ಪ್ರಗತಿ ಪರಿಶೀಲನಾ ಸಭೆ

ಚನ್ನಮ್ಮನ ಕಿತ್ತೂರ, ಆ 4: ಕ್ಷೇತ್ರದಲ್ಲಿ ನಿರಂತರ ಮಳೆ ಸುರಿಯುತ್ತಿದ್ದು ರೈತರು, ಜನಸಾಮಾನ್ಯರು ಸಂಕಷ್ಟ ಎದುರಿಸುವಂತಾಗಿದೆ. ಇಂತಹ ಸಂದರ್ಭದಲ್ಲಿ ತಾಲೂಕಿನ ಎಲ್ಲ ಇಲಾಖೆಗಳು ಕೇಂದ್ರ ಸ್ಥಾನದಲ್ಲಿದ್ದು ಜನರಿಗೆ ಸ್ಪಂದಿಸಬೇಕೆಂದು ಶಾಸಕ ಮಹಾಂತೇಶ ದೊಡ್ಡಗೌಡರ ಖಡಕ್ಕಾಗಿ ಸೂಚಿಸಿದರು.
ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀ¯ನಾ ಸಭೆ (ಕೆಡಿಪಿ) ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕ್ಷೇತ್ರದಲ್ಲಿ ಕಳಪೆ ಕಾಮಗಾರಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಅಧಿಕಾರಿಗಳದ್ದಾಗಿದೆ. ತಾಲೂಕಿನಲ್ಲಿ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿದ್ದು ಅದಕ್ಕೆ ಅಧಿಕಾರಿಗಳು ಬೇಗನೇ ಎಲ್ಲ ಕಾಮಗಾರಿ ಸರಿಪಡಿಸಬೇಕೆಂದರು.
ಕೆಲ ಶಾಲೆಯ ಕೊಠಡಿಗಳು ಮಳೆಯಿಂದಾಗಿ ಸೋರುತ್ತಿವೆ. ಅಂತಹ ಶಾಲೆಯನ್ನು ಶೀಘ್ರವಾಗಿ ನವೀಕರಿಸಲು ಶಿಕ್ಷಣಾಧಿಕಾರಿಗಳಿಗೆ ತಿಳಿಸಿದರು.
ಅರಣ್ಯ ಇಲಾಖೆ ರಸ್ತೆಗೆ ಅಡ್ಡಲಾಗಿರುವ ಗಿಡಗಳನ್ನು ಕೊರೆಯಲು ಈಗಾಗಲೇ ಪಿಡಬ್ಲೂಡಿ ಅವರಿಂದ ಹಣ ಪಾವತಿಸಿದರೂ ಅರಣ್ಯ ಇಲಾಖೆ ಗಿಡ ಕೊರೆಯಲು ಆದೇಶ ಕೊಟ್ಟಿಲ್ಲ ಎಂದು ಗೋಲಿಹಳ್ಳಿ ವಲಯ ಅರಣ್ಯಾಧಿಕಾರಿಗೆ ತರಾಟೆಗೆ ತೆಗೆದುಕೊಂಡರು.
ಅಧಿಕಾರಿಗಳು ಬಾಕಿ ಇರುವ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಕೈಯೆತ್ತಿಕೊಂಡು ಮುಗಿಸಲಾಗುವುದೆಂದು ಸಭೆಯಲ್ಲಿ ಶಾಸಕರಿಗೆ ತಿಳಿಸಿದರು.
ಕಾಮಗಾರಿ ಗುಣಮಟ್ಟದಾಗಿರಬೇಕು. ಕಳಪೆಯಾಗಬಾರದು. ತಾಲೂಕಿನಲ್ಲಿ ಅಕ್ರಮ ವಹಿವಾಟುಗಳು ಕಂಡುಬಂದಲ್ಲಿ ನನ್ನ ಗಮನಕ್ಕೆ ತನ್ನಿ ಅಂತಹದಕ್ಕೆ ಅಧಿಕಾರಿಗಳು ಮತ್ತು ತಾವು ಜೊತೆಗೂಡಿ ಕ್ರಮ ಜರುಗಿಸುವುದಾಗಿ ತಿಳಿಸಿದರು.
ಸಭೆ ನಂತರ ಸಾರ್ವಜನಿಕರು ಸಮಸ್ಯೆಗಳ ಅಹವಾಲನ್ನು ಶಾಸಕರಿಗೆ ಸಲ್ಲಿಸಿದರು. ನಿಮ್ಮ ಎಲ್ಲ ಸಮಸ್ಯೆಗಳನ್ನು ಸರ್ಕಾರ ಮಟ್ಟದಲ್ಲಿ ಚರ್ಚಿಸಿ ಪರಿಹರಿಸಲಾಗುವುದೆಂದು ಶಾಸಕರು ಭರವಸೆ ನೀಡಿದರು.
ತಹಶೀಲ್ದಾರ ಸೋಮಲಿಂಗಪ್ಪ ಹಲಗಿ, ತಾ.ಪಂ. ಅಧಿಕಾರಿ ಸುಬಾಸ್ ಸಂಪಗಾಂವಿ, ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ. ರಾಜು ಕೂಲೇರ್, ತಾಲೂಕಾ ಮಟ್ಟದ ಎಲ್ಲ ಅಧಿಕಾರಿಗಳು, ತಾ.ಪಂ ಸಿಬ್ಬಂದಿ ಇದ್ದರು.