ಪ್ರಗತಿ ಪರಿಶೀಲನಾ ಸಭೆ

ಗದಗ,ಆ5 : ಸಹಕಾರಿ ಸಂಸ್ಥೆಗಳಿಗೆ ಸಂಬಂಧಿಸಿದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವದರ ಮೂಲಕ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಸಹಕಾರ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಎನ್. ಮಂಜುನಾಥ ಪ್ರಸಾದ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಸಹಕಾರ ಸಂಘಗಳ ಉಪನಿಬಂಧಕರು, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಹಾಗೂ ಡಿ.ಸಿ.ಸಿ.ಬ್ಯಾಂಕ ವ್ಯವಸ್ಥಾಪಕ ನಿರ್ದೇಶಕರುಗಳೊಂದಿಗೆ ಜರುಗಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಹಕಾರ ಇಲಾಖೆಯು ಕರ್ನಾಟಕ ಸರ್ಕಾರದ ಪ್ರಮುಖ ಇಲಾಖೆಯಾಗಿದೆ. ಇಲಾಖೆಯು ಸಾಮಾಜಿಕ-ಆರ್ಥಿಕ ಯೋಜನೆಗಳು ಮತ್ತು ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದ ವಿವಿಧ ಇಲಾಖೆಗಳೊಂದಿಗೆ ನಿಕಟ ಸಹಕಾರ ಮತ್ತು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು ಎಂದರು.
ಪ್ರಸಕ್ತ ಸಾಲಿನ ಆಯ-ವ್ಯಯದಲ್ಲಿ ಮೂವತ್ತು ಲಕ್ಷಕ್ಕೂ ಅಧಿಕ ರೈತರಿಗೆ ಅಂದಾಜು ಇಪ್ಪತ್ತೈದು ಸಾವಿರ ಕೋಟಿ ರೂ ಸಾಲ ವಿತರಣೆಗೆ ಗುರಿ, ಶೂನ್ಯ ಬಡ್ಡಿದರದಲ್ಲಿ ನೀಡಲಾಗುವ ಅಲ್ಪಾವಧಿ ಸಾಲದ ಮಿತಿಯನ್ನು 5 ಲಕ್ಷ ರೂ. ಗಳಿಗೆ ಹೆಚ್ಚಳ ಹಾಗೂ ಶೇ.3ರ ಬಡ್ಡಿದರದಲ್ಲಿ ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲದ ಮಿತಿಯನ್ನು 10 ಲಕ್ಷ ರೂ. ಗಳಿಂದ 15 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಈ ನಿಟ್ಟಿನಲ್ಲಿ ಸಹಕಾರಿ ಸಂಘಗಳು ಈ ಯೋಜನೆಯ ಅನುಷ್ಠಾನಕ್ಕಾಗಿ ಅಗತ್ಯದ ಸಿದ್ಧತೆಗಳನ್ನು ಮಾಡಿಟ್ಟುಕೊಳ್ಳಬೇಕು.
ಕೃಷಿ ಪತ್ತಿನ ಸಹಕಾರಿ ಸಂಘಗಳನ್ನು ಗಣಕೀಕೃತ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಎಲ್ಲ ಸಂಘಗಳಿಗೂ ಅಗತ್ಯ ಗಣಕ ಯಂತ್ರ, ಸಂಬಂಧಿಸಿದ ತಂತ್ರಾಂಶಗಳನ್ನು ಒದಗಿಸಲಾಗುವುದು. ಈ ಕುರಿತು ಸಿಬ್ಬಂದಿಗಳಿಗೆ ಈಗಾಗಲೇ ತರಬೇತಿಯನ್ನು ನೀಡಲಾಗುತ್ತಿದೆ. ಜಿಲ್ಲೆಯ ಎಲ್ಲ ಸ್ವಸಹಾಯ ಸಂಘಗಳನ್ನು ಗಣಕೀಕೃತಗೊಳಿಸುವದರ ಜೊತೆಗೆ ಸಂಘದ ಪ್ರತಿಯೊಬ್ಬ ಸದಸ್ಯರ ಮಾಹಿತಿಯನ್ನು ಈ ತಂತ್ರಾಂಶದಲ್ಲಿ ದಾಖಲಿಸಬೇಕು. ಅಲ್ಲದೇ ಪ್ರತಿ ಗ್ರಾಮ ಪಂಚಾಯತಗೆ ಒಂದರಂತೆ ಒಂದು ಕೃಷಿ ಪತ್ತಿನ ಸಹಕಾರ ಸಂಘಗಳನ್ನು ತೆರೆಯಲು ಕ್ರಮ ಕೈಗೊಳ್ಳಬೇಕು.
ಜಿಲ್ಲೆಯಲ್ಲಿ ನಿರ್ಮಾಣವಾದಂತಹ ಉಗ್ರಾಣಗಳ ಸಮರ್ಪಕ ಬಳಕೆ ಆಗುವಂತೆ ನಿಗಾವಹಿಸಬೇಕು. ಜಿಲ್ಲೆಯ ಕ್ರೀಡೆಗಳ ಉತ್ತೇಜನಕ್ಕಾಗಿ ಅವಶ್ಯಕವಿರುವ ಮೂಲಸೌಲಭ್ಯಗಳ ಕುರಿತು ಮಾಹಿತಿ ಪಡೆದ ಅವರು ಕ್ರೀಡಾ ರಂಗದಲ್ಲಿ ಜಿಲ್ಲೆಗೆ ಬೇಕಾದ ಅಗತ್ಯದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಅಗತ್ಯದ ಸಹಕಾರ ನೀಡಲಾಗುವದು. ಅಲ್ಲದೇ ಜಿಲ್ಲೆಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಸೈಕ್ಲಿಂಗ ಮೈದಾನದ ನಿರ್ಮಾಣಕ್ಕೆ ಅಗತ್ಯದ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್, ಸಹಕಾರ ಸಂಘಗಳ ಉಪನಿಬಂಧಕರಾದ ಶ್ರೀಮತಿ ಸುಖದೇವಿ, ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶರಣು ಗೋಗೇರಿ, ಸೇರಿದಂತೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ, ಡಿ.ಸಿ.ಸಿ.ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರು ಹಾಜರಿದ್ದರು.