ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾನಕ್ಕೆ ತನ್ನದೇ ಆದ ಮಹತ್ವವಿದೆ: ಮಂಜುನಾಥ್‍

ಮಂಡ್ಯ: ಮೇ.08:- ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾನಕ್ಕೆ ತನ್ನದೇ ಆದ ಮಹತ್ವವಿದೆ ಎಂದು ನಗರಸಭೆ ಆಯುಕ್ತ ಮಂಜುನಾಥ್ ಹೇಳಿದರು.
ನಗರದ ಮಹಾವೀರ ವೃತ್ತದಲ್ಲಿ ಭಾರತ ಚುನಾವಣ ಆಯೋಗ, ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಆಯೋಜಿಸಿದ್ದ ಬೀದಿ ನಾಟಕದ ಮೂಲಕ ಮತದಾರರ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮೇ.10ರಂದು ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದೆ, ರಾಜ್ಯ ವ್ಯಾಪ್ತಿಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಜಾಗೃತಿ ಕಾರ್ಯ ನಡೆಯುತ್ತಿದೆ, ಮತದಾರರು ಸ್ವಯಂ ಪ್ರೇರಣೆಯಿಂದ ಮತದಾನ ಪ್ರಕಿಯೆಯಲ್ಲಿ ಪಾಲ್ಗೊಂಡು ತನ್ನ ಹಕ್ಕುಗಳನ್ನು ಚಲಾಯಿಸಬೇಕು ಎಂದು ನುಡಿದರು.
ಬೀದಿನಾಟಕ ಮೂಲಕ ‘ವೋಟ್ಮಾಡ್ರಿ ವೋಟ್’ ಬೀದಿ ನಾಟಕ ಪ್ರದರ್ಶನದಲ್ಲಿ ನೋಡುಗರ ಮನಗೆದ್ದ ನಾಟಕ ಕಲಾವಿದರು ಮತದಾನದ ಮಹತ್ವವನ್ನು ಮನವರಿಕೆ ಮಾಡಿಕೊಟ್ಟರು.
ಅರ್ಧ ಗಂಟೆಯ ‘ವೋಟ್ ಮಾಡ್ರಿ ವೋಟ್’ ನಾಟಕ ನಾಲ್ಕು ಕಿರು ದೃಶ್ಯಗಳದ್ದು. ಮೊದಲ ಬಾರಿ ವೋಟ್ ಮಾಡುವವರಿಗೆ ಚುನಾವಣಾ ಆಯೋಗ ಪ್ರತ್ತೇಕ ಬೂತ್ ವ್ಯವಸ್ಥೆ ಕಲ್ಪಸಿದೆ. 80 ವರ್ಷ ವಯಸ್ಸು ಮೀರಿದ ಹಿರಿಯ ನಾಗರಿಕರಿಗೆ ಮನೆಗೆ ಹೋಗಿ ಮತದಾನ ಮಾಡುವ ಅವಕಾಶಗಳ ಕುರಿತು ಮೊದಲೆರಡು ದೃಶ್ಯಗಳಲ್ಲಿ ನಾಟಕ ಕಟ್ಟಕೊಟ್ಟಿತು.
ವಿಕಲಾಂಗ ಚೇತನರಿಗೆ ಯಾವ ತೊಂದರೆಯಾಗದಂತೆ ಸಿಗುವ ಸೌಲಭ್ಯಗಳ ಕುರಿತು ಮೂರನೆಯ ದೃಶ್ಯದಲ್ಲಿ ಚಿತ್ರಿತವಾದರೆ, ನಾ ಬಿಟ್ಟಿ ವೋಟ್ ಮಾಡಂಗಿಲ್ಲ, ನಮ್ಮ ಮನೆಯಲ್ಲಿ 5 ಓಟುಗಳಿವೆ, 1ತೋಲ ಚಿನ್ನ ಕೊಡಿ ಮತಹಾಕುತ್ತಿನಿ ಎನ್ನುವ ಮನೆ ಒಡೆತಿಗೆ ಮತದಾನದ ಮಹತ್ವ ಮತ್ತು ಪ್ರಜಾಪ್ರಭುತ್ವದ ತಿಳುವಳಿಕೆ ನೀಡಿ ಪರಿವರ್ತಿಸುವ ಹಾಸ್ಯ ದೃಶ್ಯಗಳೊಂದಿಗೆ ನಾಟಕ ಮುಕ್ತಾಯವಾಯಿತು.
ಕಾರ್ಯಕ್ರಮದಲ್ಲಿ ಸ್ವೀಪ್ ಸಮಿತಿ ಅಧಿಕಾರಿ ತುಳಸೀಧರ್, ಬೀದಿನಾಟಕ ಕಲಾವಿದರ ಒಕ್ಕೂಟದ ಶೇಖರ್, ಮಂಜುಳಾ, ವೈರಮುಡಿ, ಬಸವರಾಜು, ಜಯಮ್ಮ, ಚನ್ನಮ್ಮ ಮತ್ತಿತರರಿದ್ದರು.