ಪ್ರಜ್ಞಾವಂತ ಸಮಾಜ ನಿರ್ಮಾಣಕ್ಕೆ ಯುವ ಶಕ್ತಿ ಸದ್ಬಳಕೆಯಾಗಬೇಕು: ಕಾಮತ್

ಮಂಗಳೂರು, ಡಿ.೨೪- ಯುವ ಶಕ್ತಿ ದೇಶದ ಶಕ್ತಿ. ಪರಸ್ಪರ ಸಮನ್ವಯತೆ ಮೂಲಕ ಪ್ರಜ್ಞಾವಂತ ಸಮಾಜ ನಿರ್ಮಾಣಕ್ಕೆ ಯುವ ಶಕ್ತಿಯ ಸದ್ಬಳಕೆಯಾಗಬೇಕು. ಈ ನಿಟ್ಟಿನಲ್ಲಿ ಸೂಟರ್ ಪೇಟೆಯ ಪ್ರಜ್ವಲ್ ಯುವಕ ಮಂಡಲ  ಶೈಕ್ಷಣಿಕ,  ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ರಂಗದಲ್ಲಿ ಕಳೆದ ೨೨ ವರ್ಷಗಳಿಂದ ನಿಸ್ವಾರ್ಥವಾಗಿ ಕಾರ್ಯನಿರ್ವಹಿಸುತ್ತಿದೆ. ಇದರ ಫಲವಾಗಿ ಈ ಬಾರಿಯ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯು ಈ ಯುವಕ ಮಂಡಲಕ್ಕೆ ಅರ್ಹವಾಗಿ ಸಂದಿದೆ ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಡಿ. ವೇದವ್ಯಾಸ ಕಾಮತ್ ಹೇಳಿದ್ದಾರೆ.

ಅವರು ನಗರದ ಸೂಟರ್ ಪೇಟೆ ಶ್ರೀ ಕೋರ್ದಬ್ಬು ದೈವಸ್ದಾನದ ಬಬ್ಬುಸ್ಶಾಮಿ ರಂಗಮಂದಿರದಲ್ಲಿ ಶನಿವಾರ ಪ್ರಜ್ವಲ್ ಯುವಕ ಮಂಡಲಕ್ಕೆ ರಾಜ್ಯೋತ್ಸವ ಪ್ರಶಸ್ತಿ ದೊರೆತ ಸಂಭ್ರಮ ಆಚರಣೆಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಜ್ವಲ್ ಯುವಕ ಮಂಡಲ ಶ್ರದ್ಧಾ ಮನೋಭಾವನೆಯಿಂದ ಯುವಕರ ಸಂಘಟನೆಯ ಮೂಲಕ ಈ ಭಾಗದಲ್ಲಿ ಜನಮೆಚ್ಚುಗೆಯ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಕೋರ್ದಬ್ಬು ದೈವಸ್ದಾನದ ಗುರಿಕಾರರಾದ ಶ್ರೀ ಎಸ್ ರಾಘವೇಂದ್ರ ಇವರು ವಹಿಸಿದ್ದರು. ಮೆಸ್ಕಾಂ ನಿರ್ದೇಶಕ ಶ್ರೀ ಕಿರಣ್ ಕುಮಾರ್ ಪುತ್ತೂರು, ಹಿರಿಯ ರಂಗಕರ್ಮಿ, ಹಿರಿಯ ತುಳು ಸಿನೆಮಾ ನಿರ್ದೇಶಕರಾದ  ಶ್ರೀ ವಿಜಯಕುಮಾರ್ ಕೊಡಿಯಾಲ್ ಬೈಲ್,  ಪಾಂಡೇಶ್ವರ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್  ಶ್ರೀ  ಶೀತಲ್, ಖ್ಯಾತ  ಸಂಗೀತ ನಿರ್ದೇಶಕ ಶ್ರೀ ಮಣಿಕಾಂತ್ ಕದ್ರಿ, ಯುವಕ ಮಂಡಲದ ಗೌರವ ಅಧ್ಯಕ್ಷರಾದ  ಶ್ರೀ ಪಿ.ಬಾಬು, ಜಾನಪದ ವಿದ್ವಾಂಸ ಶ್ರೀ ಕೆ. ಕೆ. ಪೇಜಾವರ,  ಕ್ರೀಡಾ ಅಂಕಣಕಾರ ಶ್ರೀ ಎಸ್. ಜಗದೀಶ್ಚಂದ್ರ ಅಂಚನ್,  ಯುವಕ ಮಂಡಲದ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಕಿಶೋರ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಈ ಸಮಾರಂಭದಲ್ಲಿ ಮೆಸ್ಕಾಂ ನಿರ್ದೇಶಕರಾದ ಶ್ರೀ ಕಿರಣ್ ಕುಮಾರ್ ಪುತ್ತೂರು ಹಾಗೂ ಶ್ರೀ ಕೋರ್ದಬ್ಬು ದೈವಸ್ದಾನದ ಗುರಿಕಾರರಾದ ಶ್ರೀ ಎಸ್ ರಾಘವೇಂದ್ರ ಇವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಯುವಕ ಮಂಡಲದ ಅಧ್ಯಕ್ಷರಾದ  ಶ್ರೀ ಎಸ್. ವಿವೇಕ್,  ಉಪಾಧ್ಯಕ್ಷ ಶ್ರೀ ಲೋಕೇಶ್ ನಂಬಿಯಾರ್, ಪ್ರಧಾನ ಕಾರ್ಯದರ್ಶಿ  ಶ್ರೀ ಸೃಜನ್ ಮನವ್; ಜೊತೆ ಕಾರ್ಯದರ್ಶಿ ಶ್ರೀ ಕಿಶೋರ್ ನಂಬಿಯಾರ್; ಮಾಜಿ ಅಧ್ಯಕ್ಷರುಗಳಾದ  ಶ್ರೀ ಯಾದವ್ ಮಜಿಲಕೋಡಿ,  ಶ್ರೀ ಎಸ್. ಜಗನ್ನಾಥ,  ಶ್ರೀ ಲಕ್ಷ್ಮಣ್ ಪಡೀಲ್,. ಶ್ರೀ ಪ್ರಮೋದ್, ಶ್ರೀ  ರವೀಂದ್ರ,  ಶ್ರೀ  ಎಸ್. ವಿ.ಮಹೇಶ್,  ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು .

ಸಮಾರಂಭದ ನಂತರ ಶ್ರೀ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರ ’ಶಿವಧೂತೆ ಗುಳಿಗೆ’ ನಾಟಕ ಪ್ರದರ್ಶನಗೊಂಡಿತು. ಕಾರ್ಯಕ್ರಮವನ್ನು ಶ್ರೀ ಸೃಜನ್ ಮನವ್ ನಿರ್ವಹಿಸಿದರು.