ಪ್ರಜಾತಂತ್ರದಲ್ಲಿ ಯಾರು ಏನು ಬೇಕಾದರೂ ಆಗಬಹುದು: ಸಂಸದ ಪ್ರತಾಪ್ ಸಿಂಹ

ಮೈಸೂರು, ನ.17: ಪ್ರಜಾತಂತ್ರದಲ್ಲಿ ಯಾರು ಏನು ಬೇಕಾದರೂ ಆಗಬಹುದು, ಆದರೆ ಪಾಳೇಗಾರಿಕೆಯ ಮನಸ್ಥಿತಿ ಇರುವವರಿಗೆ ಪ್ರಜಾತಂತ್ರದಲ್ಲಿ ಜಾಗ ಇಲ್ಲ ಎಂದು ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಅವರಿಂದು ಮೈಸೂರಿನಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ಚಪ್ಪಲಿ ಹೊಲಿಯುವವನ ಮಗ ಅಬ್ರಹಾಂ ಲಿಂಕನ್ ಅಮೇರಿಕದ ಅಧ್ಯಕ್ಷರಾಗಿದ್ದರು. ಚಾಯ್ ಮಾರಾಟಮಾಡುವವರು ನರೇಂದ್ರ ಮೋದಿಜಿ ದೇಶದ ಪ್ರಧಾನಿಗಳಾದರು. ಪ್ರಜಾತಂತ್ರದಲ್ಲಿ ಯಾರು ಏನು ಬೇಕಾದರೂ ಆಗಬಹುದು. ನಮ್ಮ ಕುಟುಂಬ ಅದು ಇದು ಅಂತ ಹೇಳುವುದು, ಪಾಳೇಗಾರಿಕೆಯ ಮನಸ್ಥಿತಿ ಇರುವವರಿಗೆ ಪ್ರಜಾತಂತ್ರದಲ್ಲಿ ಜಾಗ ಇಲ್ಲ. ಅದನ್ನು ಜನಪ್ರತಿನಿಧಿಗಳಾದವರೂ ಕೂಡ ಬಹಳ ಸೌಜನ್ಯದಿಂದ ಒಪ್ಪಿಕೊಳ್ಳಬೇಕಾದ ಕಾಲ ಬಂದಿದೆ ಎಂದು ತಿಳಿಸಿದರು.
ಮೈಸೂರಿಗೆ ಒಳ್ಳೆ ಕನೆಕ್ಟಿವಿಟಿ ನೀಡಬೇಕೆಂದು ಹತ್ತು ಪಥದ ರಾಷ್ಟ್ರೀಯ ಹೆದ್ದಾರಿಯನ್ನು ತಂದಿದ್ದೇವೆ. ಮೋದಿಜಿಯವರು ಇಲ್ಲೇ ಬಂದು ಸ್ವತಃ ಘೋಷಣೆಯನ್ನೂ ಮಾಡಿದ್ದರು. ಮೈಸೂರಿಗೆ ಒಳ್ಳೆಯದಾಗುವುದು ಮಾತ್ರವಲ್ಲ, ಮಂಡ್ಯ, ರಾಮನಗರದವರಿಗೂ ಕೂಡ ಅನುಕೂಲವಾಗಲಿ ಅನ್ನೋ ಉದ್ದೇಶ ನಮ್ಮದು, 2022 ಸೆಪ್ಟೆಂಬರ್ ಒಳಗಡೆ ನಾವದನ್ನು ಪೂರ್ಣಗೊಳಿಸಿ ಹ್ಯಾಂಡ್ ಓವರ್ ಮಾಡಬೇಕು. ಸಾಮಾನ್ಯವಾಗಿ ಜನರಿಗೆ ಜನಪ್ರತಿನಿಧಿಗಳ ಮೇಲೆ ವಿಶ್ವಾಸನೇ ಹೊರಟು ಹೋಗಿದೆ. ಯಾಕೆಂತ ಹೇಳಿದರೆ ಐದು ವರ್ಷದ ಪ್ರಾಜೆಕ್ಟ್ ಅಂತ ಹೇಳಿದರೆ 15ವರ್ಷನೂ ನಡೆಯುತ್ತಾ ಇರತ್ತೆ. ಆದರೆ ಇವತ್ತು ಮೋದೀಜಿಯವರ ಸರ್ಕಾರ ಇರುವುದರಿಂದ ಆದಷ್ಟು ಬೇಗ ನಾವು ಹೇಳಿದಂತ ಕಾಲಮಿತಿಯೊಳಗಡೆಯೇ ಪೂರ್ಣಗೊಳಿಸಿ ಹ್ಯಾಂಡ್ ಓವರ್ ಮಾಡಬೇಕೆನ್ನುವ ಉದ್ದೇಶ ನಮ್ಮದು. ಹಾಗಾಗಿ ನಾನು ಬೆಂಗಳೂರಿನಿಂದ ಬರುತ್ತಿರುವಾಗ ಎಲಿಯೂರು ಬಳಿ ಜನ ನನ್ನನ್ನು ಅಡ್ಡ ಹಾಕಿದರು. ಅಂಡರ್ ಪಾಸ್ ಮಾಡಿಸಿಕೊಡಿ ಅಂದರು. ಕೆಲಸವನ್ನು ನಿಲ್ಲಿಸಿದರು. ಆಗ ನಾನು ನಿಂತುಕೊಂಡು ಆಯ್ತಪ್ಪಮಾಡಿಕೊಡುತ್ತೇನೆ ಅಂತ ಹೇಳಿ ಅವರಿಗೆ ಭರವಸೆಯನ್ನು ಕೊಟ್ಟೆ. ಮಂಡ್ಯ ಜಿಲ್ಲೆಯಲ್ಲಿ ಎಲ್ಲೇ ಇದ್ದರೂ ಕೂಡ ಅಂಡರ್ ಪಾಸ್ ಬೇಕು, ಓವರ್ ಬ್ರಿಜ್ಸ್ ಬೇಕು ಅಂತ ನನಗೆ ಒಂದು ಪ್ರಪೆÇೀಸಲ್ ಕೊಡಿ ಅಥವಾ ಎಲ್ಲಿದೆ ಅಂತ ಮಾಹಿತಿ ಕೊಡಿ ನಾನು ಮಾಡಿಕೊಡುತ್ತೇನೆ ಅಂತ ಹೇಳಿದ್ದೇನೆ. ಅದರಾಚೆಗೆ ನನಗಿನ್ನೇನೂ ವಿಚಾರವಿಲ್ಲ. ನಾನು ಸ್ಪಷ್ಟಪಡಿಸಲು ಇಷ್ಟಪಡುತ್ತೇನೆ ಎಂದರು.
ಇದು ಒಳ್ಳೆಯ ರಾಷ್ಟ್ರೀಯ ಹೆದ್ದಾರಿ. ಮೈಸೂರಿಗೆ ಒಳ್ಳೆಯದಾಗಬೇಕು ಅದೇ ರೀತಿನಲ್ಲಿ ಮಂಡ್ಯ ಮತ್ತು ರಾಮನಗರದವರಿಗೂ ಕೂಡ ಅನುಕೂಲವಾಗಬೇಕು. ಆ ಕಾರಣಕ್ಕಾಗಿ ಆದಷ್ಟು ಬೇಗ ಅದನ್ನು ಪೂರ್ಣಗೊಳಿಸಿಕೊಡಬೇಕು ಅನ್ನೋ ಉದ್ದೇಶವನ್ನು ಬಿಟ್ಟು ಬೇರೆ ಯಾವುದೂ ನನಗಿಲ್ಲ. ವೃಥಾ ಹೇಳಿಕೆಯನ್ನು ಕೊಟ್ಟು ಕಾಲಹರಣ ಮಾಡಿಕೊಂಡಿರಲಿಕ್ಕೆ ಕೂಡ ನಾನು ಬಂದಿಲ್ಲ. ಮತ್ತೆ ಕೆಲವರೆಲ್ಲ ಮಾತಾಡುವಾಗಲೂ ಕೂಡ ಕೊಡಗಿನ ರಸ್ತೆಯ ಬಗ್ಗೆಯೂ ಹೇಳಿದ್ದಾರೆ. ಒಬ್ಬ ಜನಪ್ರತಿನಿಧಿಯಾಗಿರುವಂಥವರಿಗೆ ಗ್ರಾ.ಪಂ ಇರಬಹುದು, ತಾಪಂ ಇರಬಹುದು, ಜಿ.ಪಂ, ಎಂಡಿಆರ್ ಮೇಜರ್ ಡಿಸ್ಟ್ರಿಕ್ಟ್ ರೋಡ್ ಇರಬಹುದು, ಅದೇ ರೀತಿ ಪಿಡಬ್ಲ್ಯೂಡಿ ಇರಬಹುದು, ಅದೇ ರೀತಿ ಸ್ಟೇ ಟ್ ಹೈವೇ ಇರಬಹುದು, ನ್ಯಾಶನಲ್ ಹೈವೇ ಇರಬಹುದು, ಈ ರಸ್ತೆಗಳು ಯಾರ್ಯಾರ ವ್ಯಾಪ್ತಿಗೆ ಬರಲಿವೆಯೋ ಶಾಸಕರು, ಜಿ.ಪಂ ವ್ಯಾಪ್ತಿಗೆ ಬರಲಿದೆಯೋ, ಪಿಡಬ್ಲ್ಯೂ ಡಿ ವ್ಯಾಪ್ತಿಗೆ ಬರುತ್ತೋ ಸಂಸದರ ವ್ಯಾಪ್ತಿಗೆ ಬರುತ್ತೋ ಎಂಬ ಕನಿಷ್ಠ ಜ್ಞಾನ ಇದ್ದರೆ ಅಪದ್ಧವಾದ ಹೇಳಿಕೆ ಕೊಡುವುದು ನಿಲ್ಲತ್ತೆ. ನಾನು ಬಹಳ ಸ್ಪಷ್ಟವಾಗಿ ಹೇಳಿದ್ದೇನೆ. ನನಗೆ ಮೈಸೂರು ಬೆಂಗಳೂರು 10ಪಥದ ರಾಷ್ಟ್ರೀಯ ಹೆದ್ದಾರಿ ಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಮಂಡ್ಯ, ರಾಮನಗರದವರೆಗೆ ಮೂರು ಜಿಲ್ಲೆಯವರಿಗೂ ಅನುಕೂಲ ಮಾಡಿಕೊಡಬೇಕು ಎನ್ನುವ ಉದ್ದೇಶ ಮಾತ್ರ. ಅದಕ್ಕಾಗಿ ಸತತ ಸಭೆ ಮಾಡುತ್ತಿರುತ್ತೇನೆ. ರಸ್ತೆ ಮಂಡ್ಯ ಮೂಲಕವಾಗಿ ಮೈಸೂರಿಗೆ ಬರಬೇಕು, ಅಲ್ಲಿನ ಜನರ ಸಮಸ್ಯೆ ಕೂಡ ನಿವಾರಣೆ ಮಾಡುವುದಕ್ಕೋಸ್ಕರ ಎಲಿಯೂರು ಹತ್ತಿರ ಜನರೇ ಅಡ್ಡ ಹಾಕಿ ಮಾತನಾಡಿಸಿರುವು ದರಿಂದ ಇಳಿದು ಸ್ಪಂದಿಸಿದ್ದೇನೆ. ಅದರಾಚೆ ನನ್ನದೇನೂ ಉದ್ದೇಶವಿಲ್ಲ, ಯಾರು ಏನಾದರೂ ಹೇಳಿಕೊಳ್ಳಲಿ, ನಾನು ಬಸವಣ್ಣನ ಕಾಯಕನಿಷ್ಠೆಯಲ್ಲಿ ನಂಬಿಕೆ ಇಟ್ಟವನು. ನಾನು ಯಾವ ಸ್ಟಾರ್ ಕೂಡ ಅಲ್ಲ. ಅಭಿಮಾನಿಗಳು ಬಂದು ವೋಟ್ ಹಾಕಲಿಕ್ಕೆ. ನನ್ನ ಕೆಲಸವೇ ನನ್ನ ಕೈಹಿಡಿಯುವಂಥದ್ದು ಎಂದು ತಿರುಗೇಟು ನೀಡಿದರು.