ಪ್ರಜ್ವಲ್ ಪಾಸ್‌ಪೋರ್ಟ್ ರದ್ದು ಕೋರಿ ಕೇಂದ್ರಕ್ಕೆ ಸಿಎಂ ೨ನೇ ಪತ್ರ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಮೇ೨೩:ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್‌ನ್ನು ರದ್ದು ಮಾಡಿ ಅವರನ್ನು ಸ್ವದೇಶಕ್ಕೆ ವಾಪಸ್ ಕರೆ ತರಲು ಅಗತ್ಯ ಕ್ರಮಕೈಗೊಳ್ಳುವಂತೆ ಪ್ರಧಾನಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೊಂದು ಪತ್ರ ಬರೆದಿದ್ದಾರೆ. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್‌ರೇವಣ್ನ ವಿದೇಶದಲ್ಲಿದ್ದು, ಅವರ ರಾಜತಾಂತ್ರಿಕ ಪಾಸ್‌ಪೋರ್ಟ್‌ನ್ನು ರದ್ದು ಮಾಡಿ ಎಂದು ಈ ಹಿಂದೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದರು.
ಈ ಪತ್ರಕ್ಕೆ ಸೂಕ್ತ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಇಂದು ಮತ್ತೊಂದು ಪತ್ರವನ್ನು ಪ್ರಧಾನಿ ಮೋದಿ ಅವರಿಗೆ ಬರೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಜ್ವಲ್‌ರೇವಣ್ಣ ಅವರನ್ನು ವಿದೇಶದಿಂದ ಸ್ವದೇಶಕ್ಕೆ ಕರೆತರಲು ಅನುವಾಗುವಂತೆ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್‌ನ್ನು ರದ್ದು ಮಾಡುವಂತೆ ಒತ್ತಾಯಿಸಿದ್ದಾರೆ. ಹಾಸನದ ಸಂಸದರಾಗಿರುವ ರೇವಣ್ಣ ಅವರು ಲೈಂಗಿಕ ದೌರ್ಜನ್ಯ ಪ್ರಕರಣ ಹಾಗೂ ಅಶ್ಲೀಲ ವೀಡಿಯೊ ಚಿತ್ರೀಕರಣ ಪ್ರಕರಣದ ಆರೋಪಿಯಾಗಿದ್ದು, ಅವರು ರಾಜತಾಂತ್ರಿಕ ಪಾಸ್‌ಪೋರ್ಟ್ ಮೇಲೆ ವಿದೇಶದಲ್ಲಿದ್ದಾರೆ. ಅವರನ್ನು ವಿಚಾರಣೆಗೊಳಪಡಿಸುವ ಅಗತ್ಯವಿದ್ದು, ಅವರು ದೇಶಕ್ಕೆ ವಾಪಸ್ ಕರೆತರಲು ಅಗತ್ಯ ಕ್ರಮಕೈಗೊಳ್ಳಬೇಕು. ಹಾಗೆಯೇ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್‌ನ್ನು ರದ್ದು ಮಾಡುವಂತೆ ಸಿದ್ದರಾಮಯ್ಯ ಪತ್ರದಲ್ಲಿ ಆಗ್ರಹಿಸಿದ್ದಾರೆ.
ವಿದೇಶದಿಂದ ಪ್ರಜ್ವಲ್‌ರೇವಣ್ಣ ಅವರನ್ನು ಕರೆತರುವುದು ನಮ್ಮ ಆದ್ಯತೆಯಾಗಿದೆ. ಕಾನೂನಾತ್ಮಕವಾಗಿ ಎಲ್ಲ ರೀತಿಯಲ್ಲು ಸಹಕರಿಸಲು ವಿಶೇಷ ತನಿಖಾ ತಂಡ ಸಿದ್ಧವಿದೆ. ಹೀಗಾಗಿ ವಿದೇಶಾಂಗ ಸಚಿವಾಲಯದ ಮಧ್ಯ ಪ್ರವೇಶಕ್ಕೆ ಸೂಚನೆ ನೀಡುವಂತೆ ಮೋದಿ ಅವರಲ್ಲಿ ಮನವಿ ಮಾಡಿರುವ ಸಿದ್ದರಾಮಯ್ಯ ಅವರು ಪ್ರಜ್ವಲ್ ಅವರನ್ನು ದೇಶಕ್ಕೆ ಕರೆತರಲು ಅಗತ್ಯ ಕ್ರಮಕೈಗಳ್ಳುವಂತೆ ಸೂಚನೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಭಾಗಿಯಾಗಿರುವ ಪ್ರಜ್ವಲ್ ಅವರನ್ನು ವಿದೇಶದಿಂದ ಕರೆತರಲು ಅಂತಾರಾಷ್ಟ್ರೀಯ ಪೊಲೀಸ್ಏ ಜೆನ್ಸಿಗಳ ಮೂಲಕವು ಕ್ರಮಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ಒತ್ತಾಯಿಸಿದ್ದಾರೆ. ಪ್ರಜ್ವಲ್ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗುತ್ತಿದ್ದಂತೆಯೇ ಕಳೆದ ಏ. ೨೭ ರಂದು ವಿದೇಶಕ್ಕೆ ತೆರಳಿದ್ದು, ಅವರ ರಾಜತಾಂತ್ರಿಕ ಪಾಸ್‌ಪೋರ್ಟ್‌ನ್ನು ರದ್ದು ಮಾಡಿದರೆ ಅವರು ದೇಶಕ್ಕೆ ವಾಪಸ್ ಬರಲೇಬೇಕಾಗುತ್ತದೆ. ಹಾಗಾಗಿ, ಅಗತ್ಯ ಕ್ರಮಕೈಗೊಳ್ಳಿ ಎಂದು ಹೇಳಿದ್ದಾರೆ.
ಹಾಸನದ ಲೋಕಸಭಾ ಸದಸ್ಯ ಮತ್ತು ಹಾಲಿ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್‌ರೇವಣ್ಣ ಅವರು ಮಹಿಳೆಯರ ಲೈಂಗಿಕ ಶೋಷಣೆ ಮಾಡಿದ್ದಾರೆಂಬ ಗಂಭೀರ ಪ್ರಕರಣದ ಬಗ್ಗೆ ನಿಮಗೆ ತಿಳಿದಿರಲೇಬೇಕು. ಅವರ ಮೇಲಿನ ಆರೋಪಗಳು ಭಯಾನಕ ಮತ್ತು ನಾಚಿಕೆಗೇಡಿನದಾಗಿದೆ. ಅವರು ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗನೂ ಆಗಿದ್ದಾರೆ. ಇವರನ್ನು ವಿಚಾರಣೆಗೊಳಪಡಿಸಬೇಕಾಗುತ್ತದೆ ಇವರು ರಾಜತಾಂತ್ರಿಕ ಪಾಸ್‌ಪೋರ್ಟ್ ಮೇಲೆ ವಿದೇಶದಲ್ಲಿ ಪ್ರವಾಸ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಅವರನ್ನು ದೇಶಕ್ಕೆ ಮರಳಿ ಕರೆತರುವುದು ಮಹತ್ವದ್ದಾಗಿದೆ. ಹಾಗಾಗಿ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್‌ನ್ನು ರದ್ದು ಮಾಡಿ ಅವರು ದೇಶಕ್ಕೆ ವಾಪಸ್ ಆಗಲು ಅಗತ್ಯವಿರುವ ಕಾನೂನು ಪ್ರಕ್ರಿಯೆಯನ್ನು ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಪತ್ರದಲ್ಲಿ ಒತ್ತಾಯಿಸಿದ್ದಾರೆ.