ಪ್ರಚಾರಕ್ಕೆ ಭರ್ಜರಿ ರಂಗು

ಸಿಎಂರಿಂದ ರೋಡ್ ಶೋ, ಕೈ ವಿರುದ್ಧ ವಾಗ್ದಾಳಿ, ಕೂಡಲ ಸಂಗಮದಲ್ಲಿ ರಾಹುಲ್ ಸಂಚಲನ

ಬೆಂಗಳೂರು,ಏ.೨೩:ತೀವ್ರ ಕುತೂಹಲ ಕೆರಳಿಸಿರುವ ಈ ಬಾರಿಯ ವಿಧಾನಸಭಾ ಚುನಾವಣೆಯ ಅಬ್ಬರದ ಪ್ರಚಾರಕ್ಕೆ ಭರ್ಜರಿ ರಂಗು ಬಂದಿದೆ. ಮತದಾನಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆಯೇ ಮತ್ತೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಎಲ್ಲ ತಂತ್ರಗಳನ್ನು ರೂಪಿಸಿರುವ ಬಿಜೆಪಿ, ಮತದಾರರ ಓಲೈಕೆಗೆ ಕಸರತ್ತು ನಡೆಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಪ್ರಚಾರದ ಅಖಾಡಕ್ಕೆ ಧುಮುಕಿ, ಬೆಂಗಳೂರಿನಿಂದ ರೋಡ್ ಶೋ ನಡೆಸಿ ೬ ಜಿಲ್ಲೆಗಳಲ್ಲಿ ಮತಬೇಟೆ ನಡೆಸಿದರು.
ಚಾಲುಕ್ಯ ಹೋಟೆಲ್ ಸಮೀಪ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಸವರಾಜ ಬೊಮ್ಮಾಯಿ ಅವರು “ಜನವಾಹಿನಿ” ವಾಹನದಲ್ಲಿ ಭರ್ಜರಿ ರೋಡ್ ಶೋಗೆ ಚಾಲನೆ ನೀಡಿದರು. ಸಾವಿರಾರು ಕಾರ್ಯಕರ್ತರು ಈ ರೋಡ್ ಶೋನಲ್ಲಿ ಭಾಗಿಯಾದರು.
ಒಂದೇ ದಿನ ೧೧ ವಿಧಾನಸಭಾ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಇಂದು ಯಲಹಂಕ, ದೊಡ್ಡಬಳ್ಳಾಪುರ, ನೆಲಮಂಗಲ, ಡಾಬಸ್‌ಪೇಟೆಯಲ್ಲಿ ರೋಡ್ ಶೋ ನಡೆಸಿ ಡಬಲ್ ಇಂಜಿನ್ ಸರ್ಕಾರದ ಯೋಜನೆಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡಿದರು. ಯಲಹಂಕದಲ್ಲಿ ಪಕ್ಷದ ಅಭ್ಯರ್ಥಿ ಎಸ್.ಆರ್. ವಿಶ್ವನಾಥ್ ಪರ ಮತಬೇಟೆ ನಡೆಸಿದರು.
ಈ ವೇಳೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯರವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ೮ ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ತರಾಟೆಗೆ ತೆಗೆದುಕೊಂಡರು.
ಕಾಂಗ್ರೆಸ್ ಭ್ರಷ್ಟಾಚಾರದ ಅವಿಭಾಜ್ಯ ಅಂಗವಾಗಿದೆ. ಕಾಂಗ್ರೆಸ್ ಜಾತಿ, ಧರ್ಮವನ್ನು ಒಡೆಯುವ ಕೆಲಸ ಮಾಡುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆದು ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು.
ಮಧ್ಯಾಹ್ನದ ನಂತರ ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಮಗಳೂರು ಜಿಲ್ಲೆಯಲ್ಲೂ ರಾತ್ರಿಯವರೆಗೆ ಪ್ರಚಾರ ನಡೆಸಲಿದ್ದಾರೆ. ತುಮಕೂರು ಗ್ರಾಮಾಂತರ, ಗುಬ್ಬಿ, ತಿಪಟೂರು, ಅರಸೀಕೆರೆ, ಕಡೂರು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ರೋಡ್‌ಶೋ ನಡೆಸಿ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ.
ನಾಳೆ ದಾವಣಗೆರೆಯಿಂದ ರೋಡ್ ಶೋ ಆರಂಭಿಸಲಿರುವ ಮುಖ್ಯಮಂತ್ರಿಗಳು ಹರಿಹರ, ರಾಣೆಬೆನ್ನೂರು, ಹಾವೇರಿ, ಬಂಕಾಪುರ, ಸವಣೂರು, ಶಿಗ್ಗಾವಿ, ಕುಂಧಗೋಳದಲ್ಲಿ ಪ್ರಚಾರ ನಡೆಸಿ ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಇದೇ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಏ. ೨೫ ರಂದು ಹುಬ್ಬಳ್ಳಿಗೆ ಆಗಮಿಸಿ ೨೬ ರಂದು ಶಿರಸಿಯಲ್ಲಿ ಪ್ರಚಾರ ನಡೆಸಲಿದ್ದಾರೆ. ಸೊರಬ, ಮೂಡಿಗೆರೆಯಲ್ಲಿ ಪ್ರಚಾರ ನಡೆಸಲಿದ್ದಾರೆ.

ಬಸವಣ್ಣನ ನಾಡಲ್ಲಿ ರಾಗಾ ಪ್ರಚಾರ
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತ ಸಮುದಾಯ ವಿಚಾರ ಮುನ್ನೆಲೆಗೆ ಬಂದಿರುವ ಹೊತ್ತಿನಲ್ಲೇ ಬಸವ ಜಯಂತಿ ದಿನದಂದೇ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಲಿಂಗಾಯತ ಸಮುದಾಯದ ಮತಗಳನ್ನು ಸೆಳೆಯಲು ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಚಾರದ ಮತಬೇಟೆ ನಡೆಸಿದ್ದಾರೆ.
ಇಂದು ಹುಬ್ಬಳ್ಳಿಯ ವಿಮಾನನಿಲ್ದಾಣಕ್ಕೆ ಆಗಮಿಸಿದ ರಾಹುಲ್‌ಗಾಂಧಿ ಅವರನ್ನು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ಹೆಲಿಪ್ಯಾಡ್‌ನಿಂದ ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮಕ್ಕೆ ಹೆಲಿಕಾಪ್ಟರ್‌ನಲ್ಲಿ ತೆರಳಿ ಜಗಜ್ಯೋತಿ ಬಸವೇಶ್ವರ ಜಯಂತಿಯಲ್ಲಿ ಪಾಲ್ಗೊಂಡರು.
ಈ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮುಖಂಡರಾದ ಸತೀಶ್ ಜಾರಕಿಹೊಳಿ, ಎಂ.ಬಿ. ಪಾಟೀಲ್, ಕೆ.ಸಿ. ವೇಣುಗೋಪಾಲ್ ಮತ್ತಿತರ ನಾಯಕರು ಪಾಲ್ಗೊಂಡರು.
ಇದೇ ವೇಳೆ ಹೆಲಿಪ್ಯಾಡ್‌ನಲ್ಲಿ ಚುನಾವಣಾಧಿಕಾರಿಗಳು ರಾಹುಲ್‌ಗಾಂಧಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಪಾಸಣೆ ನಡೆಸಿ ವೀಡಿಯೊ ಚಿತ್ರೀಕರಣ ಮಾಡಿಕೊಂಡರು.
ರಾಹುಲ್‌ಗಾಂಧಿ ರಾಜ್ಯಕ್ಕೆ ಭೇಟಿ ನೀಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಾಳಯದಲ್ಲಿ ರಣೋತ್ಸಾಹ ಕಂಡು ಬಂದಿದ್ದು, ಸಾವಿರಾರು ಕಾರ್ಯಕರ್ತರು ಯುವ ನಾಯಕನ ಜತೆ ಹೆಜ್ಜೆ ಹಾಕಿ ಪ್ರಚಾರ ನಡೆಸಿದರು.
ಬಸವಣ್ಣನವರ ಕರ್ಮಭೂಮಿ ಕೂಡಲಸಂಗಮದಲ್ಲಿ ರಾಹುಲ್ ರ್‍ಯಾಲಿ ನಡೆಸಿ ಲಿಂಗಾಯಿತ ಮತ ಬುಟ್ಟಿಗೆ ಕೈ ಹಾಕಿದ್ದಾರೆ.ಅದುವೇ ಬಸವ ಜಯಂತಿ ಪ್ರಯುಕ್ತ ಕೂಡಲಸಂಗಮಕ್ಕೆ ರಾಹುಲ್ ಗಾಂಧಿ ಭೇಟಿ ಕೊಡುತ್ತಿದ್ದು, ಲಿಂಗಾಯತ ಮತಗಳನ್ನ ಸೆಳೆಯುವ ಯತ್ನ ಮಾಡಿದ್ದಾರೆ.
ನಂತರ ದಾಸೋಹ ಭವನದಲ್ಲಿ ಪ್ರಸಾದ ಸೇವನೆ ಮಾಡಿ, ಅಲ್ಲಿಂದ ವಿಜಯಪುರಕ್ಕೆ ತೆರಳುತ್ತಾರೆ. ಸಂಜೆ ರ ಹೊತ್ತಿಗೆ ವಿಜಯಪುರ ನಗರದಲ್ಲಿ ರೋಡ್ ಶೋ ನಡೆಸಲಿದ್ದಾರೆ.
ವಿಜಯಪುರ ನಗರದ ಶಿವಾಜಿ ವೃತ್ತದಿಂದ ಕನಕದಾಸರ ವೃತ್ತದ ವರೆಗೆ ೨ ಕಿಲೋ ಮಿಟರ್ ರೋಡ್ ಶೋ ಮಾಡಲಿರುವ ರಾಹುಲ್ ಗಾಂಧಿ. ಶಿವಾಜಿ ವೃತ್ತ, ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತದ್ದ ಮಾರ್ಗವಾಗಿ ಕನಕದಾಸ ವೃತ್ತಕ್ಕೆ ಹೋಗಿ ಅಲ್ಲಿ ಸಾರ್ವಜನಿಕರನ್ನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ರಾತ್ರಿ ವಿಜಯಪುರದಲ್ಲೇ ರಾಹುಲ್ ವಾಸ್ತವ್ಯ. ಈ ಹಿನ್ನೆಲೆಯಲ್ಲಿ ರಾಹುಲ್ ಕಾರ್ಯಕ್ರಮ ನಡೆಯುವ ಕೂಡಲಸಂಗಮದಲ್ಲಿ ಕೈ ಲಿಂಗಾಯತ ನಾಯಕರು ಸಿದ್ಧತೆಗಳ ಪರಿಶೀಲನೆ ನಡೆಸಲಿದ್ದಾರೆ.
ಲಿಂಗಾಯತ ಮತಬುಟ್ಟಿ ಮೇಲೆ ಕಣ್ಣು ಹಾಕಿರುವ ಸಮಯದಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ದೊಡ್ಡ ಆಪರೇಷನ್ ಮಾಡಿದೆ. ಚಿತ್ತಾಪುರ ಮೂಲದ ಲಿಂಗಾಯತ ಸಮುದಾಯದ ನಾಯಕ ವಿಶ್ವನಾಥ್ ಪಾಟೀಲ್ ಕಾಂಗ್ರೆಸ್ ಸೇರಿದ್ದಾರೆ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ.
ಪ್ರಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ, ಮಾಜಿ ಸಿಎಂ ಜಗದೀಶ್‌ಶೆಟ್ಟರ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಸೇರಿದಂತೆ ಇತರ ನಾಯಕರು ಭಾಗಿಯಾಗಲಿದ್ದಾರೆ.