ಪ್ರಜಾಪ್ರಭುತ್ವ ವ್ಯವಸ್ಥೆಯ ಸಫಲತೆಯಲ್ಲಿ ಆಡಳಿತ ವರ್ಗದ ಪಾತ್ರ ಅಮೋಘ

ಕಲಬುರಗಿ:ಎ.21: ದೇಶದ ಎಲ್ಲಾ ನಾಗರಿಕರಿಗೂ ಪ್ರಜಾಪ್ರಭುತ್ವದ ಫಲ ದೊರೆತು ಕಲ್ಯಾಣ ರಾಷ್ಟ್ರ ನಿರ್ಮಾಣವಾಗಬೇಕು. ಅದಕ್ಕಾಗಿ ಸರ್ಕಾರ ಅನೇಕ ಯೋಜನೆ, ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತದೆ. ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ, ನೈಜ ಫಲಾನುಭವಿಗೆ ಸೌಕರ್ಯಗಳನ್ನು ದೊರಕಿಸಿಕೊಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯ ಸಫಲತೆಗೆ ಆಡಳಿತ ವರ್ಗದ ಕೊಡುಗೆ ಅಮೋಘವಾಗಿದೆಯೆಂದು ಐಎಎಸ್ ಅಧಿಕಾರಿ, ಮಹಾನಗರ ಪಾಲಿಕೆ ಆಯುಕ್ತ ಲೋಖಂಡೆ ಸ್ನೇಹಲ್ ಸುಧಾರಕ ಅಭಿಮತ ವ್ಯಕ್ತಪಡಿಸಿದರು.

    ನಗರದ ಮಹಾನಗರ ಪಾಲಿಕೆಯ ಆಡಳಿತ ಕಚೇರಿಯಲ್ಲಿ 'ಬಸವೇಶ್ವರ ಸಮಾಜ ಸೇವಾ ಬಳಗ' ಹಾಗೂ 'ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ' ಇವುಗಳ ವತಿಯಿಂದ ಬುಧವಾರ ಸರಳವಾಗಿ ಹಮ್ಮಿಕೊಳ್ಳಲಾಗಿದ್ದ 'ರಾಷ್ಟ್ರೀಯ ನಾಗರಿಕ ಸೇವಾ ದಿನಾಚರಣೆ' ಕಾರ್ಯಕ್ರಮದಲ್ಲಿ ಸತ್ಕಾರ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

   ಆಡಳಿತ ವರ್ಗದ ಅಧಿಕಾರಿಗಳು ಅತ್ಯಂತ ದಕ್ಷ, ಪಾರದರ್ಶಕವಾಗಿ ಕಾರ್ಯನಿರ್ವಹಿಸುವುದು ಅತ್ಯಂತ ಅವಶ್ಯಕವಾಗಿದೆ. ಸರ್ಕಾರ ಯಶಸ್ಸು ಮತ್ತು ಅಪಯಶಸ್ಸು ಆಡಳಿತ ವರ್ಗದ ಅಧಿಕಾರಿಗಳ ಕಾರ್ಯವೈಖರಿಯ ಮೇಲೆ ನಿಂತಿದೆ. ಅಧಿಕಾರಿಗಳು ಪರಿಣಾಮಕಾರಿ ನಿರ್ವಹಣೆ, ಜವಾಬ್ದಾರಿ, ಮುಂದಾಳತ್ವದಲ್ಲಿ ಎಲ್ಲಾ ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದರೆ, ಖಂಡಿತವಾಗಿಯೂ ಸಾರ್ವಜನಿಕರಿಗೆ ಸೂಕ್ತ ಕಾಲಕ್ಕೆ ಅವರಿಗೆ ಸೇವೆಯನ್ನು ಒದಗಿಸಲು ಸಾಧ್ಯವಾಗುತ್ತದೆಯೆಂದು ಮಾರ್ಮಿಕವಾಗು ನುಡಿದರು.

  ಮಹಾನಗರ ಪಾಲಿಕೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ನಾಗರತ್ನ ದೇಶಮಾನ್ಯೆ ಮಾತನಾಡಿ, ಸುರೇಂದ್ರನಾಥ ಬ್ಯಾನರ್ಜಿಯವರು ನಾಗರಿಕ ಆಡಳಿತ ವರ್ಗದ ಸಂಘವನ್ನು ಸ್ಥಾಪಿಸಿ, ದೇಶದ ಸ್ವಾತಂತ್ರ್ಯಕ್ಕಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಆಡಳಿತ ಅಧಿಕಾರಿಗಳು ಜನಸಾಮಾನ್ಯರ ಧ್ವನಿಯಾಗಿ ಸೇವೆ ಸಲ್ಲಿಸಬೇಕೆಂಬ ಮಾತು ಪ್ರಸ್ತುತವಾಗಿದೆ. ಅಂತಹ ಮಹನೀಯರ ಆದರ್ಶ ನಮ್ಮೆಲ್ಲರಿಗೂ ದಾರಿದೀಪವಾಗಿದೆಯೆಂದರು.

  ಕಾರ್ಯಕ್ರಮದಲ್ಲಿ ಪ್ರಮುಖರಾದ ಎಚ್.ಬಿ.ಪಾಟೀಲ, ಸುನೀಲಕುಮಾರ ವಂಟಿ, ನರಸಪ್ಪ ಬಿರಾದಾರ ದೇಗಾಂವ, ಬಸವರಾಜ ಎಸ್.ಪುರಾಣೆ ಸೇರಿದಂತೆ ಪಾಲಿಕೆಯ ಸಿಬ್ಬಂದಿ ಪಾಲ್ಗೊಂಡಿದ್ದರು.