‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಪತ್ರಿಕೋದ್ಯಮ ಮಹತ್ವದ ಪಾತ್ರ’


ಉಡುಪಿ, ನ.೮- . ಸ್ವಾತಂತ್ರ್ಯ ಹೋರಾಟದಲ್ಲಿ ಭಾರತದ ಪತ್ರಿಕೆಗಳು ಬಹು ದೊಡ್ಡ ಪಾತ್ರ ವಹಿಸಿದ್ದವು. ಮಹಾತ್ಮಾ ಗಾಂಧೀಜಿ  ಅವರೂ ಕೂಡ ಪತ್ರಿಕೆಗಳ ಮೂಲಕವೇ ತಮ್ಮ ಸಂದೇಶವನ್ನು ತಿಳಿಸುತ್ತಿದ್ದರು. ಅಂಥ ಸಂದರ್ಭದಲ್ಲಿ ಕರಾವಳಿ ಭಾಗದ ಪಾತ್ರ ಮಹತ್ವದ್ದು. ಮಂಗಳೂರಿನಲ್ಲೇ ಕರ್ನಾಟಕದ ಮೊದಲ ಪತ್ರಿಕೆ ಪ್ರಾರಂಭವಾಗಿತ್ತು ಎಂದು ಎಂದು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಎಂಜಿಎಂ ಕಾಲೇಜಿನ ಸಹಯೋಗದಲ್ಲಿ ಮಣಿಪಾಲ ಮೀಡಿಯಾ ನೆಟ್ ವರ್ಕ್ ನಗರದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಸೋಮವಾರ ಆಯೋಜಿಸಿದ  ಜಿಲ್ಲೆಯಲ್ಲಿ ಅರಳಿದ  ಪತ್ರಿಕಾ ರಂಗದ ಧೀಮಂತ  ಸಾಧಕರ  ಶತಮಾನೋತ್ತರ ಸಂಸ್ಮರಣೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು. ಜನರ ಮನಸ್ಸಿನ ಆಶೋತ್ತರ ಹಾಗೂ ನಿರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲ ಮಾಧ್ಯಮಗಳು ಕೆಲಸ  ಮಾಡಬೇಕು. ಮೊದಲನೇ ಪತ್ರಿಕೆ ಇಲ್ಲಿ ಹುಟ್ಟಬೇಕಾದರೆ, ದೂರದೃಷ್ಟಿಯಿರುವ  ಚಿಂಕತರು, ಅದನ್ನು ಬರಹದಲ್ಲಿ ಅಭಿವ್ಯಕ್ತಿ ಮಾಡುವ ಸಾಹಿತಿಗಳು ಮತ್ತು ದೇಶ ಪ್ರೇಮ ಈ ಕರಾವಳಿ  ಭಾಗದಲ್ಲಿ ಪ್ರಮುಖವಾಗಿ ಬೆಳೆದಿದೆ ಎನ್ನುವುದು ಎದ್ದು ಕಾಣುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕೋದ್ಯಮ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತದೆ. ಪ್ರಜಾಪ್ರಭುತ್ವ ಜೀವಂತವಾಗಿದ್ದರೆ ಅದಕ್ಕೆ ಪತ್ರಿಕೆಗಳು ಹಾಗೂ ವಿದ್ಯುನ್ಮಾನ ಮಾಧ್ಯಮ ಕಾರಣ. ಜನರಿಗೆ ಈ ದೇಶದಲ್ಲಿ, ರಾಜ್ಯದಲ್ಲಿ, ಊರಿನಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಇದ್ದಾಗ ಮಾತ್ರ ನಮ್ಮ ದೇಶದ ಬಗ್ಗೆ ಜಾಗೃತಿ ಹಾಗೂ ಕಳಕಳಿ ಉಂಟಾಗಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಪ್ರಜಾಪ್ರಭುತ್ವದ ಉಳಿವಿಗೆ ಪತ್ರಿಕೋದ್ಯಮ ಬಹಳ ದೊಡ್ಡ ಪಾತ್ರವನ್ನು ವಹಿಸಿದೆ ಎಂದರು. ಟೀಕೆಗಳಿಂದ ಎಚ್ಚರಿಕೆಯ ಹೆಜ್ಜೆಯಿಡಲು ಸಾಧ್ಯ. ಪ್ರಜಾಪ್ರಭುತ್ವದ ಭಾರತದಲ್ಲಿ ಪತ್ರಿಕೆಗಳು ನಮ್ಮನ್ನು ಸದಾ ಕಾಲ ಹೊಗಳುತ್ತಿರಬೇಕೆಂದು ನಿರೀಕ್ಷೆ ಮಾಡುವುದು ದಡ್ಡತನ. ಪತ್ರಿಕೆಗಳು ಜಾಗೃತಿ ಮೂಡಿಸಲೆಂದೇ ಇದೆ. ಹಾಗಿದ್ದಾಗಲೇ ಆಡಳಿತ ಮಾಡುವವರಿಗೆ ಎಚ್ಚರಿಕೆಯ ನಡೆ ಇಡಲು ಸಾಧ್ಯವಾಗುತ್ತದೆ. ಟೀಕೆಗಳನ್ನು ಸ್ವಾಗತಿಸಬೇಕು. ಸುಧಾರಣೆಗೆ ಅವಕಾಶಗಳೂ ಸಹ ಇರುತ್ತದೆ. ಪತ್ರಿಕೆಗಳಲ್ಲಿ ಬರುವ ಟೀಕೆಟಿಪ್ಪಣಿಗಳಿಂದಲೇ  ಹಲವಾರು ನಿರ್ಣಯಗಳನ್ನು ಕೈಗೊಂಡು ಸುಧಾರಣೆಗಳನ್ನು ತಂದಿದ್ದೇವೆ ಎಂದರು. ಮಣಿಪಾಲದ ಹಿರಿಯ ಪತ್ರಕರ್ತೆ ಡಾ. ಸಂಧ್ಯಾ ಎಸ್. ಪೈ ಅಧ್ಯಕ್ಷತೆ ವಹಿಸಿದ್ದರು. ಸಚಿವರಾದ ವಿ.ಸುನಿಲ್ ಕುಮಾರ್, ಎಸ್.ಅಂಗಾರ, ಶಾಸಕ ಕೆ. ರಘುಪತಿ ಭಟ್, ಮಣಿಪಾಲ್ ಮೀಡಿಯಾ ನೆಟ್‌ವರ್ಕನ ಕಾರ್ಯನಿರ್ವಾಹಕ ಅಧ್ಯಕ್ಷರಾದ ಟಿ. ಸತೀಶ್ ಪೈ, ಎಂಟಿಲ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಗೌತಮ್ ಎಸ್. ಪೈ, ಮಾಹೆ ವಿವಿ ಸಹ ಕುಲಾಧಿಪತಿ ಡಾ ಎಚ್.ಎಸ್. ಬಲ್ಲಾಳ್, ಎಂಎಂಎನ್‌ಎಲ್‌ನ ಆಡಳಿತ ನಿರ್ದೇಶಕ, ಸಿಇಒ ವಿನೋದ್ ಕುಮಾರ್  ಉಪಸ್ಥಿತರಿದ್ದರು. ಇದಕ್ಕೆ ಮುನ್ನ ಜಿಲ್ಲೆಯ ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸಿದ ಧೀಮಂತ ಹಿರಿಯ ಆರು ಮಂದಿ ಸಾಧಕರ ಜನ್ಮಶತಮಾನೋತ್ತರ ಸಂಸ್ಮರಣೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಉದ್ಘಾಟಿಸಿದರು. ಜಿಪಂ ಸಿಇಒ ಪ್ರಸನ್ನ ಎಚ್. ಉಪಸ್ಥಿತರಿದ್ದರು. ಗಣತ ಲಿಪಿ ತಜ್ಞ ಪ್ರೊ. ಕೆ.ಪಿ.ರಾವ್ ಅಧ್ಯಕ್ಷತೆ ವಹಿಸಿದ್ದರು.