ಪ್ರಜಾಪ್ರಭುತ್ವದಲ್ಲಿ ಮತದಾನವೆಂಬುವುದು ಪವಿತ್ರ ಕಾರ್ಯ

ರಾಯಚೂರು,ಏ.೧೮- ಜಿಲ್ಲೆಯ ಮಸ್ಕಿ ತಾಲೂಕಿನ ವಟಗಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸಾಪುರ ಗ್ರಾಮದ ನಾಲೆ ಹೂಳು ಎತ್ತುವ ಕಾಮಗಾರಿ ಸ್ಥಳದಲ್ಲಿ ಏ.೧೭ರ(ಸೋಮವಾರ) ನರೇಗಾ ಕೂಲಿಕಾರರಿಗೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಅವರು ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿದರು.
ನಂತರ ನರೇಗಾ ಕೂಲಿಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪವಿತ್ರಕಾರ್ಯವಾಗಿದೆ. ರಾಷ್ಟ್ಟ್ರಪತಿ ಮತ್ತು ಸಾಮಾನ್ಯ ಪ್ರಜೆಯ ಮತದಾನದ ಮೌಲ್ಯ ಒಂದೇ ಆಗಿದೆ. ಆದ್ದರಿಂದ ಪ್ರತಿಯೊಬ್ಬರು ಮತದಾನ ಮಾಡಬೇಕು. ಭಾರತದ ಸಂವಿಧಾನವು ೧೮ ವರ್ಷಮೇಲ್ಪಟ್ಟ ಪ್ರತಿಯೊಬ್ಬರಿಗೂ ಮತದಾನ ಹಕ್ಕು ನೀಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತಷ್ಟ್ಟು ಗಟ್ಟಿಗೊಳ್ಳಲು ಎಲ್ಲರ ಸಹಕಾರ ಅತ್ಯಗತ್ಯ. ವಯೋವೃದ್ಧರು, ಅಂಗವಿಕಲರಿಗೆ ಅನುಕೂಲ ಕಲ್ಪಿಸುವನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಚುನಾವಣೆ ಆಯೋಗ ಮನೆಯಿಂದಲೇ ಮತದಾನ ಮಾಡುವ ಅವಕಾಶ ಕಲ್ಪಿಸಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಶೇಕಡಾವಾರು ಮತದಾನ ಪ್ರಮಾಣ ಹೆಚ್ಚಿಸಬೇಕು ಎಂದರು.
ಬೂತ್ ಗಳಿಗೆ ಭೇಟಿ : ಬಸಾಪುರ ಸರ್ಕಾರಿ ಪ್ರಾಥಮಿಕ, ಅಂಕುಶದೊಡ್ಡಿ ಪ್ರಾಥಮಿಕ ಶಾಲೆಯ ಮತದಾನ ಬೂತ್ ಗಳಿಗೆ ಜಿಲ್ಲಾ ಪಂಚಾಯತಿ ಸಿಇಒ ಶಶಿಧರ ಕುರೇರ ಅವರು ಭೇಟಿ ನೀಡಿದರು. ಮತದಾನದ ಕುರಿತು ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೂತ್‌ಗಳಿಗೆ ವರ್ಲಿ ಚಿತ್ರಗಳನ್ನು ಬಿಡಿಸಲಾಗುತ್ತಿದೆ. ಮತದಾರರ ಅನುಕೂಲಕ್ಕೆ ಎಲ್ಲ ಬೂತ್‌ಗಳಲ್ಲಿ ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಪಿಡಿಒಗಳಿಗೆ ಸೂಚಿಸಿದರು. ಅಂಕುಶದೊಡ್ಡಿ ಶಾಲೆಯ ಮೈದಾನದಲ್ಲಿ ನರೇಗಾದಡಿ ನಿರ್ಮಿಸುತ್ತಿರುವ ಶೌಚಗೃಹವನ್ನು ಆದಷ್ಟ್ಟು ಬೇಗ ಪೂರ್ಣಗೊಳಿಸಿ, ಮತದಾರರ ಬಳಕೆಗೆ ಅನುಕೂಲ ಕಲ್ಪಿಸಬೇಕು ಎಂದರು.
ತದ ನಂತರ ಮಸ್ಕಿ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಚುನಾವಣಾಧಿಕಾರಿಗಳು, ಸಿಬ್ಬಂದಿ ಜೊತೆಗೆ ಸಭೆ ನಡೆಸಿದ ಜಿಲ್ಲಾ ಪಂಚಾಯತಿ ಸಿಇಒ ಹಾಗೂ ಸ್ವಿಪ್ ಸಮೀತಿಅಧ್ಯಕ್ಷರು ಶಶಿಧರ ಕುರೇರ್ ಅವರು, ಯಾವುದೇ ಬಾಹ್ಯ ಒತ್ತಡಗಳಿಗೆ ಒಳಗಾಗದೇ ಚುನಾವಣೆ ಕರ್ತವ್ಯ ನಿರ್ವಹಿಸಬೇಕು. ಒಂದು ವೇಳೆ ರಾಜಕೀಯ ಪಕ್ಷಗಳ ಮುಖಂಡರು ನೀತಿ ಸಂಹಿತೆ ಉಲ್ಲಂಘಿಸಿದರೆ, ಕೇಸ್ ದಾಖಲಿಸಬೇಕು ಎಂದರು.
ಈ ವೇಳೆ ಮಸ್ಕಿ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಪವನ್ ಕುಮಾರ್, ಚುನಾವಣಾ ಅಧಿಕಾರಿ ದೇವಿಕಾ, ತಹಸೀಲ್ದಾರ್ ಅರಮನೆ ಸುಧಾ, ಅಧಿಕಾರಿಗಳಾದ ಶೃತಿ, ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ, ಸಿಪಿಐ ಇತರರಿದ್ದರು.
ಸಹಾಯಕ ನಿರ್ದೇಶಕರಾದ (ಗ್ರಾಮೀಣ ಉದ್ಯೋಗ) ಶಿವಾನಂದರೆಡ್ಡಿ, ಪಿಡಿಒಗಳಾದ ಬಸವರಾಜ್, ಸುರೇಶ್ ಪಾಟೀಲ್, ಟಿಎಇ ಮಾನಪ್ಪ ಸೇರಿದಂತೆ ಇತರರಿದ್ದರು.