ಪ್ರಜಾಪ್ರಭುತ್ವ ಗಟ್ಟಿಗೊಳ್ಳಲು ಮತದಾನ ಮರೆಯದಿರಿ

ಶಿವಮೊಗ್ಗ.ಏ.೧೪ : ವಿಶ್ವದಲ್ಲಿಯೇ ನಮ್ಮ ರಾಷ್ಟ್ರ ಪ್ರಜಾಪ್ರಭುತ್ವಕ್ಕೆ ಮಾದರಿಯಾಗಿದೆ. ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷಗಳು ಕಳೆದಿದೆ. ಅಮೃತಮಹೋತ್ಸವ ಆಚರಣೆ ಮಾಡಿ ಸಂಭ್ರಮಿಸಿದ್ದೇವೆ. ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಪ್ರತಿನಿಧಿಯನ್ನು ಐದು ವರ್ಷಗಳಿಗೊಮ್ಮೆ ಚುನಾವಣೆಯ ಮೂಲಕ ಆಯ್ಕೆಮಾಡಿಕೊಳ್ಳುವ ಅವಕಾಶ ನೀಡಲಾಗಿದೆ. ಚುನಾವಣೆಯ ದಿನ ಮತಗಟ್ಟೆಗೆ ಹೋಗಿ ನಮ್ಮ ಪವಿತ್ರವಾದ ಮತವನ್ನು ಯೋಗ್ಯ ಅಭ್ಯರ್ಥಿಗೆ ದಾನ ಮಾಡುವ ಕಾರ್ಯದಲ್ಲಿ ಭಾಗಿಗಳಾಗಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಿ. ಮಂಜುನಾಥ ಕರೆ ನೀಡಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮತ್ತು ಮತದಾರರಿಗೆ ಮತದಾನದ ಜಾಗೃತಿ ಮತ್ತು ಅರಿವು ಸಮಿತಿ ಸಹಯೋಗದಲ್ಲಿ ನಗರದ ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿನಿಯರ ನಿಲಯ ಆವರಣದಲ್ಲಿ ಮತದಾನದ ಮಹತ್ವ, ಕವಿಗಳು-ಕಲಾವಿದರ ಕಾವ್ಯ ಸಂಭ್ರಮ-ಜಾನಪದ ಲಾವಣಿ ಮೆರಗು ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.ನಾವು ಪ್ರಜೆಗಳು ನಮ್ಮ ನೈತಿಕತೆ ಮರೆಯಬಾರದು. ಯಾವುದೇ ಆಮಿಷಗಳಿಗೆ ಬಲಿಯಾಗಬಾರದು. ನಾವೆಲ್ಲರೂ ವಿದ್ಯಾವಂತರು. ನೀವು ನಿಮ್ಮ ಮನೆಯ, ಸುತ್ತಲಿನ ಪರಿಸರಕ್ಕೆ ಈ ಮಹತ್ವ ಸಾರುವ ರಾಯಬಾರಿಗಳಂತೆ ಕಾರ್ಯನಿರ್ವಹಿಸಲು ಮನವಿ ಮಾಡಿದರು.