಾಯಿಸಿದರು.
ಆರೋಪಿಗಳ ನಡೆಯುವ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವಿರೋಧಿ ಕೃತ್ಯವಾಗಿದೆ. ಆ ನಿಟ್ಟಿನಲ್ಲಿ ಸರ್ಕಾರಿ ಬಂಗ್ಲೆಯನ್ನು ಅಪರಾಧ ಕೃತ್ಯಕ್ಕೆ ಬಳಕೆ ಮಾಡಿದ್ದಕ್ಕೆ ಮೊಕದ್ದಮೆ ಹೂಡುವಂತೆ, ಆ ಕುಟುಂಬಕ್ಕೆ ಒದಗಿಸಲಾದ ಎಲ್ಲ ಸರ್ಕಾರಿ ಸೌಲಭ್ಯಗಳನ್ನು ಕೂಡಲೇ ಹಿಂದಕ್ಕೆ ಪಡೆಯುವಂತೆ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಹಗರಣಕ್ಕೆ ತಳುಕು ಹಾಕುವಂತಹ ಯಾವುದೇ ವರದಿ ಮಾಡಬಾರದೆಂದು ನ್ಯಾಯಾಲಯದಿಂದ ತಡೆಯಾಜ್ಞೆ ತಂದು ತಾವೇ ಸುದ್ದಿಗೋಷ್ಠಿ ಮೂಲಕ ಏಕಮುಖ ವರದಿಯನ್ನು ಮಾಡಿಸುತ್ತಿದ್ದಾರೆ. ಹಾಗಾಗಿ ಅವರ ತಡೆಯಾಜ್ಞೆಯನ್ನು ತೆರವುಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ಕೆ. ನೀಲಾ, ಮೌಲಾ ಮುಲ್ಲಾ, ಪಾಂಡುರಂಗ್, ಸುಧಾಮ್ ಧನ್ನಿ, ಪ್ರಭು ಖಾನಾಪೂರೆ, ಶ್ರೀಮಂತ್ ಬಿರಾದಾರ್, ಲವಿತ್ರ, ಸುಜಾತಾ, ಬೃಂದಾ, ಪದ್ಮಾ ಪಾಟೀಲ್, ಶರಣಮ್ಮ, ಶಿವಲಿಂಗಮ್ಮ, ಮೀನಾಕ್ಷಿ, ಪದ್ಮಿಣಿ ಕಿರಣಗಿ ಮುಂತಾದವರು ಪಾಲ್ಗೊಂಡಿದ್ದರು.