ಪ್ರಜಾಪ್ರಭುತ್ವದಲ್ಲಿ ಮತದಾನ ಪಾತ್ರ ಬಹು ಮುಖ್ಯ:ಪನ್ವಾರ

ಸೈದಾಪುರ:ಮೇ.9:ದೇಶದ ಪ್ರಜಾಪ್ರಭುತ್ವದಲ್ಲಿ ಮತದಾನ ಪಾತ್ರ ಬಹು ಮುಖ್ಯವಾಗಿದೆ. ಚುನಾವಣೆ ಸಂದರ್ಭದಲ್ಲಿ ಮನೆಯಲ್ಲಿ ಕುಳಿತುಕೊಳ್ಳದೆ ಪ್ರತಿಯೊಬ್ಬರು ಮತದಾನದಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಗರಿಮಾ ಪನ್ವಾರ ಕರೆ ನೀಡಿದರು.

ಪಟ್ಟಣದಲ್ಲಿ ಜಿಲ್ಲಾ ಮತ್ತು ತಾಲೂಕ ಸ್ವೀಪ್ ಸಮಿತಿ ಮತ್ತು ಗ್ರಾಮ ಪಂಚಾಯತಿ ಕಾರ್ಯಲಯ ವತಿಯಿಂದ ಹಮ್ಮಿಕೊಂಡ ನಮ್ಮ ನಡೆ ಮತಕಟ್ಟೆ ಕಡೆ- ಮತದಾನ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ದೇಶದ ಅಭಿವೃದ್ಧಿಯು ಸದೃಢ ಪ್ರಜಾಪ್ರಭುತ್ವದಲ್ಲಿ ಅಡಗಿದೆ, ಈ ಕಾರ್ಯದಲ್ಲಿ ಪ್ರತಿಯೊಬ್ಬರ ಪಾತ್ರ ಹಿರಿದು, ಈ ಬಾರಿ ಅತಿ ಹೆಚ್ಚು ಮತದಾನ ಮಾಡುವುದರ ಮೂಲಕ ನಮ್ಮ ಜಿಲ್ಲೆಯು ರಾಜ್ಯದಲ್ಲಿಯೇ ಪ್ರಥಮ ಸ್ಥಾನವನ್ನು ಪಡೆದುಕೊಳ್ಳಬೇಕು. ಇದಕ್ಕಾಗಿ ಚುನಾವಣೆ ಆಯೋಗ ಮತ್ತು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಈ ಅವಕಾಶವನ್ನು ಬಳಸಿಕೊಂಡು ಪ್ರತಿಯೊಬ್ಬರು ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.

ಹಾಸ್ಯ ಕಲಾವಿದ, ಸ್ವೀಪ್ ಸಮಿತಿಯ ಜಿಲ್ಲಾ ರಾಯಭಾರಿ ಬಸವರಾಜ ಮಹಾಮನಿ ಮಾತನಾಡಿ, ಪ್ರತಿಯೊಬ್ಬರು ತಪ್ಪದೇ ಮೇ-10 ರಂದು ಮತದಾನ ಮಾಡಬೇಕು. ಇದರಿಂದ ಪ್ರಜಾಪ್ರಭುತ್ವ ಸದೃಢವಾಗುತ್ತದೆ. ಹಣ ಮತ್ತು ಇತರ ಅಮಿಷಕ್ಕೆ ಒಳಗಾಗದೆ ಮತದಾನ ಮಾಡಿದರೆ ಅದು ಜನಾದೇಶವಾಗುತ್ತದೆ ಇದರಿಂದ ನಮ್ಮ ನಾಡು ಅಭಿವೃದ್ಧಿಯಾಗುತ್ತೆದೆ ಎಂದು ವಿವಿಧ ಹಾಸ್ಯ ಸನ್ನಿವೇಶಗಳನ್ನು ವಿವರಿಸುವ ಮೂಲಕ ಮತದಾನದ ಜಾಗೃತಿ ಮೂಡಿಸಿದರು.

 ತಾಲ್ಲೂಕ ಪಂಚಾಯಿತಿ ಕಾರ್ಯ ನಿರ್ವಾಣಾಧಿಕಾರಿ ಬಸವರಾಜ ಶರಬೈಯಿ, ತಾಲ್ಲೂಕ ಯೋಜನಾಧಿಕಾರಿ ಶಶಿಧರ ಹಿರೇಮಠ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಿರಿಮಲ್ಲಣ್ಣ, ಬಾಬು ಕಲಾಲ್, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.