ಪ್ರಜ್ಞಾವಂತ ಬಳಗದಿಂದ ಕೊರೊನಾ ಜಾಗೃತಿ

ದೇವದುರ್ಗ.ಮೇ.೨೮- ತಾಲೂಕಿನ ಗಲಗ ಗ್ರಾಮದಲ್ಲಿ ಮಹಾಮಾರಿ ಕೊರೊನಾ ಸೋಂಕು ಹೆಚ್ಚಳವಾದ ಹಿನ್ನೆಲೆಯಲ್ಲಿ ಪ್ರಜ್ಞಾವಂತ ಯುವಕರ ಬಳಗದಿಂದ ಶುಕ್ರವಾರ ಗ್ರಾಮದ ಜನರಿಗೆ ಕರೊನಾ ಬಗ್ಗೆ ಜಾಗೃತಿ ಮೂಡಿಸಿತು.
ಗಲಗ ಗ್ರಾಮದಲ್ಲಿ ಸುಮಾರು ಎರಡು ನೂರಕ್ಕೂ ಹೆಚ್ಚು ಕರೊನಾ ಪ್ರಕರಣಗಳು ಪತ್ತೆಯಾಗಿದ್ದು, ನಾಲ್ವರು ಬಲಿಯಾಗಿದ್ದಾರೆ. ಹೀಗಾಗಿ ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿದೆ. ಈ ಬಗ್ಗೆ ಧೈರ್ಯ ತುಂಬಲು ಹಾಗೂ ಕರೊನಾ ತಡೆಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಯುವಕರು ಜಾಗೃತಿ ಮೂಡಿಸಿದರು.
ನೀರಿನ ತಳ್ಳುವ ಬಂಡಿಯಲ್ಲಿ ಮೈಕ್‌ಹಾಕಿ, ಗ್ರಾಮದ ವಿವಿಧ ಬಡಾವಣೆಯಲ್ಲಿ ಜಾಗೃತಿ ಮೂಡಿಸಿದರು. ಮಾಸ್ಕ್ ಧರಿಸುವುದು, ಸಾನಿಟೈಸರ್ ಬಳಕೆ ಸೇರಿ ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಲು ಅರಿವು ಮೂಡಿಸಿದರು. ಜತೆಗೆ ಕರೊನಾ ಬಗ್ಗೆ ದೃತಿಗೆಡದಂತೆ ಜನರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಶಿವಲಿಂಗಯ್ಯ ತಾತಾ, ಶಿಕ್ಷಕ ಶ್ರೀಕಾಂತ ಪದ್ಮಸಾಲಿ, ಚನ್ನಬಸವ ಭಜಂತ್ರಿ, ನಿಂಗಯ್ಯ ಪೊಲೀಸ್, ಅಕ್ಬರ್ ಸಾಬ್ ಇತರರಿದ್ದರು.
ಮಾದರಿ ಕಾರ್ಯ:
ಪ್ರಜ್ಞಾವಂತ ಯುವಕರ ಬಳಗ ವ್ಯಾಟ್ಸ್‌ಆಪ್ ಗ್ರೂಪ್ ರಚಿಸಿಕೊಂಡ ಯುವಕರು ಎರಡು ವರ್ಷಗಳಿಂದ ಗ್ರಾಮದಲ್ಲಿ ಹಲವು ಸಮಾಜಮುಖಿ ಕಾರ್ಯ ಮಾಡುತ್ತಿದ್ದಾರೆ. ಕಳೆದ ವರ್ಷ ಸ್ವತಃ ತಾವೇ ತಯಾರಿಸಿದ ೫೦೦ಕ್ಕೂ ಹೆಚ್ಚು ಮಾಸ್ಕ್ ಮನೆಮನೆಗೆ ವಿತರಿಸಿದರು. ಕುಡಿವ ನೀರಿನ ಬಾವಿ ಸೇರಿ ವಿವಿಧೆಡೆ ಆಗಾಗ ಸ್ವಚ್ಛತಾ ಕಾರ್ಯ ಕೈಗೊಂಡು ಜನರಿಗೆ ಅರಿವು ಮೂಡಿಸಿದ್ದರು. ಅಲ್ಲದೆ ವಿವಿಧೆಡೆ ಸಸಿ ನೆಟ್ಟು ಗಮನ ಸೆಳೆದಿದ್ದರು. ಸೋಂಕಿತರಿಗೆ ಅಗತ್ಯ ಸಲಹೆ, ವಸ್ತುಗಳನ್ನು ವಿತರಿಸುತ್ತಿದ್ದಾರೆ. ವೈದ್ಯರು ಸೇರಿ ಅಧಿಕಾರಿಗಳ ಜತೆಗೆ ನಿರಂತರ ಸಂಪರ್ಕ ಸಾಧಿಸಿ, ರೋಗಿಗಳಿಗೆ ಆಂಬುಲೆನ್ಸ್ ಸೇವೆ ಒದಗಿಸುತ್ತಿದ್ದಾರೆ. ಯುವಕರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.