ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪವಿತ್ರವಾದುದು

ಬಾಗಲಕೋಟೆ:, ಏ.13: ಜಗತ್ತಿನಲ್ಲಿಯೇ ಅತೀ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ಭಾರತದಲ್ಲಿ ಪ್ರಜೆಗಳು ಪ್ರಜೆಗಳನ್ನೇ ಆಯ್ಕೆ ಮಾಡುವ ಗುಪ್ತ ಮತದಾನ ಪದ್ದತಿ ಜಾರಿಯಲ್ಲಿದ್ದು, ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕೆಂದು ಜಿ.ಪಂ ಯೋಜನಾ ನಿರ್ದೇಶಕ ಸಿ.ಆರ್.ಮುಂಡರಗಿ ಹೇಳಿದರು.
ನವನಗರದ ನರ್ಸಿಂಗ್ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಜಿಲ್ಲಾಡಳಿತ, ಜಿಲಲಾ ಪಂಚಾಯತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಮಕ್ಕಳಿಂದ ಪಾಲಕರಿಗೆ ಪತ್ರ ಬರೆಯುವ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಸತಿ ನಿಲಯದಲ್ಲಿ ಪ್ರಥಮ ಬಾರಿಗೆ ಮತ ಚಲಾಯಿಸುವ ವಿದ್ಯಾರ್ಥಿಗಳ ಮೂಲಕ ತಮ್ಮ ಪಾಲಕರಿಗೆ ಕಡ್ಡಾಯವಾಗಿ ಮತದಾನ ಮಾಡಬೇಕೆಂಬ ಪತ್ರ ಸಂದೇಶ ಕಳುಹಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಜಿ.ಪಂ ಸಹಾಯಕ ಯೋಜನಾಧಿಕಾರಿ ಭೀಮಪ್ಪ ತಳವಾರ ಮಾತನಾಡಿ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಜೀವನ ಮಾಡುವಂತ ನಾವುಗಳು ಮತದಾನ ಹಕ್ಕನ್ನು ಚಲಾಯಿಸಬೇಕು. ಪಾಲಕರಿಗೆ ಪತ್ರದ ಮೂಲಕ ಸಂದೇಶ ಕಳುಹಿಸುವ ಮೂಲಕ ಯಾವುದೇ ಆಶೆ ಆಕಾಂಕ್ಷೆಗಳಿಗೆ ಒಳಗಾಗದೇ ನಿರ್ಭಿತಿಯಿಂದ ತಮ್ಮ ಹಕ್ಕನ್ನು ಚಲಾಯಿಸುವಂತೆ ಮಾಡಬೇಕೆಂದರು.
ಹಿಂದುಳಿದ ವರ್ಗಗಳ ಇಲಾಖೆಯ ಶಿವು ದರಗಾದ ವಿದ್ಯಾರ್ಥಿಗಳು ಶಿಕ್ಷಣ ವಂತರಾದರೇ ಸಾಲದು ನಾವು ಇರುವ ಪರಿಸರದಲ್ಲಿ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಹಾಗೂ ಪತ್ರಿಕಾ ರಂಗಗಳು ಸಾರ್ವಜನಿಕ ವಲಯದಲ್ಲಿ ಯಾವ ರೀತಿ ಕಾರ್ಯ ನಿರ್ವಹಿಸುತ್ತಿವೆ ಎಂಬುದನ್ನು ಪ್ರತಿಯೊಬ್ಬ ವಿದ್ಯಾರ್ಥಿ ಅರಿಯಬೇಕು ಎಂದರು. ಮತದಾನದಿಂದ ಆಯ್ಕೆಯಾದ ಶಾಸಕರು ಶಾಸಕಾಂತ ನಡೆಸಿದರೆ ಅಲ್ಲಿ ಬಿಡುಗಡೆ ಗೊಳಿಸಿದ ಕಡತಗಳನ್ನು ಕಾರ್ಯಾಂಗ ನಡೆಸುತ್ತದೆ. ಇವರುಗಳ ಮಧ್ಯ ಲೋಪದೋಷಗಳಾದರೆ ನ್ಯಾಯಾಂಗ ತೀರ್ಮಾನಿಸುತ್ತದೆ ಎಂದರು. ಈ ಎಲ್ಲ ವಿಷಯಗಳನ್ನು ಸಾರ್ವಜನಿಕರಿಗೆ ತಿಳಿಸುವ ವ್ಯವಸ್ಥೆಯನ್ನು ಪತ್ರಿಕಾ ರಂಗ ಮಾಡುತ್ತಿದ್ದು, ಇಂತಹ ವಿಷಯಗಳು ನಿಮಗೆ ಮನದಟ್ಟಾಗಲೆಂಬ ಉದ್ದೇಶದಿಂದ ಮತದಾನ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ನರ್ಸಿಂಗ್ ವಿದ್ಯಾರ್ಥಿಗಳಿಂದ ಮತದಾನದ ಜಾಗೃತಿ ಸಂದೇಶವನ್ನು ಪಾಲಕರಿಗೆ ಪತ್ರ ಬರೆಯಿಸಿ ರವಾನಿಸುವ ಕಾರ್ಯ ಮಾಡಲಾಯಿತು. ಮತದಾನ ಜಾಗೃತಿಯ ಬಗ್ಗೆ ಪ್ರತಿಜ್ಞಾ ವಿಧಿಯನ್ನು ಸಹ ಬೋಧಿಸಲಾಯಿತು. ಪ್ರಾರಂಭದಲ್ಲಿ ವಸತಿ ನಿಲಯದ ಮೇಲ್ವಿಚಾರಕ ಆನಂದಕುಮಾರ ಪಾಟೀಲ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಮೇಶ ಚವ್ಹಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕಾ ವಿಸ್ತರಣಾಧಿಕಾರಿ ಸುರೇಶ ಬಡಿಗೇರ, ವಸತಿ ನಿಲಯದ ಮೇಲ್ವಿಚಾರಕರಾದ ಲಕ್ಷ್ಮೀಬಾಯಿ ಒಂಟಗೋಡಿ, ಶಶಿಕಲಾ ಚವ್ಹಾಣ, ರೇಷ್ಮಾ ಕಾತರಕಿ, ಸರೋಜಿನಿ ವಾಲಿಕಾರ, ಯಮನಪ್ಪ ಚಕ್ಕಪ್ಪನವರ ಸೇರಿದಂತೆ ಇತರರು ಉಪಸ್ಥಿತರಿದ್ದರು.