ಪ್ರಜ್ವಲ್ ಪ್ರಕರಣ: ದತ್ತನ ಮೊರೆ ಹೋದ ರೇವಣ್ಣ

ಕಲಬುರಗಿ,ಮೇ 23: ತಮ್ಮ ಪುತ್ರ ಪ್ರಜ್ವಲ್ ವಿರುದ್ಧ ಕೇಳಿಬಂದಿರುವ ಪೆನ್‍ಡ್ರೈವ್ ಪ್ರಕರಣಗಳ ಸಂಕಷ್ಟದಿಂದ ಮುಕ್ತಿ ಕೋರಿ ಮಾಜಿ ಸಚಿವ ಹಾಗೂ ಶಾಸಕ ಎಚ್.ಡಿ.ರೇವಣ್ಣ ಇಂದು ದೇವಲಗಾಣಗಾಪುರದ ಶ್ರೀದತ್ತನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಗಾಣಗಾಪುರದ ದತ್ತಾತ್ರೇಯ ದೇಗುಲಕ್ಕೆ ಇಂದು ಬೆಳಗ್ಗೆ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಕೈಗೊಂಡು ಪ್ರಾರ್ಥಿಸಿದರು.ದೇವಸ್ಥಾನದಲ್ಲಿ ಶ್ರೀ ದತ್ತ ಮಹಾರಾಜರ ನಿರ್ಗುಣ ಪಾದುಕೆಗಳಿಗೆ ವಿಶೇಷ ಪೂಜೆ ಸಲ್ಲಿಸಲು ರೇವಣ್ಣ ತಮ್ಮ ಜೊತೆಯಲ್ಲಿಯೇ ಪುರೋಹಿತರನ್ನು ಕರೆದುಕೊಂಡು ಬಂದಿದ್ದು ವಿಶೇಷವಾಗಿತ್ತು.
ಒಂದು ಗಂಟೆಗೂ ಅಧಿಕ ಹೊತ್ತು ದತ್ತಾತ್ರೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಎಚ್.ಡಿ. ರೇವಣ್ಣ ಅವರನ್ನು ದೇವಸ್ಥಾನ ಆಡಳಿತ ಮಂಡಳಿಯಿಂದ ಸತ್ಕರಿಸಲಾಯಿತು.
ಈ ಹಿಂದೆಯೂ ಹಲವು ಬಾರಿ ಗಾಣಗಾಪುರಕ್ಕೆ ಆಗಮಿಸಿ ದತ್ತನ ದರ್ಶನ ಪಡೆದಿದ್ದ ರೇವಣ್ಣ, ಇಂದು ಯಾವುದೇ ಮುನ್ಸೂಚನೆ ಇಲ್ಲದೆ ಆಗಮಿಸಿ ದಿಢೀರನೆ ವಿಶೇಷ ಪೂಜೆ ಸಲ್ಲಿಸಿ ಸಂಕಷ್ಟಗಳ ನಿವಾರಣೆಗೆ ದೇವರ ಮೊರೆ ಹೋದರು.