ಪ್ರಜಾಪ್ರಭುತ್ವದ ಬಹುದೊಡ್ಡ ಹಬ್ಬ ಮತದಾನ


ಸಂಜೆವಾಣಿ ವಾರ್ತೆ
ಸಂಡೂರು:ಏ:20: ಮತದಾನ ಪ್ರಜಾಪ್ರಭುತ್ವದ ಬಹುದೊಡ್ಡ ಹಬ್ಬ ನಾವು ಸಂಭ್ರಮದಿಂದ ಮತದಾನ ಮಾಡಬೇಕು ಎಂದು ಸಂಡೂರು ತಾಲ್ಲೂಕು ಪಂಚಾಯತಿ ಸಹಾಯಕ ನಿರ್ದೇಶಕ (ಪಂಚಾಯತ್ ರಾಜ್ ) ದುರುಗಪ್ಪ ಅವರು ಅಭಿಪ್ರಾಯ ಪಟ್ಟರು. ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಬಳ್ಳಾರಿ, ತಾಲೂಕು ಆಡಳಿತ ಹಾಗೂ ತಾಲೂಕು ಸ್ವೀಪ್ ಸಮಿತಿ ಸಂಡೂರು ಹಾಗೂ ಗ್ರಾಮ ಪಂಚಾಯಿತಿ ಚೋರನೂರು ಇವರುಗಳ ಸಹಯೋಗದಲ್ಲಿ ನಲ್ಲಿ ಚೋರನೂರುನಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಮತದಾನ ಜಾಗೃತಿ ಎತ್ತು ಬಂಡಿ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಇವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಾವೆಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದು ಹೇಳಿದರು.
 ಕಾರ್ಯಕ್ರಮದಲ್ಲಿ ಮಾತನಾಡಿದ ಸಂಡೂರು ತಾಲೂಕು ಮತದಾರ ಸಾಕ್ಷರತಾ ಕೇಂದ್ರದ ತಾಲೂಕು ನೋಡಲ್ ಅಧಿಕಾರಿ ಜಿ. ಎಮ್. ಪ್ರದೀಪ್ ಕುಮಾರ್ ಅವರು ಮತದಾನವೆನ್ನುವುದು ಸಂವಿಧಾನ ನಮಗೆ ನೀಡಿರುವ ಅಮೂಲ್ಯ ಹಕ್ಕು, ಅದನ್ನು ತಪ್ಪದೇ ಚಲಾಯಿಸುವುದು ನಮ್ಮ ನೈತಿಕ ಕರ್ತವ್ಯವಾಗಿದೆ. ತಾಲೂಕು ಆಡಳಿತ ಹಾಗೂ ತಾಲೂಕು ಸ್ವೀಪ್ ಸಮಿತಿ ವತಿಯಿಂದ ತಾಲೂಕಿನಾದ್ಯಂತ ಅನೇಕ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗಿದ್ದು ನಾಗರಿಕರೆಲ್ಲರೂ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತ ಚಲಾಯಿಸುವ ಮೂಲಕ ಸಂವಿಧಾನವನ್ನು ಗೌರವಿಸಬೇಕು ಹಾಗೂ ನಮ್ಮ ನೈತಿಕ ಕರ್ತವ್ಯವನ್ನು ಪಾಲಿಸಬೇಕು ಎಂದು ತಿಳಿಸಿದರು.
ಟಿಎಲ್‍ಎಮ್ ಟಿ ರಮೇಶ್ ಮತ್ತು ಸಿದ್ದೇಶ್ ಪ್ರತಿಜ್ಞಾವಿಧಿ ಬೋಧಿಸಿದರು. ಗ್ರಾಮದಲ್ಲಿ ಮತದಾನ ಜಾಗೃತಿ ಸಾರುವ ಫಲಕಗಳೊಂದಿಗೆ ಸಿಂಗರಿಸಿದ ಎತ್ತು ಬಂಡಿಗಳ ಮೆರವಣಿಗೆಯೊಂದಿಗೆ ಸಂಭ್ರಮದಿಂದ ಮತದಾನ ಜಾಗೃತಿ ಜಾಥಾ ನಡೆಸಲಾಯಿತು. ಸಂಡೂರು ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಚ್. ಷಡಕ್ಷರಯ್ಯ ಅವರ ಮಾರ್ಗದರ್ಶನದಲ್ಲಿ ನಡೆದ ಎತ್ತು ಬಂಡಿ ಉತ್ಸವ ಕಾರ್ಯಕ್ರಮದಲ್ಲಿ ಚೋರನೂರು ಗ್ರಾಮ ಪಂಚಾಯಿತಿ ಪಿಡಿಒ ಕುಮಾರಸ್ವಾಮಿ, ಕಾರ್ಯದರ್ಶಿ ಪಾಪಣ್ಣ, ಕಂಪ್ಯೂಟರ್ ಆಪರೇಟರ್ ಶಿವಮೂರ್ತಿ, ಗ್ರಂಥಪಾಲಕ ನಾಗರಾಜ ಹಾಗೂ ಗ್ರಾಮ ಪಂಚಾಯ್ತಿ ಸಿಬ್ಬಂದಿ, ಗ್ರಾಮ ಕಾಯಕ ಮಿತ್ರ ಮೂಗಮ್ಮ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ನಿಸರ್ಗ ಸಂಜೀವಿನಿ ಒಕ್ಕೂಟದ ಸಿಬ್ಬಂದಿ ಸದಸ್ಯರುಗಳು, ನರೇಗಾ ಕಾಯಕ ಬಂಧುಗಳು ಹಾಗೂ ಕೂಲಿ ಕಾರ್ಮಿಕರು ಹಾಗೂ ಮತ್ತಿತರರು ಹಾಜರಿದ್ದರು.