ಪ್ರಜ್ವಲ್ ಬಸವನಗುಡಿ ಮನೆ ಸ್ಥಳ ಮಹಜರು

ಬೆಂಗಳೂರು,ಜೂ.೧೦-ಅತ್ಯಾಚಾರ,ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಭಾಗಿಯಾಗಿ ಬಂಧಿತನಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ನಗರದ ಮನೆಯನ್ನು ವಿಶೇಷ ತನಿಖಾ ತಂಡ(ಎಸ್‌ಐಟಿ) ದ ಅಧಿಕಾರಿಗಳು ಇಂದು ಮತ್ತೊಮ್ಮೆ ಮಹಜರು ಮಾಡಿದ್ದಾರೆ.
ಬಸವನಗುಡಿಯ ಮನೆಯ ಮಹಜರು ವೇಳೆ ತಾಯಿ ಭವಾನಿ ರೇವಣ್ಣ ಮನೆಯಲ್ಲೇ ಇದ್ದರೂ ಮಗನಿಗೆ ಮುಖಾಮುಖಿ ಆಗಲಿಲ್ಲ.
ಪ್ರಜ್ವಲ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಮುನ್ನ ಬಸವನಗುಡಿಯ ನಿವಾಸದಲ್ಲಿ ಮಹಜರ್ ಪ್ರಕ್ರಿಯೆಯನ್ನು ನಡೆಸಿದ ವೇಳೆ ಭವಾನಿ ರೇವಣ್ಣ ಅಸೌಖ್ಯದ ಕಾರಣ ಹೇಳಿ ಮನೆಯಲ್ಲೇ ಇದ್ದರೂ ಪ್ರಜ್ವಲ್‌ಗೆ ಮುಖಾಮುಖಿಯಾಗಲಿಲ್ಲ.
ಈ ಮುನ್ನವೇ ಸ್ಥಳ ಮಹಜರು ಮಾಡುವ ವೇಳೆ ಅಡ್ಡಿಪಡಿಸದಂತೆ ಭವಾನಿ ಅವರಿಗೆ ಸೂಚನೆ ನೀಡಲಾಗಿತ್ತು ಎನ್ನಲಾಗಿದೆ. ಭವಾನಿ ಅವರು ಕೂಡ ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣದಲ್ಲಿ ಎಸ್‌ಐಟಿ ತನಿಖೆಗೆ ಒಳಗಾಗುತ್ತಿದ್ದಾರೆ. ಕೋರ್ಟ್ ಭವಾನಿಗೆ ಮಧ್ಯಂತರ ಜಾಮೀನು ನೀಡಿದ್ದು, ಸಂಜೆಯ ಒಳಗೆ ತನಿಖೆ ಮುಗಿಸಿ ಕಳಿಸುವಂತೆ ಎಸ್‌ಐಟಿಗೆ ನಿರ್ದೇಶನ ನೀಡಿದೆ.
ಪ್ರಜ್ವಲ್ ಮನೆಯಲ್ಲಿ ತನ್ನನ್ನು ಲೈಂಗಿಕವಾಗಿ ಕಿರುಕುಳಕ್ಕೆ ಒಳಪಡಿಸಲಾಗಿದೆ ಎಂದು ಸಂತ್ರಸ್ತೆ ತೋರಿಸಿದ ಕೊಠಡಿ ಮಹಜರು ಮಾಡಲಾಗಿದೆ. ಈ ಸಂದರ್ಭದಲ್ಲಿ ಭವಾನಿ ಅವರು ತುಳಸಿ ಕಟ್ಟೆಗೆ ಪೂಜೆ ಮಾಡುತ್ತಿರುವುದು ಕಂಡುಬಂತು. ಕೈಯಲ್ಲಿ ಊರುಗೋಲು ಹಿಡಿದುಕೊಂಡು ಬಂದ ಭವಾನಿ ರೇವಣ್ಣ, ಮೊದಲ ಮಹಡಿಯಲ್ಲಿರುವ ತುಳಸಿಕಟ್ಟೆಗೆ ಪೂಜೆ ಸಲ್ಲಿಸಿದರು.
ಮಂಡಿ ನೋವಿನ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ವಾಕಿಂಗ್ ಸ್ಟಿಕ್ ಹಿಡಿದುಕೊಂಡು ಓಡಾಡುತ್ತಿದ್ದಾರೆ.
ಅಶ್ಲೀಲ ವಿಡಿಯೋದಲ್ಲಿ ತಾನಿರುವುದನ್ನು ಪ್ರಜ್ವಲ್ ಒಪ್ಪಿಕೊಂಡಿಲ್ಲ. ಹೀಗಾಗಿ, ಅಶ್ಲೀಲ ವಿಡಿಯೋದಲ್ಲಿ ಕಾಣಿಸುವ ಜಾಗಕ್ಕೂ ಬಸವನಗುಡಿ ಮನೆಯ ಕೋಣೆಗೂ ತಾಳೆ ಆಗುತ್ತಿದೆಯಾ ಎಂದು ಪರಿಶೀಲನೆ ನಡೆಸಲಾಗುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಎಲ್ಲೂ ಪ್ರಜ್ವಲ್ ಮುಖ ಕಾಣಿಸುತ್ತಿಲ್ಲ. ಹಾಗಾಗಿ ಮನೆಯ ಕೆಲ ಜಾಗಗಳನ್ನು ಸಾಕ್ಷಿಯಾಗಿ ಅಧಿಕಾರಿಗಳು ಪರಿಗಣಿಸಲಿದ್ದಾರೆ. ಸಂತ್ರಸ್ತೆ ದೂರಿನಲ್ಲಿ ಉಲ್ಲೇಖ ಮಾಡಿರುವ ಜಾಗ ಹಾಗೂ ಅಶ್ಲೀಲ ವಿಡಿಯೋದಲ್ಲಿರುವ ಜಾಗಗಳು ಹೋಲಿಕೆಯಾದರೆ ಪ್ರಜ್ವಲ್ ಗೆ ಮತ್ತಷ್ಟು ಸಂಕಟ ಎದುರಾಗಲಿದೆ.
ಇನ್ನೊಂದೆಡೆ ವಿಡಿಯೋ ಮಾಡಿಕೊಂಡ ಮದರ್ ಡಿವೈಸ್‌ಗಾಗಿ ಎಸ್‌ಐಟಿ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ.ಈ ಮೂಲ ಮೊಬೈಲ್ ಕಳೆದುಹೋಗಿದೆ.ಒಂದು ವರ್ಷದ ಹಿಂದೆಯೇ ಈ ಬಗ್ಗೆ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ಪ್ರಜ್ವಲ್ ಹೇಳಿದ್ದಾರೆ.