ಪ್ರಚೋಧನಕಾರಿ ಮಾತು ರಾಮಭಕ್ತರಿಂದ ಆಕ್ರೋಶ! ರೈಲ್ವೆ ನಿಲ್ದಾಣದಲ್ಲಿ ಗೊಂದಲ


ಸಂಜೆವಾಣಿ ವಾರ್ತೆ
ಹೊಸಪೇಟೆ (ವಿಜಯನಗರ), ಫೆ.23: ಅಯೋಧ್ಯೆಯಿಂದ ಮೈಸೂರಿನತ್ತ ತೆರಳುತ್ತಿದ್ದ ರೈಲಿನ ಬೋಗಿಯೊಂದಕ್ಕೆ ಹತ್ತಿದ ಅಪರಿಚಿತರು ಪ್ರಚೋದನಕಾರಿ ಮಾತು ಆಡಿದ್ದರಿಂದ ಸಿಟ್ಟಿಗೆದ್ದ ರಾಮಭಕ್ತರು ಹಾಗೂ ನಿಲ್ದಾಣದಲ್ಲಿದ್ದ ಮಂದಿ ಗೊಂದಲ ಎಬ್ಬಿಸಿ, ರೈಲನ್ನು ಒಂದೂವರೆ ಗಂಟೆ ಕಾಲ ತಡೆದ ಘಟನೆ ಗುರುವಾರ ತಡರಾತ್ರಿ ಹೊಸಪೇಟೆಯ ರೈಲು ನಿಲ್ದಾಣದಲ್ಲಿ ನಡೆದಿದೆ.
ಪ್ರಚೋದನಕಾರಿಯಾಗಿ ಮಾತನಾಡಿದ ವ್ಯಕ್ತಿಗಳನ್ನು ರೈಲಿನೊಳಗಿದ್ದವರು ಹಿಡಿದು ರೈಲ್ವೆ ಪೊಲೀಸರಿಗೆ ಒಪ್ಪಿಸಿದ್ದರು. ಆದರೆ ಅವರನ್ನು ಬಂಧಿಸದೆ ಬಿಟ್ಟು ಕಳುಹಿಸಲಾಗಿದೆ ಎಂದು ಆರೋಪ ಕೇಳಿಬಂದ ಕಾರಣ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವಂತಾಯಿತು. ವಿಷಯ ನಗರದ ಬಿಜೆಪಿ ಮುಖಂಡರಿಗೆ ತಲುಪಿತು. ನೂರಾರು ಸಂಖ್ಯೆಯಲ್ಲಿ ಬಿಜೆಪಿ, ಬಜರಂಗದಳ ಹಾಗೂ ಇತರ ಹಿಂದೂಪರ ಕಾರ್ಯಕರ್ತರೂ ರೈಲು ನಿಲ್ದಾಣದಲ್ಲಿ ಜಮಾಯಿಸಿ ಮತ್ತಷ್ಟು ಗೊಂದಲದ ವಾತಾವರಣ ನಿರ್ಮಾಣಕ್ಕೆ ಕಾರಣವಾಗಿದೆ.
ಈ ಹಂತದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಕೂಡಲೇ ಸ್ಥಳಕ್ಕೆ ಧಾವಿಸಿದ ವಿಜಯನಗರ ಜಿಲ್ಲಾ ಪೊಲೀಸ್‍ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್‌. ಮತ್ತು ನಗರದ ವಿವಿಧ ಠಾಣೆಗಳ ಠಾಣೆಗಳ ಪೊಲೀಸರು ಸಮಾಧಾನಪಡಿಸುವ ಕೆಲಸ ಮಾಡಿದರು. ಬಿಜೆಪಿ ನಾಯಕರು ಸಹ ಉದ್ರಿಕ್ತರನ್ನು ಸಮಾಧಾನಪಡಿಸುವ ಕೆಲಸ ಮಾಡಿದರು. ಹುಬ್ಬಳ್ಳಿ, ಗದಗ, ಕೊಪ್ಪಳ ಮೂಲಕ ರಾತ್ರಿ 8.40ಕ್ಕೆ ನಿಲ್ದಾಣಕ್ಕೆ ಬಂದಿದ್ದ ಈ ಅಯೋಧ್ಯಾ ವಿಶೇಷ ರೈಲು 10 ಗಂಟೆ ಸುಮಾರಿಗೆ ಬಳ್ಳಾರಿಯತ್ತ ತೆರಳಿತು. ರೈಲಿನೊಳಗಿದ್ದ ಹಾಗೂ ನಿಲ್ದಾಣದೊಳಗಿದ್ದ ಮಂದಿ ‘ಜೈ ಶ್ರೀರಾಮ್‌’ ಘೋಷಣೆ ಕೂಗಿದರು.
ಮೂವರು ಹತ್ತಿರುವ ಶಂಕೆ:
ರೈಲಿನ ಎರಡನೇ ಬೋಗಿಗೆ ಮೂವರು ಅಪರಿಚಿತರು ಹತ್ತಿದ್ದರು. ಆಗ ಅಲ್ಲಿ ರಾಮಭಕ್ತರಿಂದ ಭಜನೆ ನಡೆಯುತ್ತಿತ್ತು. ಇದನ್ನು ಕೇಳಿ ಸಹಿಸಲಾಗದ ಈ ಮೂವರು ಪ್ರಚೋದನಕಾರಿಯಾಗಿ ಮಾತನಾಡಿದರು ಎಂದು ಹೇಳಲಾಗುತ್ತಿದೆ. ಆತಂಕ ಬೇಡ: ‘ಇನ್ನೂ ಎಫ್‌ಐಆರ್ ದಾಖಲಾಗಿಲ್ಲ. ಈ ಹಂತದಲ್ಲಿ ನಾನು ಏನೂ ಹೇಳುವ ಸ್ಥಿತಿಯಲ್ಲಿಲ್ಲ. ಪರಿಸ್ಥಿತಿ ಸದ್ಯ ಶಾಂತವಾಗಿದೆ. ರೈಲು ನಿಲ್ದಾಣದ 50 ಮೀಟರ್ ವ್ಯಾಪ್ತಿಯೊಳಗೆ ರೈಲ್ವೆ ಪೊಲೀಸರ ಕಾರ್ಯವ್ಯಾಪ್ತಿ ಇರುತ್ತದೆ.  ನಾವು ಏನಿದ್ದರೂ ಹೊರಗಿನಿಂದ ರಕ್ಷಣೆ ನೀಡಬೇಕಷ್ಟೆ. ನಾವು ಸಾಕಷ್ಟು ರಕ್ಷಣಾ ವ್ಯವಸ್ಥೆ ಕೈಗೊಂಡಿದ್ದೇವೆ. ರೈಲಿನಲ್ಲಿ 10 ಮಂದಿ ರೈಲ್ವೆ ಸುರಕ್ಷತಾ ಪಡೆಯ ಸಿಬ್ಬಂದಿ ತೆರಳಿದ್ದಾರೆ. ಯಾವುದೇ ಆತಂಕಪಡುವ ಅಗತ್ಯ ಇಲ್ಲ’ ಎಂದು ಎಸ್‌ಪಿ ಶ್ರೀಹರಿಬಾಬು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದರು.
‘ರೈಲು ನಿಲ್ದಾಣದ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸುವ ಕೆಲಸ ತಕ್ಷಣ ಆರಂಭವಾಗಿದೆ. ಶಾಂತಿ ಭಂಗಕ್ಕೆ ಯತ್ನಿಸಿದವರನ್ನು ಶೀಘ್ರ ಬಂಧಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಹೇಳಿದರು. ಈ ಮಧ್ಯ ಬಳ್ಳಾರಿ ಆರ್‍ಫಿಎಫ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತೀವೃ ಶೋಧ ನಡೆಸುವ ಮೂಲಕ ಆರೋಪಿಗಳನ್ನು ಬಂಧಿಸಲಾಗುವುದು ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
11 ದಿನಗಳಿಂದ ಸಂಚಾರ
ಅಯೋಧ್ಯಾ ವಿಶೇಷ ರೈಲು ಕಳೆದ 11 ದಿನಗಳಿಂದ ಹೊಸಪೇಟೆ ಮೂಲಕ ಸಂಚರಿಸುತ್ತಿದ್ದು, ಇದೇ ಮೊದಲ ಬಾರಿಗೆ ಇಂತಹ ಪ್ರಸಂಗ ನಡೆದಿದೆ. ‘ಪ್ರತಿ ದಿನ ಅಯೋಧ್ಯಾ ವಿಶೇಷ ರೈಲು ಬಂದು ಹೋಗುವ ಸಂದರ್ಭದಲ್ಲಿ ನಮ್ಮ ಒಬ್ಬ ಡಿವೈಎಸ್‌ಪಿ ಮತ್ತು ಒಬ್ಬರು ಪಿಎಸ್ಐ ಅವರು ಹೊಸಪೇಟೆ ರೈಲು ನಿಲ್ದಾಣದಲ್ಲಿ ಇರುವಂತೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಗುರುವಾರ ಸಂಜೆ ಸಭೆ ಇದ್ದ ಕಾರಣ ಅವರು ಇಲ್ಲಿ ಇರಲಿಲ್ಲ. ಇದೇ ಸಂದರ್ಭದಲ್ಲಿ ಈ ಪ್ರಸಂಗ ನಡೆದಿದೆ. ಪರಿಸ್ಥಿತಿ ಕೈಮೀರುವುದನ್ನು ಪೊಲೀಸರು ಮತ್ತು ಸ್ವತಃ ಬಿಜೆಪಿ ಕಾರ್ಯಕರ್ತರು, ನಾಯಕರು ತಪ್ಪಿಸಿದ್ದಾರೆ.  ಎಂದು ಎಸ್‌ಪಿ ಶ್ರೀಹರಿಬಾಬು ಅವರು ರೈಲು ನಿಲ್ದಾಣದ ಹೊರಗಡೆ ಜಮಾಯಿಸಿದ್ದ ಜನರಿಗೆ ತಿಳಿಸಿದರು. ಪರಿಸ್ಥಿತಿಯನ್ನು ನಿಭಾಯಿಸಿದರು.