ಪ್ರಚಾರ ಕಾರ್ಯ ಶುರು ಮಾಡಿದ ಕಾಂಗ್ರೆಸ್, ಜೆ.ಡಿ.ಎಸ್: ಇನ್ನೂ ಟಿಕೆಟ್ ಫೈನಲ್ ಮಾಡದ ಕೇಸರಿ ಪಡೆ

ಬೀದರ‌:ಮಾ.24: ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಮಾರ್ಚ್ 31 ಕೊನೆಯ ದಿನವಾಗಿದ್ದರೂ ಆಡಳಿತಾರೂಢ ಬಿಜೆಪಿ ಇನ್ನೂ ತನ್ನ ಅಭ್ಯರ್ಥಿಯನ್ನು ಘೋಷಿಸಿಲ್ಲ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಆಗಲೇ ಪ್ರಚಾರ ಆರಂಭಿಸಿದ್ದು, ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸು ಪಡೆದುಕೊಳ್ಳುತ್ತಿವೆ.

ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಅಭ್ಯರ್ಥಿಯನ್ನೇ ನಿಲ್ಲಿಸುವುದಿಲ್ಲ ಎಂದಿದ್ದ ಜೆಡಿಎಸ್‌ ಇತರ ಪಕ್ಷಗಳಿಗಿಂತ ಮೊದಲೇ ಅಭ್ಯರ್ಥಿಯನ್ನು ಘೋಷಣೆ ಮಾಡಿ ಪ್ರಚಾರದಲ್ಲಿ ತೊಡಗಿದೆ. ಪ್ರಬಲ ಸಮುದಾಯಗಳ ಮುಖಂಡರನ್ನು ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನ ನಡೆಸುತ್ತಿದೆ. ಅಲ್ಪಸಂಖ್ಯಾತರು, ಹಿಂದುಳಿದವರನ್ನೇ ಗುರಿಯಾಗಿಸಿಕೊಂಡು ಪ್ರಚಾರ ತೀವ್ರಗೊಳಿಸಿದೆ.

ಕಾಂಗ್ರೆಸ್‌ ಅಭ್ಯರ್ಥಿ ಮಾಲಾ (ಮಲ್ಲಮ್ಮ) ಅವರು ಪತಿ ಬಿ.ನಾರಾಯಣರಾವ್‌ ಅವರ ಆಪ್ತರು, ವಿವಿಧ ಸಮುದಾಯಗಳ ಮುಖಂಡರ ನಿವಾಸಗಳಿಗೆ ತೆರಳಿ ಬೆಂಬಲ ಯಾಚಿಸುತ್ತಿದ್ದಾರೆ.
ಬಸವಕಲ್ಯಾಣದ ಧಾರ್ಮಿಕ ಸ್ಥಳಗಳಿಗೂ ಭೇಟಿ ಕೊಟ್ಟು ಧಾರ್ಮಿಕ ಮುಖಂಡರ ಸಹಕಾರ ಕೋರುತ್ತಿದ್ದಾರೆ.

ಮಾಲಾ ಅವರ ಪುತ್ರ ಗೌತಮ ಅವರು ಸಾಮಾಜಿಕ ಜಾಲತಾಣದ ಮೂಲಕ ಯುವಕರನ್ನು ತಲುಪಲು ಒಂದು ತಂಡವನ್ನು ರಚಿಸಿದ್ದಾರೆ. ಮಾಲಾ ಅವರು ಭೇಟಿ ಕೊಡುವ ಸಮುದಾಯಗಳ ಮಾಹಿತಿಯನ್ನು ಅಪ್‌ಲೋಡ್‌ ಮಾಡಿ ಮತಗಳನ್ನು ಸೆಳೆಯಲು ಪ್ರಯತ್ನಿಸಿದ್ದಾರೆ.

ಎರಡು ತಿಂಗಳ ಹಿಂದೆಯೇ ರಾಜಕೀಯ ಚಟುವಟಿಕೆ ಆರಂಭಿಸಿದ್ದ ಬಿಜೆಪಿ ಇನ್ನೂ ಪ್ರಚಾರ ಶುರು ಮಾಡಿಲ್ಲ. ಪಕ್ಷದ ಅಭ್ಯರ್ಥಿ ಘೋಷಣೆಯಾಗದ ಕಾರಣ ಕಾರ್ಯಕರ್ತರು ಗೊಂದಲದಲ್ಲಿ ಇದ್ದಾರೆ.

30ರಂದು ಕಾಂಗ್ರೆಸ್‌ ನಾಮಪತ್ರ ಸಲ್ಲಿಕೆ

ಕಾಂಗ್ರೆಸ್‌ ಅಭ್ಯರ್ಥಿ ಮಾಲಾ (ಮಲ್ಲಮ್ಮ) ನಾರಾಯಣರಾವ್‌ ಮಾರ್ಚ್‌ 30 ರಂದು ಮುಖಂಡರ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ಅದೇ ದಿನ ಕಾಂಗ್ರೆಸ್‌ ಬಸವಕಲ್ಯಾಣದಲ್ಲಿ ಬಹಿರಂಗ ಸಭೆಯನ್ನೂ ಆಯೋಜಿಸಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಎಚ್‌.ಕೆ.ಪಾಟೀಲ, ಸಿ.ಎಂ.ಇಬ್ರಾಹಿಂ ಸೇರಿದಂತೆ ಪಕ್ಷದ ಪ್ರಮುಖರು ಬಸವಕಲ್ಯಾಣಕ್ಕೆ ಆಗಮಿಸಲಿದ್ದಾರೆ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ತಿಳಿಸಿದ್ದಾರೆ.

ಇದಕ್ಕೂ ಮೊದಲು ಮಾಲಾ ನಾರಾಯಣರಾವ್‌ ಅವರು ಗುರುವಾರ ಅಥವಾ ಶುಕ್ರವಾರ ಕುಟುಂಬದ ಸದಸ್ಯರೊಂದಿಗೆ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ.

ಫೈನಲ್‌ ಆಗದ ಬಿಜೆಪಿ ಟಿಕೆಟ್

ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣ ಮಾ.24ರಂದು ಬಸವಕಲ್ಯಾಣಕ್ಕೆ ಬರಲಿದ್ದಾರೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ.

ಮಾ.25ರಂದು ಬಿಜೆಪಿ ಅಭ್ಯರ್ಥಿ ಘೋಷಣೆಯಾಗುವ ನಿರೀಕ್ಷೆ ಇದೆ. ನಂತರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನಕುಮಾರ್ ಕಟೀಲ್ ಸೇರಿದಂತೆ ಪಕ್ಷದ ವರಿಷ್ಠರು ಪ್ರಚಾರಕ್ಕೆ ಬರಲಿದ್ದಾರೆ. ಮುಖಂಡರ ಪ್ರವಾಸದ ಪಟ್ಟಿ ಇನ್ನೂ ನನ್ನ ಕೈಸೇರಿಲ್ಲ. ಗುರುವಾರದಿಂದ ರಾಜಕೀಯ ಚಟುವಟಿಕೆಗಳು ಯೋಜನಾ ಬದ್ಧವಾಗಿ ನಡೆಯಲಿವೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್‌ ತಿಳಿಸಿದರು.

ಜೆಡಿಎಸ್‌ ನಾಮಪತ್ರ ಸಲ್ಲಿಕೆ ನಾಳೆ

ಜೆಡಿಎಸ್ ಅಭ್ಯರ್ಥಿ ಯಸ್ರಬ್ ಅಲಿ ಖಾದ್ರಿ ಮಾರ್ಚ್ 25ರಂದು ಮಧ್ಯಾಹ್ನ 1 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ಅಂದು ಬೆಳಿಗ್ಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿಮಾನದ ಮೂಲಕ ಕಲಬುರ್ಗಿಗೆ ಬರಲಿದ್ದಾರೆ. ನಂತರ ಬಸವಕಲ್ಯಾಣದ ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ಶಾಸಕರಾದ ಬಂಡೆಪ್ಪ ಕಾಶೆಂಪೂರ, ವೆಂಕಟರಾವ್‌ ನಾಡಗೌಡ ಅವರೂ ಬಸವಕಲ್ಯಾಣಕ್ಕೆ ಬರಲಿದ್ದಾರೆ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ ತಿಳಿಸಿದರು.

ಏಪ್ರಿಲ್ 4 ರಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಕೈಗೊಳ್ಳಲಿದ್ದಾರೆ. ಎಚ್‌.ಡಿ.ಕುಮಾರಸ್ವಾಮಿ ಅವರು ಏಪ್ರಿಲ್‌ 4ರಿಂದ ಒಂದು ವಾರ ಬಸವಕಲ್ಯಾಣ ಕ್ಷೇತ್ರದಲ್ಲೇ ಠಿಕಾಣಿ ಹೂಡಲಿದ್ದಾರೆ. ಈಗಾಗಲೇ ಅದಕ್ಕೆ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.