ಪ್ರಚೋದನಾಕಾರಿ ಹೇಳಿಕೆ ನೀಡುವ ಪಾಲನೇತ್ರಯ್ಯ ವಿರುದ್ಧ ಕ್ರಮಕ್ಕೆ ಒತ್ತಾಯ

ತುಮಕೂರು, ಜು. ೨೫- ಗ್ರಾಮಾಂತರ ಕ್ಷೇತ್ರದಲ್ಲಿ ಪದೇ ಪದೇ ಪ್ರಚೋದನಾಕಾರಿ ಹೇಳಿಕೆ ನೀಡುತ್ತಿರುವ ಜೆಡಿಎಸ್‌ನ ಪಾಲನೇತ್ರಯ್ಯನವರ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಮುಖಂಡ ಹಾಗೂ ಜಿ.ಪಂ. ಮಾಜಿ ಸದಸ್ಯ ಶಿವಕುಮಾರ್ ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದುವರೆಗೂ ಗ್ರಾಮ ಪಂಚಾಯ್ತಿ ಸದಸ್ಯ ಕೂಡ ಆಗಿರದ ಪಾಲನೇತ್ರಯ್ಯ ಅವರು ಗ್ರಾಮಾಂತರ ಕ್ಷೇತ್ರದಲ್ಲಿ ಕೆಲ ಅಹಿತಕರ ಘಟನೆಗಳಿಗೆ ಕಾರಣವಾಗುತ್ತಿದ್ದಾರೆ. ಅಲ್ಲದೆ ಅಂತಹ ಸ್ಥಳಗಳಲ್ಲಿ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇವರ ವಿರುದ್ಧ ಕೂಡಲೇ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದರು.
ಗ್ರಾಮಾಂತರ ಕ್ಷೇತ್ರದಲ್ಲಿ ವೀರಶೈವ ಜನಾಂಗವನ್ನು ಒಡೆಯುವ ಉದ್ದೇಶದಿಂದ ಪಾಲನೇತ್ರಯ್ಯ ಪದೇ ಪದೇ ಮಾಜಿ ಶಾಸಕ ಸುರೇಶ್‌ಗೌಡ ಅವರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಸುರೇಶ್‌ಗೌಡರು ಬೆಂಗಳೂರಿನಲ್ಲಿದ್ದರೂ ಸಹ ಅವರ ಹೆಸರನ್ನು ಮುನ್ನಲೆಗೆ ತರುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಗುಡುಗಿದರು.
ಊರ ಜಾತ್ರೆ ಸಂದರ್ಭದಲ್ಲಿ ಪ್ಲಕ್ಸ್ ಕಟ್ಟುವ ವಿಚಾರಕ್ಕೆ ಗಲಾಟೆ ನಡೆದಿದೆ. ಆದರೆ ಅದಕ್ಕೆ ಸುರೇಶ್‌ಗೌಡರೇ ಕಾರಣ ಎಂದು ಪಾಲನೇತ್ರಯ್ಯ ಹೇಳಿಗೆ ನೀಡುತ್ತಾರೆ. ಮೊದಲು ಇಂತಹ ಪ್ರಚೋದನಾಕಾರಿ ಹೇಳಿಕೆ ನೀಡುವುದನ್ನು ಅವರು ನಿಲ್ಲಿಸಬೇಕು. ಇಲ್ಲದಿದ್ದರೆ ಅವರ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗಲಾಟೆ ನಡೆಯುವ ಸ್ಥಳಗಳಿಗೆ ಪಾಲನೇತ್ರಯ್ಯ ಏಕೆ ಹೋಗುತ್ತಾರೆ. ಅವರಿಗೆ ಗಲಾಟೆ ನಡೆಯುವ ವಿಚಾರ ಮೊದಲೇ ತಿಳಿದಿರುತ್ತದೆಯೇ ಎಂದು ಪ್ರಶ್ನಿಸಿದರು.
ಸುರೇಶ್‌ಗೌಡ ಅವರು ಶಾಸಕರಾಗಿದ್ದ ಅವಧಿಯಲ್ಲಿ ಯಾವುದೇ ಒಂದು ಸಣ್ಣ ಗಲಾಟೆ ಕೂಡ ನಡೆದಿಲ್ಲ ಎಂದರು.
ವೀರಶೈವ ಸಮಾಜವನ್ನು ಒಡೆಯಲು ಪಾಲನೇತ್ರಯ್ಯ ಮತ್ತು ಗೌರಿಶಂಕರ್ ಯತ್ನಿಸುತ್ತಿದ್ದಾರೆ. ನಮ್ಮ ಸಮಾಜವನ್ನು ಒಡೆದರೆ ಚುನಾವಣೆಯಲ್ಲಿ ಅನುಕೂಲವಾಗಲಿದೆ ಎಂಬುದು ಅವರ ಉದ್ದೇಶವಾಗಿದೆ. ಆದರೆ ನಮ್ಮ ಸಮಾಜ ಇದಕ್ಕೆಲ್ಲ ಬಗ್ಗುವುದಿಲ್ಲ. ನಮ್ಮ ಸಮಾಜ ಪ್ರಾಮಾಣಿಕ, ನಿಷ್ಠೆಯಿಂದ ಪಕ್ಷಕ್ಕಾಗಿ ದುಡಿಯಲಿದೆ ಎಂದರು.
ಗ್ರಾಮಾಂತರ ಕ್ಷೇತ್ರಕ್ಕೆ ಇನ್ನು ೫೦೦ ಕೋಟಿ ರೂ. ಅನುದಾನ ತಂದು ಅಭಿವೃದ್ಧಿ ಮಾಡಲಿ. ಇದಕ್ಕೆ ನಮ್ಮ ಸಹಕಾರ ಇರುತ್ತದೆ. ಅದನ್ನು ಈ ರೀತಿಯ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಲಿ, ಅಹಿತಕರ ಘಟನೆಗಳಾಗದಂತೆ ನೋಡಿಕೊಳ್ಳಲಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರುಗಳಾದ ರೇಣುಕಪ್ರಸಾದ್, ಡಿ.ಎನ್. ಶಂಕರ್, ನರಸಿಂಹಮೂರ್ತಿ, ನೀಲಕಂಠಯ್ಯ, ಸಿದ್ದೇಗೌಡರು, ಶಿವಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.