ಪ್ರಜಾಪ್ರಭುತ್ವದಲ್ಲಿ ನ್ಯಾಯ ಕೇಳುವ ಹಕ್ಕಿದೆ ಅಧಿಕಾರಿಗಳು ವಿರಾಜ್ ಟ್ರಾನ್ಸ್‌‌ ಪೋರ್ಟ್ ನವರ ಕೈಗೊಂಬೆ : ಅಧ್ಯಕ್ಷ ಶಿವಶಂಕರ್ ಆರೋಪ


ಸಂಜೆವಾಣಿ  ವಾರ್ತೆ
ಕುರುಗೋಡು:ಏ.28: ಸ್ಥಳೀಯ ಲಾರಿ ಮಾಲೀಕರು ಕಾರ್ಖಾನೆಗಳಿಂದ ಬೂದಿ ಸಾಗಾಣಿಕೆ ಮಾಡಲು ನಿಗಧಿತ ದರ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಕಳೆದ 27 ದಿನಗಳಿಂದ ನಿರಂತರವಾಗಿ ಕುಡತಿನಿಯ ಇಂದಿರಾನಗರದಲ್ಲಿ ಹೋರಾಟ ಮಾಡಿಕೊಂಡು ಬಂದರೂ, ಅಲ್ಟಾಟೆಕ್, ಬಿಟಿಪಿಎಸ್ ಹಾಗೂ ವಿವಿಧ ಇಲಾಖಾ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇದುವರೆಗೂ ನ್ಯಾಯ ಸಿಗುತ್ತಿಲ್ಲ ಎಂದು ಕುಡತಿನಿ ಸಿವಿಲ್ ಮತ್ತು ಬಲ್ಕರ್, ಟಿಪ್ಪರ್ ಲಾರಿ ಮಾಲೀಕರ ಹಾಗೂ ಟ್ರಾನ್ಸ್ ಪೋರ್ಟ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಶಿವಶಂಕರ್ ತಿಳಿಸಿದರು.
ಪಟ್ಟಣದ ಇಂದಿರಾನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಾಕಷ್ಟು ಲಾರಿ ಮಾಲೀಕರು ಫೈನ್ಯಾನ್ಸ್ ತಂದು, ಲಾರಿಗಳನ್ನು ನಡೆಸುತ್ತಿದ್ದಾರೆ. ಆದರೆ, ಈಗ ಲಾರಿ ಸಾಗಾಣಿಕೆ ಸ್ಥಗಿತದಿಂದ ಲಾರಿ ಮಾಲೀಕರ ಬದುಕು ಅತಂತ್ರವಾಗಿದೆ. ಈಗಾಗಲೇ ಫೈನ್ಯಾನ್ಸ್ ನವರು ಎರಡು ಲಾರಿಗಳನ್ನು ಸೀಜ್ ಮಾಡಿದ್ದಾರೆ. ಅಧಿಕಾರಿಗಳು ಸಂದಾನ ಮಾಡಲು ಮುಂದಾದರೂ, ವಿರಾಜ್ ಟ್ರಾನ್ಸ್ ಪೋರ್ಟ್ ನವರು ನಿರ್ಲಕ್ಷ್ಯವಹಿಸಿದ್ದಾರೆ. ಕೆಲ ಲಾರಿ ಮಾಲೀಕರು ಬದುಕು ಅತಂತ್ರವಾದ ಹಿನ್ನಲೆ ತಮ್ಮ ಪತ್ನಿಯರ ಮಾಂಗಲ್ಯವನ್ನು ಅಡವಿಟ್ಟು ಬದುಕಬೇಕಾದ ಪರಿಸ್ಥಿತಿ ಬಂದಿದೆ. ಸ್ಥಳೀಯ ಲಾರಿ ಮಾಲೀಕರಿಗೆ ಆಧ್ಯತೆ ನೀಡುತ್ತಿಲ್ಲ. ಮೊದಲಿಗೆ ಪ್ರತಿ ಟನ್ಗೆ 367 ರೂ. ಸಾಗಾಣಿಕೆಗೆ ಕೊಡುತ್ತಿದ್ದರು. ಆದರೆ, ಈಗ ಪ್ರತಿ ಟನ್ಗೆ 20 ರೂ. ಮಾತ್ರ ಏರಿಕೆ ಮಾಡಿದ್ದು, ಇದರಿಂದ ದರ ಸಾಕಾಗುತ್ತಿಲ್ಲ. ವಿರಾಜ್ ಟ್ರಾನ್ಸ್ ಪೋರ್ಟ್ ನವರಿಗೆ ಕಾರ್ಖಾನೆಯವರು ಅಧ್ಯತೆ ನೀಡುತ್ತಿದ್ದಾರೆ. ವಿರಾಜ್ ನವರ ತಮ್ಮ ಅಕ್ರಮ ಬಂಡವಾಳ ಹೊರಬರುತ್ತದೆ ಎಂದು ಟೆಂಡರ್ ಆರ್ಡರ್ ಪ್ರತಿ ನೀಡುತ್ತಿಲ್ಲ. ನ್ಯಾಯ ಕೇಳುತ್ತಿರುವ ನಮ್ಮ ಮೇಲೆ ಕೇಸ್ ಹಾಕಿಸುತ್ತಿದ್ದಾರೆ. ಇಂತಹ ನೂರು ಕೇಸ್ ಗಳಾದರೂ ಹೆದರುವುದಿಲ್ಲ. ಸುಮಾರು 200 ಕುಟುಂಬಸ್ಥರನ್ನು ಹೊಂದಿರುವ ಲಾರಿ ಮಾಲೀಕರ ಕುಟುಂಬಗಳಿಗೆ ನ್ಯಾಯ ಒದಗಿಸುವಲ್ಲಿ ಅಲ್ಟ್ರಾಟೆಕ್, ಬಿಟಿಪಿಎಸ್ ಸೇರಿ ವಿವಿಧ ಅಧಿಕಾರಿಗಳು ವಿಫಲರಾಗಿದ್ದಾರೆ. ವಿವಿಧ ಇಲಾಖೆಯವರು ವಿರಾಜ್ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಲಾರಿ ಮಾಲೀಕರ ಬದುಕು ಬೀದಿಗೆ ಬರುವಂತಾಗಿದೆ. ಆದರೂ ಸಹ ಯಾವುದೇ ಹೆದೆಗುಂದದೇ, ಎಷ್ಟೇ ಕಷ್ಟ ಬಂದರೂ ಹೋರಾಟ ಮಾತ್ರ ನಿಲ್ಲಿಸುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ನ್ಯಾಯಯುತವಾಗಿ ಹಕ್ಕು ಕೇಳುವುದು ನಮ್ಮ ಕರ್ತವ್ಯ. ಆದರೆ, ಇದನ್ನು ಸಹಿಸದ ಕೆಲವರು ನಮ್ಮ ಹೋರಾಟವನ್ನು ಹತ್ತಿಕ್ಕುವ ಹುನ್ನಾರ ನಡೆಸಿದ್ದಾರೆ. ಚುನಾವಣೆ ಹಿನ್ನಲೆ ಶಾಂತಿಯುತವಾಗಿ ಹೋರಾಟ ಮಾಡಿಕೊಂಡು ಬಂದಿದ್ದು, ನ್ಯಾಯ ದೊರಕುತ್ತಿಲ್ಲ. ಬಿಟಿಪಿಎಸ್ ಅಧಿಕಾರಿಗಳು ಸಹ ವಿರಾಜ್ ಟ್ರಾನ್ಸ್‌‌ ಪೋರ್ಟ್ ನವರ ಜೊತೆ ಶಾಮೀಲು ಆಗಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯಸ್ಥಿಕೆ ವಹಿಸಿ, ಸ್ಥಳೀಯ ಲಾರಿ ಮಾಲೀಕರಿಗೆ ನ್ಯಾಯ ಒದಗಿಸಿಕೊಡಬೇಕ. ನಿರಂತರ ಹೋರಾಟದ ಬಗ್ಗೆ ಈಗಾಗಲೇ ಲಾರಿ ಮಾಲೀಕರ ಸಂಘದ ರಾಜ್ಯಾಧ್ಯಕ್ಷರ ಜಿ. ಆರ್. ಷಣ್ಮುಖಪ್ಪ ಅವರ ಗಮನಕ್ಕೆ ತಂದಿದ್ದು, ಅವರ ದಿನಾಂಕ ಪಡೆದ ನಂತರ ಉಗ್ರ ಹೋರಾಟ ಮಾಡುವ ಜತೆಗೆ ನ್ಯಾಯ ಸಿಗದಿದ್ದಲ್ಲಿ ವಿಷ ಸೇವಿಸಿ ಪ್ರಾಣವನ್ನೇ ಹೋರಾಟದಲ್ಲಿ ಬಿಡುವ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಗ್ಯಾಂಗಿ ಹನುಮಂತಪ್ಪ, ಉಪಾಧ್ಯಕ್ಷರಾದ ಕಂದಾರಿ ಪ್ರತಾಪ್, ಕಾರ್ಯದರ್ಶಿಗಳಾದ ಶಂಕರ್, ಗೋಪಾಲ್, ಖಜಾಂಚಿ ರಾಜೇಶ, ಕೃಷ್ಣಪ್ಪ, ಪಿಕೆಹಳ್ಳಿ ರಾಜೇಶ, ತಿಮ್ಮಪ್ಪ, ಭೀಮೇಶ, ಉಮಾಶಂಕರ್, ಎಂ.ರಾಜ, ಮಲ್ಲಿಕಾರ್ಜುನ, ಮೋಹನ್, ಎಸ್.ಶಂಕರ್ ಸೇರಿದಂತೆ ಅನೇಕರಿದ್ದರು.