ಪ್ರಚಾರದ ಒತ್ತಡ: ಸ್ಪರ್ದಿಸದ ಪ್ರಿಯಾಂಕ

ನವದೆಹಲಿ,ಮೇ.೪- ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ದೇಶದ ಎಲ್ಲಾ ಭಾಗಳಲ್ಲಿಯೂ ಅಭ್ಯರ್ಥಿಗಳ ಪರ ಪ್ರಚಾರ ಮಾಡಬೇಕಾಗಿದೆ. ಹೀಗಾಗಿ ಅವರು ಉತ್ತರ ಪ್ರದೇಶದ ಅಮೇಥಿ ಅಥವಾ ರಾಯ್ ಬರೇಲಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲಿಲ್ಲ ಎಂದು ಕಾಂಗ್ರೆಸ್ ಸಂವಹನ ವಿಭಾಗದ ಮುಖ್ಯಸ್ಥ ಜೈರಾಮ್ ರಮೇಶ್ ಸ್ಪಷ್ಟಪಡಿಸಿದ್ಧಾರೆ.
ರಾಹುಲ್ ಗಾಂಧಿ ಅವರು ರಾಯ್ ಬರೇಲಿಯಿಂದ ಸ್ಪರ್ಧೆ ಮಾಡಿದ್ದಾರೆ. ಜೊತೆಗೆ ಅವರು ದೇಶ ಎಲ್ಲೆಡೆ ಪ್ರಚಾರ ಮಾಡಬೇಕಾಗಿದೆ. ಒಂದು ವೇಳೆ ಪ್ರಿಯಾಂಕ ಗಾಂಧಿ ಅವರೂ ಕೂಡ ಲೋಕಸಭೆಗೆ ಸ್ಪರ್ಧಿಸಿದರೆ ಎಲ್ಲೆಡೆ ಪ್ರಚಾರಕ್ಕೆ ಹೋಗಲು ಕಷ್ಟವಾಗುತ್ತದೆ ಎನ್ನುವ ಕಾರಣಕ್ಕೆ ಚುನಾವಣಾ ಕಣಕ್ಕೆ ಧುಮುಕಿಲ್ಲ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ತಕ್ಕ ತಿರುಗೇಟು ನೀಡುವ ಶಕ್ತಿ ಪ್ರಿಯಾಂಕ ಗಾಂಧಿ ಅವರಿಗೆ ಇದೆ. ಈ ಕಾರಣಕ್ಕಾಗಿ ಕಾಂಗ್ರೆಸ್ ಮಲ್ಲಿಕಾರ್ಜುನ ಖರ್ಗೆ ಅವರಾಗಲಿ ಅಥವಾ ರಾಹುಲ್ ಗಾಂಧಿ ಅವರಾಗಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ಒತ್ತಡ ಹೇರಲಿಲ್ಲ ಎಂದಿದ್ದಾರೆ
ಪಕ್ಷ ಪ್ರಿಯಾಂಕಾ ಮತ್ತು ರಾಹುಲ್ ಗಾಂಧಿ ಇಬ್ಬರೂ ಸ್ಪರ್ಧಿಸಬೇಕೆಂದು ಬಯಸಿತ್ತು ಆದರೆ ವಾಸ್ತವಿಕವಾಗಿ, ನನಗೆ ಮತ್ತು ಪಕ್ಷದ ಅನೇಕ ಜನರಿಗೆ ಗೊತ್ತಿತ್ತು, ಪ್ರಧಾನಿ ಮೋದಿ ಪ್ರಚಾರ ಹೆಚ್ಚಿಸಿದ್ದಾರೆ ಅದಕ್ಕೆ ತಕ್ಕಂತೆ ನಾವೂ ತಿರುಗೇಟು ನೀಡಬೇಕು ಎನ್ನುವ ಉದ್ದೇಶದಿಂದ ಪ್ರಿಯಾಂಕ ಗಾಂಧಿ ಅವರನ್ನು ಕಣಕ್ಕೆ ಇಳಿಸಲಿಲ್ಲ ಎಂದು ತಿಳಿಸಿದ್ದಾರೆ.
ಇಂದಿರಾ ಮತ್ತು ರಾಜೀವ್ ಗಾಂಧಿ ಅವರಂತೆ ಪ್ರಿಯಾಂಕಾ ಗಾಂಧಿ ಅವರು ಬಿಜೆಪಿಯ ದಾಳಿಗೆ ತಕ್ಕ ಪ್ರತ್ಯುತ್ತರ ನೀಡುವ ಶಕ್ತಿ ಸಾಮಥ್ರ್ಯವನ್ನು ಹೊಂದಿದ್ದಾರೆ. ದೇಶಾದ್ಯಂತ ಪ್ರಚಾರ ನಡೆಸುತ್ತಿದ್ದಾರೆ. ರಾಹುಲ್ ಗಾಂಧಿ ಸಮಸ್ಯೆಗಳ ಅಸಮಾನತೆ, ಸಂವಿಧಾನ ಮತ್ತು ಇತರ ನೀತಿ ಸಮಸ್ಯೆಗಳ ಬೆಳಕು ಚೆಲ್ಲುತ್ತಿದ್ದಾರೆ ಎಂದಿದ್ದಾರೆ
ಪ್ರಿಯಾಂಕ ಗಾಂಧಿ ಅವರ ಪ್ರಚಾರದ ಶೈಲಿ, ವ್ಯಕ್ತಿತ್ವ ಪ್ರಚಾರದಲ್ಲಿ ಪಕ್ಷದ ಅಭ್ಯರ್ಥಿಗಳ ಪರ ದೊಡ್ಡ ಮಟ್ಟದಲ್ಲಿ ಪ್ರಚಾರ ನಡೆಸಲು ಸಹಕಾರಿಯಾಗುತ್ತಿವೆ ಎಂದು ಹೇಳಿದ್ದಾರೆ.
ಕೊನೆ ಗಳಿಗೆಯಲ್ಲಿ ನಾಮಪತ್ರ ಸಲ್ಲಿಕೆ ಚುನಾವಣಾ ತಂತ್ರವಷ್ಟೇ ಎಂದು ಹೇಳಿದ ಅವರು ರಾಹುಲ್ ಗಾಂಧಿ ಅವರ ಎರಡನೇ ಕ್ಷೇತ್ರ ಆಯ್ಕೆ ಮಾಡಿಕೊಂಡ ಬಗ್ಗೆ ಬಿಜೆಪಿ ಟೀಕೆ ಮಾಡುತ್ತಿದೆ. ಅವರಿಗೆ ಸಹಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.