ಪ್ರಜಾಪ್ರಭುತ್ವದ ಯಶಸ್ಸಿಗೆ ಕಡ್ಡಾಯ ಮತದಾನ: ಡಾ. ಶಶಿಧರ

ಅಫಜಲಪುರ:ಎ.5: ಜಗತ್ತಿನ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ದೇಶದಲ್ಲಿ ಕಡ್ಡಾಯವಾಗಿ ಮತದಾನ ಮಾಡಿದಾಗ ಮಾತ್ರ ನಮ್ಮ ಪ್ರಜಾಪ್ರಭುತ್ವವು ಯಶಸ್ವಿಯಾಗುತ್ತದೆ ಎಂದು ಸಮುದಾಯ ಆರೋಗ್ಯ ಶಿಕ್ಷಣಾಧಿಕಾರಿ ಡಾ. ಶಶಿಧರ ಬೆಳೆ ತಿಳಿಸಿದರು.

ತಾಲೂಕಿನ ಚವಡಾಪುರ ಗ್ರಾಮದ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಂಡ ನೆಹರು ಯುವ ಕೇಂದ್ರ ಕಲಬುರ್ಗಿ ಮಾತೃಭೂಮಿ ಸೇವಾ ಯುವಕ ಸಂಘ ಹಾಗೂ ವಿಕಾಸ ಸೇವಾ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಮತದಾನ ಜಾಗೃತಿ ಅಭಿಯಾನ ಹಾಗೂ ಆರೋಗ್ಯದ ಮಹತ್ವ ಕಾರ್ಯಾಗಾರವನ್ನು ಉದ್ಘಾಟಿಸಿದ ಅವರು ಮತದಾನ ಮಾಡುವಾಗ ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ನಮ್ಮ ದೇಶ, ನೆಲ, ಜನರ ರಕ್ಷಣೆ ಮಾಡುವ ವ್ಯಕ್ತಿಯನ್ನು ಆರಿಸಿ ತರಲು ಯುವಕರು ಒಂದಾಗಬೇಕೆಂದು ಕರೆ ನೀಡಿದರು.

ಹಾಗೂ ಯುವಕರು ಯಾವುದೇ ದುಶ್ಚಟಗಳಿಗೆ ಒಳಗಾಗದೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು ಚುನಾವಣೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಪ್ರಾಚಾರ್ಯ ಮಲ್ಲಪ್ಪ ಜಮಾದಾರ ಹಾಗೂ ಮಾತೃಭೂಮಿ ಸೇವಾ ಯುವಕ ಸಂಘದ ಕಾರ್ಯದರ್ಶಿ ಭೀಮರಾಯ ಇಟಗೊಂಡ ಪ್ರಾಸ್ತಾವಿಕ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಗ್ರಾ.ಪಂ ಕಾರ್ಯದರ್ಶಿ ಮಲ್ಲಯ್ಯ ಹಿರೇಮಠ, ವಿಕಾಸ ಸೇವಾ ಸಂಸ್ಥೆಯ ಕಾರ್ಯದರ್ಶಿ ಅಶೋಕ ಶಿವೂರ, ನೆಹರು ಯುವ ಕೇಂದ್ರದ ಸ್ವಯಂ ಸೇವಕ ಪ್ರವೀಣ್ ಇಟಗೊಂಡ ಸೇರಿದಂತೆ ಕೈಗಾರಿಕಾ ತರಬೇತಿ ಕೇಂದ್ರದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.