ಪ್ರಚಾರ ಅಬ್ಬರ, ವಾಕ್ಸಮರ ಪರಾಕಾಷ್ಠೆ

ಬೆಂಗಳೂರು,ಮೇ ೩:ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಕ್ಕೆ ಇನ್ನು ೪ ದಿನಗಳಷ್ಟೇ ಬಾಕಿ ಇರುವಾಗಲೇ ಪ್ರಚಾರದ ಭರಾಟೆ ಬಿರುಸಾಗಿದ್ದು, ಪ್ರಚಾರ ಪರಾಕಾಷ್ಠೆ ತಲುಪಿದೆ. ನಾಯಕರುಗಳ ಮಧ್ಯೆ ವಾಕ್ಸಮರ, ಆರೋಪ-ಪ್ರತ್ಯಾರೋಪಗಳೂ ತಾರಕಕ್ಕೇರಿವೆ.
ಮೇ ೧೦ ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಚುನಾವಣಾ ಪ್ರಣಾಳಿಕೆಯಲ್ಲಿರುವ ಅಂಶಗಳು ಮಾತಿನ ವಾಗ್ಯುದ್ಧ, ಏಟು-ಎದಿರೇಟುಗಳಿಗೆ ಕಾರಣವಾಗಿದೆ.
ಉಚಿತ ಯೋಜನೆಗಳಿಗೆ ವಿರೋಧವಾಗಿದ್ದ ಬಿಜೆಪಿ, ತನ್ನ ಪ್ರಣಾಳಿಕೆಯಲ್ಲಿ ಕೆಲ ಉಚಿತ ಯೋಜನೆಗಳನ್ನು ಪ್ರಕಟಿಸಿರುವುದು ಚರ್ಚೆಗೆ ಗ್ರಾಸವಾಗಿ ಎರಡೂ ಪಕ್ಷಗಳ ನಾಯಕರುಗಳ ಆರೋಪ-ಪ್ರತ್ಯಾರೋಪಗಳಿಗೆ ಅಸ್ತ್ರ ಒದಗಿಸಿದೆ. ಬಿಜೆಪಿ ಹೇಳುವುದೊಂದು ಮಾಡುವುದೊಂದು ಎಂದು ಕಾಂಗ್ರೆಸ್ ಟೀಕೆ ಮಾಡಿ ನುಡಿದಂತೆ ನಡೆಯುವುದು ಕಾಂಗ್ರೆಸ್ ಮಾತ್ರ ಎಂದು ಪ್ರಚಾರ ನಡೆಸಿದ್ದರೆ, ಬಿಜೆಪಿ ಬಜರಂಗದಳ ನಿಷೇಧ ಸೇರಿದಂತೆ ಕಾಂಗ್ರೆಸ್ ಪಕ್ಷದ ಗ್ಯಾರೆಂಟಿ ಯೋಜನೆಗಳನ್ನು ಗುರಿಯಾಗಿಸಿ ಪ್ರಚಾರ ಸಭೆಗಳಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.
ಭಜರಂಗದಳ ನಿಷೇಧ ಕಿಚ್ಚು
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧಿಸುವ ಪ್ರಸ್ತಾಪ ಮಾಡಿರುವುದು ಕಿಚ್ಚಿಗೆ ಕಾರಣವಾಗಿದ್ದು, ಪ್ರಧಾನಿ ನರೇಂದ್ರಮೋದಿ ಸೇರಿದಂತೆ ಬಿಜೆಪಿ ನಾಯಕರುಗಳು ಕಾಂಗ್ರೆಸ್ ವಿರುದ್ಧ ಮುಗಿಬಿದ್ದು, ಕಾಂಗ್ರೆಸ್ ಆಂಜನೇಯನನ್ನು ಬಂಧಿಸಲು ಹೊರಟಿದೆ. ರಾಮ, ಆಂಜನೇಯನ ಬಗ್ಗೆ ಕಾಂಗ್ರೆಸ್‌ಗೆ ಗೌರವ ಇಲ್ಲ ಎಂದು ಪ್ರಚಾರ ಸಭೆಗಳಲ್ಲಿ ಕಿಡಿಕಾರುತ್ತಿದ್ದು, ಬsಜರಂಗದಳ ನಿಷೇಧ ಪ್ರಸ್ತಾಪ ಹಿಂದುತ್ವದ ಅಜೆಂಡಾ ಹೊಂದಿರುವ ಬಿಜೆಪಿಗೆ ಹೊಸ ಅಸ್ತ್ರವನ್ನು ಕಾಂಗ್ರೆಸ್ ನೀಡಿದಂತಾಗಿದೆ.
ಬಿಜೆಪಿಯ ವಾಗ್ದಾಳಿಗೆ ಪ್ರತಿಯಾಗಿ ಕಾಂಗ್ರೆಸ್ ಶೇ. ೪೦ರಷ್ಟು ಭ್ರಷ್ಟಾಚಾರದ ಅಸ್ತ್ರ, ತನ್ನ ಗ್ಯಾರೆಂಟಿ ಯೋಜನೆಗಳನ್ನು ಪ್ರಸ್ತಾಪಿಸಿ ಬಿಜೆಪಿಗೆ ಎದಿರೇಟು ನೀಡಿದೆ.
ಈ ಪ್ರಚಾರ ಸಭೆಗಳಲ್ಲಿ ನಾಯಕರುಗಳು ಪರಸ್ಪರ ವೈಯಕ್ತಿಕ ನಿಂದನೆಗೂ ಇಳಿದಿದ್ದು, ವಾಕ್ಸಮರ ಬಿರುಸಾಗಿ ಪ್ರಚಾರ ತಾರಕಕ್ಕೇರಿದೆ. ಬಹಿರಂಗ ಪ್ರಚಾರಕ್ಕೆ ಇನ್ನು ೪ ದಿನಗಳಷ್ಟೇ ಬಾಕಿ ಇದ್ದು, ರಾಜ್ಯಾದಿಂದ ನಾಯಕರುಗಳು ಅಬ್ಬರದ ಪ್ರಚಾರ ನಡೆಸಿದ್ದಾರೆ.

ಮೋದಿ, ಖರ್ಗೆ, ಪ್ರಿಯಾಂಕಾ
ರಾಜ್ಯ ವಿಧಾನಸಭಾ ಚುನಾವಣೆಯ ಪ್ರಚಾರ ತಾರಕಕ್ಕೇರಿರುವಾಗಲೇ ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾಗಾಂಧಿ ವಾದ್ರಾ ರಾಜ್ಯದಲ್ಲಿ ಅಬ್ಬರದ ಪ್ರಚಾರ ನಡೆಸುವ ಮೂಲಕ ಪ್ರಚಾರದ ಕಾವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಪ್ರಧಾನಿ ಮೋದಿ ಅವರು ಇಂದು ಮಂಗಳೂರು, ಉಡುಪಿ, ಬೆಳಗಾವಿ ಜಿಲ್ಲೆಗಳಲ್ಲಿ ಸಾರ್ವಜನಿಕ ರ್‍ಯಾಲಿಗಳಲ್ಲಿ ಭಾಗಿಯಾಗಿ ಬಿಜೆಪಿ ಪರವಾಗಿ ಮತ ಶಿಕಾರಿ ನಡೆಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಗುಲ್ಬರ್ಗಾದ ಅಳಂದ, ಚಿಂಚೋಳಿ, ಸೇಡಂಗಳಲ್ಲಿ ನಡೆಯುವ ಕಾಂಗ್ರೆಸ್ ರ್‍ಯಾಲಿಗಳಲ್ಲಿ ಭಾಗಿಯಾಗಿ ಮತಬೇಟೆ ನಡೆಸಿದರು.
ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾಗಾಂಧಿ ವಾಧ್ರಾ ಅವರು ವಿಜಯಪುರದ ಇಂಡಿ, ಬೀದರ್ ದಕ್ಷಿಣ ಮತ್ತು ಗುಲ್ಬರ್ಗಾಗಳಲ್ಲಿ ಸಾರ್ವಜನಿಕ ರ್‍ಯಾಲಿ ಹಾಗೂ ರೋಡ್ ಶೋಗಳಲ್ಲಿ ಭಾಗಿಯಾಗಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚಿಸಿದರು.
ಇವರುಗಳ ಜತೆಗೆ ಎರಡೂ ಪಕ್ಷಗಳ ಪ್ರಮುಖ ಮುಖಂಡರುಗಳು ರಾಜ್ಯದ ವಿವಿಧೆಡೆ ಪ್ರಚಾರಗಳನ್ನು ನಡೆಸಿದ್ದು, ಪ್ರಚಾರ ಪರಾಕಾಷ್ಠೆಗೆ ತಲುಪಿದೆ.