ಪ್ರಗತಿ ಸಾಧಿಸಲು ಯುವಜನತೆಗೆ ಪ್ರೇರಣೆ ಬೇಕಿದೆ

ಸಂಜೆವಾಣಿ ವಾರ್ತೆ

ಚಿತ್ರದುರ್ಗ.ಮೇ.10; ನಗರದ ಚಂದ್ರವಳ್ಳಿಯ ಎಸ್.ಜೆ.ಎಂ. ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಮತ್ತು ವಾಣಿಜ್ಯಶಾಸ್ತ್ರ ವಿಭಾಗದ ಸಹಯೋಗದಲ್ಲಿ ಸುಸ್ಥಿರತೆ ಮತ್ತು ಪ್ರಗತಿಯನ್ನು ಸಾಧಿಸಲು ಯುವಜನತೆಯನ್ನು ಪ್ರೇರೇಪಿಸುವುದು ಮತ್ತು ತೊಡಗಿಸಿಕೊಳ್ಳುವ ಕುರಿತು ಕಾರ್ಯಾಗಾರ ನಡೆಯಿತು.ಬೆಂಗಳೂರು ಏಸ್ ಡಿಸೈರ‍್ಸ್ ಲಿಮಿಟೆಡ್‌ನ ಕೈಗಾರಿಕಾ ಉತ್ಪಾದನಾ ಸಲಹೆಗಾರರಾದ ಕಾಶಿನಾಥ್ ಎಂ. ಪಟ್ಟಣಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ, ವಿದ್ಯಾರ್ಥಿಗಳು ವೃತ್ತಿಪರತೆಯನ್ನು ಅಭಿವೃದ್ಧಿಪಡಿಸುವುದು ಮತ್ತು ಉದ್ಯೋಗದಂತೆ ಕಲಿಯಲು ಆಯಾ ಸ್ಥಳದಲ್ಲಿ ಸಣ್ಣಚಟುವಟಿಕೆಗಳಲ್ಲಿ ಹೇಗೆ ತೊಡಗಬೇಕೆಂದು ಕಲಿಯಬೇಕು. ಇದರಿಂದ ಇಂಪೋಸ್ಟರ್ ಸಿಂಡ್ರೋಮ್ ಅನ್ನು ನಿವಾರಿಸಿಕೊಳ್ಳಲು ಸಾಧ್ಯವಾಗುತ್ತದೆ. ಪ್ರಸ್ತುತ ಸಾಮಾಜಿಕ ವ್ಯವಸ್ಥೆಯಲ್ಲಿ ಯುವಕರು ಸಿಂಡ್ರೋಮ್‌ಗೆ ಒಳಗಾಗುವುದು ತುಂಬ ಸಾಮಾನ್ಯವಾಗಿದೆ ಎಂದರು.ಪ್ರತಿಯೊಬ್ಬರು ತಮ್ಮ ವೃತ್ತಿಯಲ್ಲಿ ಗುರುತಿಸಲ್ಪಡಲು ಸಂತೋಷಪಡಬೇಕು. ಇದು ಅವರಿಗೆ ಜೀವನೋಪಾಯ, ಆರ್ಥಿಕ ಸ್ಥಿತಿ, ಕುಟುಂಬ ಸ್ಥಾನಮಾನ ಮತ್ತು ಸಾಮಾಜಿಕ ಸ್ಥಾನಮಾನವನ್ನು ನೀಡುತ್ತದೆ ಎಂದರಲ್ಲದೆ, ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿಗಳ ಧ್ಯೇಯವಾಕ್ಯವಾದ ಮಾಡಿದಷ್ಟು ನೀಡು ಭಿಕ್ಷೆ ಈ ಆಶೀರ್ವಾದದ ನುಡಿ ನನಗೆ ಬದುಕನ್ನು ಕಟ್ಟಿಕೊಳ್ಳಲು ಪ್ರೇರಣೆಯಾಗಿದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಡಾ. ಎಸ್.ಹೆಚ್. ಪಂಚಾಕ್ಷರಿ ಮಾತನಾಡಿ, ಇಂಥ ಕಾರ್ಯಗಾರಗಳು ಹೆಚ್ಚು ಹೆಚ್ಚು ನಡೆಯಬೇಕು. ಇದರಿಂದ ವಿದ್ಯಾರ್ಥಿಗಳು ತಮ್ಮ ಕೌಶಲ್ಯ, ಪ್ರತಿಭೆಗಳಿಂದ ಉತ್ತಮ ಸಾಧನೆ ಮಾಡಲು ಸಹಾಯವಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಪ್ರೊ. ಎಲ್. ಶ್ರೀನಿವಾಸ್, ಡಾ. ಹರ್ಷವರ್ಧನ್ ಎ., ಪ್ರೊ. ಎಸ್. ಆನಂದ್, ಪ್ರೊ. ಹೆಚ್.ಎಂ. ಮಂಜುನಾಥಸ್ವಾಮಿ, ಬೋಧಕೇತರರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.ಕು.ಕಾವ್ಯ ಪ್ರಾರ್ಥಿಸಿದರು. ಪ್ರೊ. ಆರ್.ಕೆ. ಕೇದಾರನಾಥ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಬಿ.ಎಂ. ಸ್ವಾಮಿ ವಂದಿಸಿದರು.