ಪ್ರಚಾರಕ್ಕೆ ಶಾ ರಣತಂತ್ರ

ಬೆಂಗಳೂರು,ಏ.೨೧:ರಾಜ್ಯ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮುಗಿಯುತ್ತಿದ್ದಂತೆಯೇ ಬಿಜೆಪಿ ಅಬ್ಬರದ ಪ್ರಚಾರಕ್ಕೆ ಮುಂದಾಗಿರುವುದು ಪ್ರಚಾರದ ರೂಪು ರೇಷೆಗಳನ್ನು ಅಂತಿಮಗೊಳಿಸಲು ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಜೆಪಿ ನಾಯಕರ ಜತೆ ಸಭೆ ನಡೆಸುವರು.
ಬಿಜೆಪಿಯ ಚುನಾವಣಾ ಚಾಣಕ್ಯ ಎಂದೇ ಹೆಸರಾಗಿರುವ ಅಮಿತ್ ಶಾ ಇಂದು ನಗರಕ್ಕೆ ಬಂದಿಳಿದಿದ್ದು, ದೇವನಹಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ರೋಡ್ ಶೋ ನಡೆಸಿ ನಂತರ ಸಂಜೆ ಬಿಜೆಪಿಯ ಚುನಾವಣಾ ನಿರ್ವಹಣಾ ಸಮಿತಿ ಹಾಗೂ ಪ್ರಚಾರ ಸಮಿತಿಯ ಸಭೆಗಳನ್ನು ನಡೆಸಿ ಸಭೆಯಲ್ಲಿ ಪ್ರಚಾರ ಯಾವ ರೀತಿ ಇರಬೇಕು. ಎಲ್ಲೆಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸಬೇಕು, ಎಲ್ಲೆಲ್ಲಿ ರೋಡ್ ಶೋ ಗಳನ್ನು ಆಯೋಜಿಸಬೇಕು ಎಂಬೆಲ್ಲದರ ಬಗ್ಗೆ ಚರ್ಚೆಗಳನ್ನು ನಡೆಸಬೇಕು ಎಂಬ ನಿರ್ಧಾರಗಳನ್ನು ಕೈಗೊಳ್ಳುವರು.
ಪ್ರಧಾನಿ ಮೋದಿ ಅವರ ಪ್ರಚಾರ ಸಭೆ ಮತ್ತು ರೋಡ್ ಶೋ ಗಳನ್ನು ಎಲ್ಲೆಲ್ಲಿ ನಡೆಸಬೇಕು ಎಂಬ ಬಗ್ಗೆ ಇಂದಿನ ಸಭೆಯಲ್ಲಿ ಅಮಿತ್ ಶಾ ಚರ್ಚೆ ನಡೆಸಿ, ಪ್ರಧಾನಿ ಅವರ ಪ್ರಚಾರದ ಸಭೆ ಮತ್ತು ದಿನಾಂಕಗಳನ್ನು ಅಂತಿಮಗೊಳಿಸುವರು.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣಸವದಿ ಸೇರಿದಂತೆ ಟಿಕೆಟ್ ಕೈ ತಪ್ಪಿರುವ ಕೆಲ ಹಾಲಿ ಶಾಸಕರು ಪಕ್ಷ ಬಿಟ್ಟಿರುವ ಹಿನ್ನೆಲೆಯಲ್ಲಿ ಈ ಕ್ಷೇತ್ರಗಳಲ್ಲಿ ಯಾವ ರೀತಿ ಚುನಾವಣೆಗಳನ್ನು ನಿಭಾಯಿಸಬೇಕು ಎಂಬ ಬಗ್ಗೆಯೂ ಸಭೆಯಲ್ಲಿ ಚರ್ಚೆಗಳು ನಡೆಯಲಿದೆ.
ಕೇಂದ್ರಗೃಹ ಸಚಿವ ಅಮಿತ್ ಶಾ ನಡೆಸುವ ಈ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಚುನಾವಣಾ ಉಸ್ತುವಾರಿಗಳಾದ ಧರ್ಮೇಂದ್ರ ಪ್ರಧಾನ್, ಮನ್ಸೂಕ್ ಮಾಂಡವಿಯಾ, ಅಣ್ಣಾಮಲೈ, ಶೋಭಾಕರಂದ್ಲಾಜೆ ಸೇರಿದಂತೆ ಪ್ರಮುಖ ನಾಯಕರುಗಳು ಭಾಗಿಯಾಗುವರು.