ಪ್ರಜಾಪ್ರಭುತ್ವ ಬಲಗೊಳಿಸಲು ಮತದಾನ ಪ್ರಕ್ರಿಯೆಯಲ್ಲಿ ತಪ್ಪದೇ ಭಾಗವಹಿಸಿ

ಮಂಡ್ಯ: ಏ.30:- ಪ್ರಜಾಪ್ರಭುತ್ವ ಬಲಗೊಳಿಸುವ ನಿಟ್ಟಿನಲ್ಲಿ ಚುನಾವಣೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ ಎಲ್ಲರೂ ತಪ್ಪದೇ ಭಾಗವಹಿಸಿ ಎಂದು ಜಿಲ್ಲಾಧಿಕಾರಿ ಡಾ.ಹೆಚ್.ಎನ್.ಗೋಪಾಲಕೃಷ್ಣ ಕರೆ ನೀಡಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಪತ್ರಕರ್ತರೊಂದಿಗೆ ನಡೆಸಿದ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಯುವ ಜನತೆಯಿಂದ ಬದಲಾವಣೆ ಸಾಧ್ಯ.ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಯುವಜನತೆ ಆಸೆ ಆಮಿಷಗಳಿಗೆ ಒಳಗಾಗದೇ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದರು.
ಜನರಿಂದ, ಜನರಿಗಾಗಿ, ಜನರಿಗೋಸ್ಕರ ರೂಪುಗೊಂಡಿರುವ ಸಂವಿಧಾನದಡಿಯಲ್ಲಿ ಸ್ವಾತಂತ್ರ?ಯಾನಂತರ 75 ವರ್ಷ ಸಾಗಿ ಬಂದಿರುವ ಭಾರತ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ. 1952 ರಲ್ಲಿ ನಡೆದ ಪ್ರಥಮ ಚುನಾವಣೆಯಿಂದ ಹಲವಾರು ಬದಲಾವಣೆ, ಸುಧಾರಣೆಗಳು ಕಂಡುಬಂದಿದೆ.1952 ರಿಂದ 1990 ರವರೆಗೆ ಒಂದು ಭಾಗ. ಈ ಅವಧಿಯಲ್ಲಿ ಜನಸಂಖ್ಯೆ ಮತ್ತು ಸಾಕ್ಷರತೆ ಕಡಿಮೆ ಇದ್ದ ದಿನಗಳಲ್ಲಿ ನಡೆದ ಚುನಾವಣೆಗಳಲ್ಲಿ ನೈತಿಕ ಮತದಾನ ನಡೆಯುತ್ತಿತ್ತು. 1990 ರ ನಂತರ ಇನ್ನೊಂದು ಭಾಗ. ಟಿ.ಎನ್.ಶೇಷನ್ ಚುನಾವಣಾಧಿಕಾರಿಯಾಗಿ ಬಂದ ನಂತರ ಹಲವಾರು ಬದಲಾವಣೆಗಳನ್ನು ಜಾರಿಗೆ ತಂದರು.ಚುನಾವಣಾ ಅಕ್ರಮಕ್ಕೆ ಕಡಿವಾಣ ಹಾಕಿ ಎಲ್ಲರಿಗೂ ಸಮಾನ ವೇದಿಕೆ ಕಲ್ಪಿಸಲಾಯಿತು. ಚುನಾವಣೆ ವೆಚ್ಚಕ್ಕೆ ಮಿತಿ ಹಾಕಲಾಯಿತು.ಗುಪ್ತ ಮತದಾನ ಪದ್ಧತಿ ಜಾರಿಗೆ ತರಲಾಯಿತು. ಮಂಡ್ಯ ಜಿಲ್ಲೆಯಲ್ಲಿ ರಾಜಕೀಯ ಸಾಕ್ಷರತೆ ಚೆನ್ನಾಗಿದೆ. ಜಿಲ್ಲೆಯಲ್ಲಿ ನಡೆದ ಎಲ್ಲ ಚುನಾವಣೆಗಳಲ್ಲಿ ರಾಜ್ಯದ ಸರಾಸರಿಗಿಂತ ಶೇ.10 ರಷ್ಟು ಹೆಚ್ಚು ಮತದಾನವಾಗಿದೆ. ಇನ್ನಷ್ಟು ಉತ್ತಮಪಡಿಸಲು ಸ್ವೀಪ್ ನಂತಹ ಕಾರ್ಯಕ್ರಮಗಳನ್ನು ಜಾರಿಗೆ ತಂದು ಜಾಗೃತಿ ಮೂಡಿಸಲಾಗುತ್ತಿದೆ. ಸಾಕ್ಷರತೆ ಹೆಚ್ಚಿರುವ ನಗರ ಪ್ರದೇಶದಲ್ಲಿ ಮತದಾನ ಪ್ರಮಾಣ ಕಡಿಮೆಯಾಗುತ್ತಿದೆ.ಇದಾಗಬಾರದು ಎಂದರು. ಅರ್ಹ ವ್ಯಕ್ತಿ ಆಯ್ಕೆಗೆ ನಿಮಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಮತದಾರರ ನಿರ್ಲಕ್ಷ್ಯತೆಯನ್ನು ಹೋಗಲಾಡಿಸಲು ಕ್ರಮ ವಹಿಸಲಾಗಿದೆ.ಸೂಕ್ತ ಅಭ್ಯರ್ಥಿಗಳಿಲ್ಲದಿದ್ದಲ್ಲಿ ‘ನೋಟಾ’ ಕ್ಕೆ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ನಾಗರಿಕರು ಚುನಾವಣೆಯಲ್ಲಿ ಭಾಗವಹಿಸಲಿ ಎನ್ನುವ ದೃಷ್ಟಿಯಿಂದ ಬುಧವಾರ ಚುನಾವಣೆ ನಿಗದಿಪಡಿಸಲಾಗಿದೆ. ಅಂದು ಪ್ರವಾಸಿತಾಣಗಳನ್ನು ಬಂದ್ ಮಾಡಲಾಗುವುದು ಎಂದು ತಿಳಿಸಿದರು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗಗಳು ಒಳ್ಳೆಯ ಉದ್ದೇಶಕ್ಕಾಗಿ ಸಮನ್ವಯತೆಯಿಂದ ಕೆಲಸ ಮಾಡಿದರೆ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತದೆ ಎಂದರು.
ಗುಪ್ತ ಮತದಾನವನ್ನು ನಿಖರಗೊಳಿಸುವ ನಿಟ್ಟಿನಲ್ಲಿ ಇವಿಎಂ ಮೆಷಿನ್‍ಗಳನ್ನು ಕೋಡಿಂಗ್ ಮಾಡಿದ ನಂತರ ಮತ ಎಣಿಕೆ ನಡೆಸುವ ಬಗ್ಗೆ ಹಾಗೂ ನೋಟಾ ಮತದಾನಕ್ಕೆ ಮೌಲ್ಯ ಕಲ್ಪಿಸಿಕೊಡುವ ಬಗ್ಗೆ ಚಿಂತನೆಗಳು ನಡೆಯುತ್ತಿವೆ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಸಿ.ಮಂಜುನಾಥ್ ಮಾತನಾಡಿ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲ್ಲಿ ಚುನಾವಣೆಗೆ ಮಹತ್ವವಿದೆ.ಜನತೆ ಚುನಾವಣೆಯಲ್ಲಿ ಹಬ್ಬದ ರೀತಿ ಭಾಗವಹಿಸಬೇಕು. ಜಿಲ್ಲೆಯಲ್ಲಿ ಹಿಂದೆ ನಡೆದ ಚುನಾವಣೆಗಳಲ್ಲಿ ಹಲವು ಸಂಘರ್ಷಗಳು ನಡೆದು ಜಿಲ್ಲಾಡಳಿತಕ್ಕೆ ಮತ್ತು ನಾಗರಿಕರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗುತ್ತಿತ್ತು. ಇಂದು ಪ್ರಬುದ್ಧ ಮತದಾರರು ಶಾಂತಿಯುತ ಮತದಾನದಲ್ಲಿ ಭಾಗವಹಿಸುತ್ತಿದ್ದಾರೆ. ಮಾಧ್ಯಮದವರು ಸಹ ಜನರಲ್ಲಿ ಜಾಗೃತಿ ಮೂಡಿಸಿ ಒಳ್ಳೆಯ ಸರ್ಕಾರ ಬರುವಂತೆ ಮಾಡುವಲ್ಲಿ ಪ್ರಮಖ ಪಾತ್ರ ವಹಿಸಬೇಕಿದೆ.ಜನಸ್ನೇಹಿ ಸರ್ಕಾರ ರಚನೆಯಾಗಿ ಜನತೆಗೆ ಒಳಿತಾಗಲಿ ಎಂದರು.
ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಸೋಮಶೇಖರ ಕೆರಗೋಡು, ಜಿಲ್ಲಾ ವಾರ್ತಾಧಿಕಾರಿ ಎಸ್.ಹೆಚ್. ನಿರ್ಮಲ, ಜಿಲ್ಲಾ ಸಂಘದ ಕಾರ್ಯದರ್ಶಿ ನವೀನ್ ಕುಮಾರ್ ಹಾಜರಿದ್ದರು.