ಪ್ರಜ್ವಲ್ ಬಂಧನಕ್ಕೆ ಕಾದು ಕುಳಿತ ಎಸ್‌ಐಟಿ


ಬೆಂಗಳೂರು,ಮೇ.೬-ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಲುಕಿರುವ ಪ್ರಜ್ವಲ್ ರೇವಣ್ಣ ಅವರು ಯಾವುದೇ ಸಮಯದಲ್ಲಿ ದುಬೈನಿಂದ ರಾಜ್ಯಕ್ಕೆ ವಾಪಸ್ ಆಗುವ ಸಾಧ್ಯತೆಗಳಿದ್ದು,ಆತ ರಾಜ್ಯಕ್ಕೆ ಕಾಲಿಡುತ್ತಿದ್ದಂತೆಯೇ ಬಂಧನಕ್ಕೆ ವಿಶೇಷ ತನಿಖಾ ತಂಡ(ಎಸ್‌ಐಟಿ)ದ ಅಧಿಕಾರಿಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಠಿಕಾಣಿ ಹೂಡಿದ್ದಾರೆ.
ಈ ಮಧ್ಯೆ ಪ್ರಜ್ವಲ್‌ಗೆ ಎಸ್‌ಐಟಿ ಮುಂದೆ ವಿಚಾರಣೆಗೆ ಹಾಜರಾಗುವಂತೆ ಕುಟುಂಬಸ್ಥರು, ಆಪ್ತರಿಂದಲೇ ಒತ್ತಡ ಹೆಚ್ಚಾಗಿದೆ.ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಅರೋಪಿ ಪ್ರಜ್ವಲ್ ಮೇಲೆ ರೇವಣ್ಣ ಕುಟುಂಬಸ್ಥರು ಮತ್ತು ಆಪ್ತರು ಒತ್ತಡ ಹಾಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಿನ್ನೆ ದುಬೈಯಿಂದ ಬೆಂಗಳೂರಿಗೆ ಬರಬೇಕಾಗಿದ್ದ ಪ್ರಜ್ವಲ್ ಇನ್ನೂ ಕೂಡ ಬಂದಿಲ್ಲ. ಈ ಮಧ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಈ ಸಂದರ್ಭದಲ್ಲಿ ವಿಚಾರಣೆಗೆ ಹಾಜರಾಗದೆ ಇದ್ದರೆ ಮತ್ತಷ್ಟು ತೊಂದರೆ ಎಂಬುದು ಕುಟುಂಬಸ್ಥರ ಅಭಿಪ್ರಾಯವಾಗಿದೆ.
ಎಸ್?ಐಟಿ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ಇರುವುದು ಕುಟುಂಬ ಮತ್ತು ಪಕ್ಷಕ್ಕೆ ಮತ್ತಷ್ಟು ಮುಜುಗರವನ್ನು ಉಂಟುಮಾಡುತ್ತದೆ. ಮೊದಲು ಎಸ್‌ಐಟಿ ಮುಂದೆ ಹಾಜರಾಗಿ ವಿಚಾರಣೆ ಎದುರಿಸು. ನಂತರ ಕಾನೂನು ಹೋರಾಟದಿಂದ ಪ್ರಕರಣದ ಸತ್ಯಾಂಶ ಹೊರಬರುತ್ತದೆ. ವಿಚಾರಣೆಗೆ ಹಾಜರಾಗದೆ ಕಾನೂನು ಹೋರಾಟಕ್ಕೆ ಮೊರೆ ಹೋದರೆ ಮತ್ತಷ್ಟು ಸಮಸ್ಯೆ ಆಗುತ್ತದೆ. ಈಗಾಗಲೇ ಈ ಪ್ರಕರಣದಿಂದ ಸಾಕಷ್ಟು ಡ್ಯಾಮೇಜ್ ಆಗುತ್ತಿದೆ. ಹೀಗಾಗಿ ಕೂಡಲೇ ವಕೀಲರ ಜೊತೆ ಸಮಾಲೋಚನೆ ನಡೆಸಿ ವಿಚಾರಣೆಗೆ ಹಾಜರಾಗುವಂತೆ ಕುಟುಂಬಸ್ಥರು ಪ್ರಜ್ವಲ್ ಮೇಲೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.
ರೇವಣ್ಣ ಅವರ ಬಂಧನವಾಗಿರುವ ಹಿನ್ನೆಲೆಯಲ್ಲಿ ವಕೀಲರ ಸಲಹೆ ಮೇರೆಗೆ ಪ್ರಜ್ವಲ್ ವಿದೇಶದಿಂದ ರಾಜ್ಯಕ್ಕೆ ವಾಪಸ್ ಆಗುವ ಸಾಧ್ಯತೆಯಿದೆ. ಶನಿವಾರ ತಂದೆ ರೇವಣ್ಣ ಬಂಧನಕ್ಕೆ ಒಳಗಾಗುವ ಮುನ್ನ ಪ್ರಜ್ವಲ್ ಕರೆ ಮಾಡಿ ಕೆಲ ಕಾಲ ಮಾತನಾಡಿದ್ದಾರೆ. ಇದರ ಬೆನ್ನಲ್ಲೇ ಪ್ರಜ್ವಲ್ ವಿದೇಶದಿಂದ ಬೆಂಗಳೂರಿಗೆ ವಾಪಸ್ ಆಗಲು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.
ಪ್ರಜ್ವಲ್ ಸೆರೆಗೆ ಸೂಚನೆ:
ಈ ಮಧ್ಯೆ, ಎಸ್‌ಐಟಿ ಅಧಿಕಾರಿಗಳ ಜತೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದ್ದು, ಕೂಡಲೇ ಪ್ರಜ್ವಲ್ ಬಂಧನಕ್ಕೆ ಕ್ರಮ ಕೈಗೊಳ್ಳುವಂತೆ ಖಡಕ್ ಸೂಚನೆ ನೀಡಿದ್ದಾರೆ. ಗೃಹ ಸಚಿವ ಪರಮೇಶ್ವರ್ ಮಾತನಾಡಿ, ಬ್ಲೂ ಕಾರ್ನರ್ ನೋಟಿಸ್ ನೀಡಲಾಗಿದೆ. ನ್ಯಾಯಯುತ ತನಿಖೆಗಾಗಿ ಎಸ್‌ಐಟಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ ಎಂದಿದ್ದಾರೆ.
ಪ್ರಜ್ವಲ್ ವಿರುದ್ಧ ಕೇಸ್:
ರೇವಣ್ಣ ಅವರ ಮನೆ ಕೆಲಸದ ಮಹಿಳೆ ನೀಡಿದ ದೂರಿನ ಅನ್ವಯ ಹಾಸನದ ಹೊಳೆ ನರಸೀಪುರದ ಟೌನ್ ಪೊಲೀಸ್ ಠಾಣೆಯಲ್ಲಿ ರೇವಣ್ಣ ಮತ್ತು ಪ್ರಜ್ವಲ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಪ್ರಕರಣದಲ್ಲಿ ಎಚ್ ಡಿ ರೇವಣ್ಣ ಮೊದಲ ಆರೋಪಿಯಾಗಿದ್ದು, ಪ್ರಜ್ವಲ್‌ನನ್ನು ಎರಡನೇ ಆರೋಪಿಯನ್ನಾಗಿಸಲಾಗಿದೆ.
ಏಪ್ರಿಲ್ ೨೮ರಂದು ದಾಖಲಾಗಿರುವ ಎಫ್‌ಐಆರ್‌ನಲ್ಲಿ ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ ೩೫೪(ಎ), ೩೫೪(ಡಿ), ೫೦೬, ೫೦೯ ಅಡಿ ಪ್ರಕರಣ ದಾಖಲಿಸಲಾಗಿದೆ. ಇದರ ತನಿಖೆಯನ್ನು ಹಿರಿಯ ಐಪಿಎಸ್ ಅಧಿಕಾರಿ ಬಿ ಕೆ ಸಿಂಗ್ ನೇತೃತ್ವದ ವಿಶೇಷ ತನಿಖಾ ತಂಡ ಆರಂಭಿಸಿದೆ.