ಪ್ರಜ್ವಲ್ ಪ್ರಕರಣ: ಮೋದಿ-ಎಚ್‌ಡಿಡಿ ಕುಟುಂಬವೇ ನೇರ ಹೊಣೆ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಏ.೩೦:ಪ್ರಜ್ವಲ್‌ರೇವಣ್ಣ ಲೈಂಗಿಕ ಪ್ರಕರಣಕ್ಕೆ ಪ್ರಧಾನಿ ನರೇಂದ್ರಮೋದಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬವೇ ನೇರ ಹೊಣೆ ಎಂದು ಸಂಸದ ಡಿ.ಕೆ ಸುರೇಶ್ ಹೇಳಿದರು.
ಈ ಲೈಂಗಿಕ ಹಗರಣ ದೇಶದ ಅತಿ ದೊಡ್ಡ ಮಹಿಳಾ ದೌರ್ಜನ್ಯ ಪ್ರಕರಣ ಎಂದು ಸದಾಶಿವನಗರದ ನಿವಾಸದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ನಮಗೆ ಈ ವಿಚಾರ ಗೊತ್ತಿದ್ದರೆ ಇನ್ನೂ ಮುಂಚೆಯೇ ಬಹಿರಂಗವಾಗುತ್ತಿತ್ತು, ಕೇವಲ ಆರೋಪ ಮಾಡುವ ಸಲುವಾಗಿ ನಮ್ಮ ಹೆಸರನ್ನು ತರಲಾಗಿದೆ. ಈ ಬಗ್ಗೆ ಗುಸುಗುಸು ಸುದ್ದಿ ಹಾಸನದಲ್ಲಿ ಹರಿದಾಡುತ್ತಿತ್ತು. ದಾಖಲೆಗಳಿಲ್ಲದೆ ಮಾತನಾಡುವುದು ಸೂಕ್ತವಲ್ಲ ಎಂದು ಅವರು ಹೇಳಿದರು.
ಹಾಸನ ಬಿಜೆಪಿ ನಾಯಕ ದೇವರಾಜೇಗೌಡ ಈ ಸಂಬಂಧ ಉನ್ನತ ನಾಯಕರಿಗೆ ಪತ್ರ ಬರೆದಿದ್ದು, ಪ್ರಕರಣದ ಬಗ್ಗೆ ಪ್ರಧಾನಿಗಳು ಮತು ಅವರ ಕಾರ್ಯಾಲಯ ಮತ್ತು ದೇವೇಗೌಡರ ಕುಟುಂಬಕ್ಕೆ ಗೊತ್ತಿದ್ದರೂ ಉದ್ದೇಶಪೂರ್ವಕವಾಗಿ ಮುಚ್ಚಿಟ್ಟು ಎನ್‌ಡಿಎ ಅಭ್ಯರ್ಥಿಯನ್ನಾಗಿ ಮಾಡಿ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಲೈಂಗಿಕ ದೌರ್ಜನ್ಯ ಮೊದಲೇ ಗೊತ್ತಿತ್ತು ಎಂದು ಬಿಜೆಪಿ ನಾಯಕರೇ ಒಪ್ಪಿಕೊಂಡಿದ್ದಾರೆ.ಇದು ಹಳೆಯ ವೀಡಿಯೋಗಳು ಎಂದು ಒಪ್ಪಿಕೊಂಡಿದ್ದಾರೆ. ಎಲ್ಲಕ್ಕಿಂತೆ ಹೆಚ್ಚಾಗಿ ಹೆಣ್ಣು ಮಕ್ಕಳ ರಕ್ಷಣೆ ಮಾಡುವುದು ಸರ್ಕಾರದ ಮೊದಲ ಆದ್ಯತೆ, ೫೦೦ಕ್ಕೂ ಹೆಚ್ಚು ಮಹಿಳೆಯರು ಶೋಷಣೆಗೆ ಗುರಿಯಾಗಿದ್ದಾರೆ ಎಂದು ಹೇಳಿದರು.
ಸ್ವತಃ ಪ್ರಧಾನಿಯವರೇ ಈ ಪ್ರಕರಣವನ್ನು ಬೇರೆ ರೀತಿ ಬಿಂಬಿಸಲು ಹೊರಟಿದ್ದಾರೆ. ತಪ್ಪು ಮಾಡಿದವರಿಗೆ ಶಿಕ್ಷಯಾಗಬೇಕು ಎಂದು ಎಲ್ಲರೂ ಹೇಳುತ್ತಾರೆ. ಆದರೆ,ಈ ವಿಚಾರ ತಿಳಿದಿದ್ದರೂ ಮುಚ್ಚಿಟ್ಟಿದ್ದು ಮಹಾಪರಾಧ, ಕುಮಾರಸ್ವಾಮಿ ಅವರು ಚುನಾವಣಾ ಪ್ರಚಾರಕ್ಕೆ ಹೊಳೆನರಸೀಪುರಕ್ಕೆ ಭೇಟಿ ಕೊಟ್ಟಿದ್ದಾಗ ಪ್ರಜ್ವಲ್ ಅವರನ್ನು ನನ್ನ ಮಗ ಎಂದು ಹೇಳಿದ್ದಾರೆ. ಆದರೆ, ಈಗ ನನಗೂ ಇದಕ್ಕೂ ಸಂಬಂಧಿವಿಲ್ಲ ಎನ್ನುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಇದು ಮನುಕುಲದ ದೊಡ್ಡ ಅವಮಾನಕರ ಘಟನೆ ಎಂದು ಆರೋಪಿಸಿದ ಅವರು, ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣವನ್ನು ರಾಷ್ಟ್ರಮಟ್ಟಕ್ಕೆ ತೆಗೆದುಕೊಂಡು ಹೋದಂತೆ ಈ ಪ್ರಕರಣವನ್ನು ತೆಗೆದುಕೊಂಡು ಹೋಗಲಿ.ಈ ಪ್ರಕರಣದಲ್ಲಿ ಹಿಂದೆ ಇರುವ ಎಲ್ಲರಿಗೂ ಶಿಕ್ಷೆಯಾಗಬೇಕು ಎಂದರು.