ಪ್ರಜಾಪ್ರಭುತ್ವ ವ್ಯವಸ್ಥೆ ಇರುವುದು ಅಧಿಕಾರಕ್ಕಾಗಿ ಅಲ್ಲ, ಅಭಿವೃದ್ಧಿಗಾಗಿ


 ಸಂಜೆವಾಣಿ ವಾರ್ತೆ
ಕಂಪ್ಲಿ, ಜು.28: ಪ್ರಜಾಪ್ರಭುತ್ವ ವ್ಯವಸ್ಥೆ ಇರುವುದು ಅಧಿಕಾರಕ್ಕಾಗಿ ಅಲ್ಲ, ಅಭಿವೃದ್ಧಿಗಾಗಿ ಇರುವಂತಹದ್ದು ಎಂದು ಎಮ್ಮಿಗನೂರು ಹಂಪಿ ಸಾವಿರ ದೇವರ ಮಹಾಂತರ ಮಠದ ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
  ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಲೋಕೋಪಯೋಗಿ ಇಲಾಖೆಯ 2021-22ನೇ ಸಾಲಿನ ಕೆ.ಕೆ.ಆರ್.ಡಿ.ಬಿ.(ಮೈಕ್ರೋ ಕ್ರಿಯಾ ಯೋಜನೆ)ಯೋಜನೆ ಅಡಿಯಲ್ಲಿ 6 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವ ಕಂಪ್ಲಿಯಿಂದ ಎಮ್ಮಿಗನೂರು ವರೆಗಿನ ರಾಜ್ಯ ಹೆದ್ದಾರಿ 132ರ ಅಗಲೀಕರಣ ಮತ್ತು ಅಭಿವೃದ್ಧಿ ಕಾಮಗಾರಿ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದರು.
 ರಸ್ತೆ, ನೀರು, ಶಿಕ್ಷಣ ವ್ಯವಸ್ಥೆ ಕಲ್ಪಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ಆಶಯವಾಗಿದೆ. ಜನಸಾಮಾನ್ಯರಿಗೆ ಬೆಟ್ಟ ಹತ್ತುವುದು, ಆಕಾಶದಲ್ಲಿ ಹಾರುವುದು ಬೇಕಾಗಿಲ್ಲ, ಉತ್ತಮವಾದ ರಸ್ತೆಯ ನಡೆದಾಡುವುದು ಬೇಕಾಗಿದೆ. ಶಾಸಕ ಜೆ.ಎನ್.ಗಣೇಶ್ ಅವರು ನಮ್ಮನ್ನು ಭೇಟಿಯಾದಗಲೆಲ್ಲ. ನಮ್ಮ ರಸ್ತೆ ಕೆಟ್ಟು ಹೋಗಿದೆ. ಉತ್ತಮವಾದ ರಸ್ತೆ ನಿರ್ಮಿಸಿಕೊಡಿರೆಂದು ಹೇಳುತ್ತಿದ್ದೆವು. ನಮ್ಮ ಮಠದ ಭಕ್ತರು ಸಹಿತ ಕೆಟ್ಟಿರುವ ರಸ್ತೆ ನಿರ್ಮಾಣ ವಿಚಾರವನ್ನು ಶಾಸಕರಿಗೆ ಹೇಳಿ ಗುರುಗಳೆಯೆಂದು ಹೇಳುತ್ತಿದ್ದರು. ಇಂದು ರಸ್ತೆ ಭೂಮಿ ಪೂಜೆ ಆಗುತ್ತಿರುವುದು ಸಂತೋಷದ ವಿಚಾರವಾಗಿದೆ. ನಮ್ಮ ದೇಶದ ಜನರಲ್ಲಿ ಸೇವಾ ಗುಣ ರಕ್ತದಲ್ಲಿ ಬಂದಿರುವಂತಹದ್ದು, ಶಾಸಕರು ಸರ್ಕಾರಿ ಯೋಜನೆಗಳನ್ನು ಸಾಕಾರಗೊಳಿಸಿ, ಜನಮನ ಗೆದ್ದಿದ್ದಾರೆ ಎಂದು ಹೇಳಿದರು.
  ಶಾಸಕ ಜೆ.ಎನ್.ಗಣೇಶ್ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಕುರುಗೋಡು-ಎಮ್ಮಿಗನೂರು ರಸ್ತೆ ಅಭಿವೃದ್ಧಿಯನ್ನು ಈಗಾಗಲೆ ಮಾಡಲಾಗಿದೆ. ರಾಜ್ಯ ಹೆದ್ದಾರಿ 132ರ ಅಗಲೀಕರಣ ಮತ್ತು ಅಭಿವೃದ್ಧಿ ಕಾಮಗಾರಿಗಾಗಿ 16 ಕೋಟಿ ಮೀಸಲಿಟ್ಟಿದ್ದು, ಎಮ್ಮಿಗನೂರಿನಿಂದ ನೆಲ್ಲುಡಿವರೆಗೆ 6ಕೋಟಿ, ನೆಲ್ಲುಡಿಯಿಂದ ಕೊಟ್ಟಾಲ್‍ವರೆಗೆ 7 ಕೋಟಿ, ಕೊಟ್ಟಾಲ್‍ನಿಂದ ಕಂಪ್ಲಿವರೆಗೆ 3 ಕೋಟಿ ವೆಚ್ಚ ಮೀಸಲಿಟ್ಟಿದ್ದು, ಈ ಹೆದ್ದಾರಿ 132ರ ಅಗಲೀಕರಣ ಮತ್ತು ಅಭಿವೃದ್ಧಿ ಕಾಮಗಾರಿ ಒಟ್ಟು 3 ಹಂತದಲ್ಲಿ ನಡೆಯಲಿದೆ ಎಂದು ತಿಳಿಸಿದರು.
  ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಬಿ.ಸದಾಶಿವಪ್ಪ, ವೆಂಕಟರಾಮರಾಜು, ಕಾಂಗ್ರೆಸ್ ಕಾರ್ಯಕರ್ತರು, ಹಿರಿಯ ಮುಖಂಡರು ಪಾಲ್ಗೊಂಡಿದ್ದರು.
  27ಕಂಪ್ಲಿ01 ಕಂಪ್ಲಿ ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ 6 ಕೋಟಿ ವೆಚ್ಚದಲ್ಲಿ ಕಂಪ್ಲಿಯಿಂದ ಎಮ್ಮಿಗನೂರು ವರೆಗಿನ ರಾಜ್ಯ ಹೆದ್ದಾರಿ 132ರ ಅಗಲೀಕರಣ ಮತ್ತು ಅಭಿವೃದ್ಧಿ ಕಾಮಗಾರಿಗೆ ಶಾಸಕ ಜೆ.ಎನ್.ಗಣೇಶ್ ಭೂಮಿ ಪೂಜೆ ನೆರವೇರಿಸಿದರು. ಎಮ್ಮಿಗನೂರು ಹಂಪಿ ಸಾವಿರ ದೇವರ ಮಹಾಂತರ ಮಠದ ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು.