ಪ್ರಜ್ಞಾನಂದಗೆ ಇವಿ ವಾಹನ ಉಡುಗೊರೆ

ನವದೆಹಲಿ,ಆ.೩೦-ಭಾರತದ ಚೆಸ್ ದಿಗ್ಗಜ ಪ್ರಜ್ಞಾನಂದವರ ಪೋಷಕರಿಗೆ ಉದ್ಯಮಿ ಆನಂದ್ ಮಹೀಂದ್ರಾ ಅವರು ಎಲೆಕ್ಟ್ರಿಕ್ ಕಾರನ್ನು ಉಡುಗೊರೆಯಾಗಿ ನೀಡುವ ಭರವಸೆ ನೀಡಿದ್ದಾರೆ. ಈ ಕುರಿತಾಗಿ ಚೆಸ್ ಪಟು ಪ್ರಜ್ಞಾನಂದ್ ಟ್ವೀಟ್ ಮಾಡುವ ಮೂಲಕ ಆನಂದ್ ಮಹೀಂದ್ರಾಗೆ ಧನ್ಯವಾದ ಅರ್ಪಿಸಿದ್ದಾರೆ.
ನಾನು ನಿಮಗೆ ಹೇಗೆ ಧನ್ಯವಾದಗಳನ್ನು ಹೇಳಬೇಕು ಎಂದು ಗೊತ್ತಾಗುತ್ತಿಲ್ಲ. ತುಂಬಾನೇ ಥ್ಯಾಂಕ್ಸ್ ಸರ್. ಇವಿ ಕಾರನ್ನು ಹೊಂದುವುದು ನನ್ನ ಹೆತ್ತವರ ದೀರ್ಘಾವಧಿಯ ಕನಸಾಗಿದೆ. ಇದೀಗ ನೀವು ಅದನ್ನು ನನಸಾಗಿಸಿದ್ದಕ್ಕಾಗಿ ಹೃತ್ಪೂರ್ವಕ ಅಭಿನಂದನೆಗಳು ಎಂದು ತಿಳಿಸಿದ್ದಾರೆ.
ಪ್ರಜ್ಞಾನಂದ್ ರನ್ನರ್ ಅಪ್ ಆಗುತ್ತಿದ್ದಂತೆಯೇ ಹಲವಾರು ಮಂದಿ ಟ್ವೀಟ್ ಮಾಡಿ, ಥಾರ್ ಗಿಫ್ಟ್ ಮಾಡುವಂತೆ ಆನಂದ್ ಮಹೀಂದ್ರಾ ಅವರನ್ನು ಒತ್ತಾಯಿಸಿದ್ದರು. ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದ ಆನಂದ್ ಮಹೀಂದ್ರಾ, ನಿಮ್ಮ ಭಾವನೆಗಳನ್ನು ನಾನು ಗೌರವಿಸುತ್ತೇನೆ. ಆದರೆ ನನ್ನಲ್ಲಿ ಮತ್ತೊಂದು ಐಡಿಯಾ ಇದೆ. ಅದೇನೆಂದರೆ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅವರ ಪೋಷಕರನ್ನು ಪ್ರೋತ್ಸಾಹಿಸಲು ಬಯಸುತ್ತೇನೆ. ಹೀಗಾಗಿ ನಾನು ಪ್ರಜ್ಞಾನಂದ ಪೋಷಕರಿಗೆ ಎಲೆಕ್ಟ್ರಿಕ್ ವಾಹನವನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿರುವುದಾಗಿ ತಿಳಿಸಿದ್ದರು.