ಪ್ರಜಾಪ್ರಭುತ್ವ ವಿರೋಧಿ ನಡೆ ಖಂಡಿಸಿ ಮುಂದುವರೆದ ಧರಣಿ

ಮಂಡ್ಯ:ಏ:18: ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಕಳೆದ 27 ದಿನಗಳಿಂದ ಸತತ ಧರಣಿ ನಿರತ ಮಹಿಳೆಯರು ಮಕ್ಕಳೊಂದಿಗೆ ಬಿಸಿಲು ಮಳೆಯನ್ನೂ ಲೆಕ್ಕಿಸದೆ ಹೋರಾಟ ನಡೆಸುತ್ತಿದ್ದರೂ, ಜಿಲ್ಲಾಡಳಿತ ನಿರ್ದಯವಾಗಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎಲ್. ತುಳಸೀಧರ್ ಖಂಡಿಸಿದರು.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿದ ಅವರು, ಸ್ವಂತ ಮನೆ ನಮ್ಮ ಹಕ್ಕು ಹೋರಾಟ ಸಮಿತಿ ನೇತೃತ್ವದಲ್ಲಿ ಬೂದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ಮಹಿಳೆಯರು ಸ್ವಂತ ಸೂರಿಗಾಗಿ ನಡೆಸುತ್ತಿರುವ ಅನಿರ್ಧಿಷ್ಟಾವತಿ ಅಹೋರಾತ್ರಿ ಧರಣಿಯು 27ನೇ ದಿನಕ್ಕೆ ಕಾಲಿರಿಸಿದೆ. ಈ ಹಿಂದೆಯೂ ಧರಣಿ ನಡೆಸಿ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರರು ಕೊಟ್ಟ ಭರವಸೆಗಳೆಲ್ಲ ಹುಸಿಯಾಗಿದ್ದು ನಾಚಿಕೆಗೇಡಿನ ವಿಷಯ. ಬೂದನೂರು ಗ್ರಾ.ಪಂ. ವ್ಯಾಪ್ತಿಯ ನಿವೇಶನ ರಹಿತರು ಕಳೆದ ನಾಲ್ಕು ವರ್ಷಗಳಿಂದ ಸರ್ಕಾರಿ ಭೂಮಿಯಲ್ಲಿ ಆಶ್ರಯ ನಿವೇಶನ ಹಂಚಿಕೆ ಮಾಡಲು ಹಲವು ಮನವಿ, ಹೋರಾಟ, ಧರಣಿ ನಡೆಸಿದರೂ, ಅಧಿಕಾರಿಗಳು ಕೇವಲ ಭರವಸೆಯಲ್ಲೇ ಕಾಲ ಕಳೆಯುತ್ತಿರುವುದು ಅಲ್ಲದೆ, ಸಂಬಂಧಿಸಿದ ದಾಖಲೆಗಳನ್ನು ಕಾಣೆಯಾಗಿಸಿ, ಸರ್ಕಾರಿ ಭೂಮಿಯಲ್ಲಿ ಬೆಳೆ ಹಾಕಲು ಕುಮ್ಮಕ್ಕು ನೀಡಿದ್ದಾರೆಂಬ ದೂರನ್ನು ಗಂಭೀರವಾಗಿ ಪರಿಗಣಿಸದಿರುವುದು ಅಕ್ಷಮ್ಯವಾಗಿದೆ ಎಂದು ದೂರಿದ್ದಾರೆ.
ನೂತನ ಜಿಲ್ಲಾಧಿಕಾರಿ ಎಸ್. ಅಶ್ವತಿ ಅವರು ಧರಣಿ ನಿರತ ಮಹಿಳೆಯರ ನೋವಿಗೆ ಸ್ಪಂಧಿಸಲಿ, ಸರ್ಕಾರಿ ಭಮಿಯ ಅಳತೆ, ಸ್ಕೆಚ್ ಮಾಡಿದ್ದುಘಿ, ಅದರಂತೆ ಜಿಲ್ಲಾಡಳಿತ ನಿವೇಶನ ಯೋಗ್ಯ ಸರ್ಕಾರಿ ಭೂಮಿ ದೊರಕಿಸಿದರೆ ಅಷ್ಟು ಕುಟುಂಬಗಳಿಗೆ ನೆಲೆಯಾಗುತ್ತದೆ ಎಂದು ತಿಳಿಸಿದ್ದಾರೆ.
ಕೂಡಲೇ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರರು ಸ್ವಂತ ಸೂರಿಲ್ಲದ ಧರಣಿ ನಿರತರ ಸಮಸೆಯನ್ನು ತಕ್ಷಣ ಪರಿಹರಿಸಬೇಕಾಗಿದೆ. ಇಲ್ಲದಿದ್ದರೆ, ಸಾರ್ವಜನಿಕರೇ ಜಿಲ್ಲಾಡಳಿತದ ನಿರ್ಲಕ್ಷ್ಯದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.