ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹ; ಮೇ.೩೦ ಕ್ಕೆ ಹಾಸನ ಚಲೋ


(ಸಂಜೆವಾಣಿ ವಾರ್ತೆ)
ದಾವಣಗೆರೆ.ಮೇ.೨೮: ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರಜ್ವಲ್ ರೇವಣ್ಣನ ಬಂಧನ ಮತ್ತು ಹೆಣ್ಣುಮಕ್ಕಳ ಘನತೆಯ ರಕ್ಷಣೆಗೆ ಆಗ್ರಹಿಸಿ ಇದೇ ಮೇ.೩೦ರಂದು ನಮ್ಮೆಲ್ಲರ ನಡಿಗೆ ಹಾಸನದ ಕಡೆಗೆ ’ಹಾಸನ ಚಲೋ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ಕೆ.ಎಚ್.ಆನಂದರಾಜು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೇ.೨೯ರ ರಾತ್ರಿ ದಾವಣಗೆರೆಯಿಂದ ಹಾಸನಕ್ಕೆ ಹೋಗಿ ಮೇ.೩೦ ರಂದು ಬೆಳಿಗ್ಗೆ ೧೦.೩೦ ಕ್ಕೆ ಅಲ್ಲಿನ ಮಹಾರಾಜ ಪಾಕ್೯ ನಿಂದ ಡಿಸಿ ಕಚೇರಿ ವರೆಗೆ ಮೆರವಣಿಗೆ ನಡೆಸಿ ಅಲ್ಲಿ ಬೃಹತ್ ಬಹಿರಂಗ ಸಭೆ ನಡೆಯಲಿದ್ದು ಈ ಸಭೆಯಲ್ಲಿ ಪ್ರಗತಿಪರರಾದ ಬಿ.ಟಿ ಲಲಿತಾನಾಯ್ಕ್,ವಿಜಯಮ್ಮ,ರೂಪಾ ಹಾಸನ್,ಕೆ.ಎಸ್ ವಿಮಲ ಸೇರಿದಂತೆ ಸಾಹಿತಿಗಳು ಹಾಗೂ ಪ್ರಗತಿಪರ ಮುಖಂಡರು ಸೇರಿದಂತೆ ಸುಮಾರು ೧೦ ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು.ಗೊತ್ತಿದ್ದೂ ಗೊತ್ತಿದ್ದೂ ಪ್ರಜ್ವಲ್ ಎಂಬ ಕಾಮಪಿಪಾಸುವನ್ನು ಪೋಷಿಸಿ ಬೆಳೆಸಿದ ದೇವೇಗೌಡ ಕುಟುಂಬ ಮತ್ತು ಅಧಿಕಾರದ ದುರಾಸೆಗೆ ಟಿಕೆಟ್ ನೀಡಿ ಸಮರ್ಥಿಸಿಕೊಂಡ ಮೋದಿ ಹಾಗೂ ಬಿಜೆಪಿ ನಾಡಿನ ಮಹಿಳೆಯರಲ್ಲಿ ಕ್ಷಮೆ ಕೇಳಬೇಕು,
ಯಾವುದೇ ರಾಜಿಗೆ ಅವಕಾಶ ಇಲ್ಲದಂತೆ ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆ, ಕ್ರಮ, ವಿಚಾರಣೆಯನ್ನು ರಾಜ್ಯ ಸರ್ಕಾರ ತ್ವರಿತಗತಿಯಲ್ಲಿ ಮುನ್ನಡೆಸಬೇಕು. ಎಲ್ಲಿದ್ದರೂ ಬಿಡದೆ ಆ ನೀಚನನ್ನು ಕೇಂದ್ರ ಸರ್ಕಾರ ಹಿಡಿದು ತರಬೇಕು, ಬದುಕು ಛಿದ್ರಗೊಂಡಿರುವ ಮಹಿಳೆಯರಿಗೆ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಮಹಿಳಾ ಆಯೋಗ ಮತ್ತು ಸರ್ಕಾರ ವಿಶ್ವಾಸಪೂರ್ಣ ಹೆಜ್ಜೆಗಳನ್ನು ಇಡಬೇಕು,
ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳನ್ನು ನಿಯಂತ್ರಿಸಲು ಸರ್ಕಾರವು ಸಮಗ್ರ ಹಾಗೂ ಪರಿಣಾಮಕಾರಿ ಕಾರ್ಯಯೋಜನೆ ರೂಪಿಸಿ, ಯುದ್ಧೋಪಾದಿಯಲ್ಲಿ ಕಾರ್ಯಪ್ರವೃತ್ತವಾಗಬೇಕು,
ಮಹಿಳೆಯರು ಮತ್ತು ಹೆಣ್ಣುಮಕ್ಕಳ ಬದುಕು ಮತ್ತು ಘನತೆ ಕಾಪಾಡುವುದು ನಮ್ಮೆಲ್ಲರ ಆದ್ಯತೆಯಾಗಬೇಕು. ಸಮಾಜವು ಮೌನ ಮುರಿದು ಲಿಂಗ ಸಮಾನತೆಗಾಗಿ ದನಿ ಎತ್ತಬೇಕು ಎಂದು ಒತ್ತಾಯಿಸಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಮಧು ತೊಗಲೇರಿ,ಮಮತ, ಪವಿತ್ರ, ಸತೀಶ್ ಅರವಿಂದ ಇದ್ದರು.