ಬೆಂಗಳೂರು,ಮಾ.೩೦- ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಇದರನ್ವಯ ಹೊಸ ಕಾಮಗಾರಿಗಳಿಗೆ ತಡೆ ಬಿದ್ದರೂ, ಈಗಾಗಲೇ ಆರಂಭವಾಗಿರುವ ಕಾಮಗಾರಿಗಳ ಚಟುವಟಿಕೆಗಳು ಯಾವುದೇ ಅಡೆತಡೆಗಳ ಇಲ್ಲದೆ ಮುಂದುವರೆಯಲಿವೆ.
ರಾಜಧಾನಿ ಬೆಂಗಳೂರಿನ ನಮ್ಮ ಮೆಟ್ರೋ, ಸ್ಮಾರ್ಟ್ ಸಿಟಿ, ಟೆಂಡರ್ ಶ್ಯೂರ್, ಒಳಚರಂಡಿ ವ್ಯವಸ್ಥೆ, ರಾಜಕಾಲುವೆ ಕಾಮಗಾರಿ, ಕೆರೆ ಸಂಕ್ಷಣೆ, ಹೆದ್ದಾರಿ ಕಾಮಗಾರಿ, ಅಂತರ ಜಿಲ್ಲೆ ರಸ್ತೆ ಕಾಮಗಾರಿ ಸೇರಿದಂತೆ ಸಾರ್ವಜನಿಕ ಹಿತಕ್ಕೆ ಕೈಗೊಂಡಿರುವ ಎಲ್ಲ ಕಾಮಗಾರಿಗಳಿಗೆ ಆಯೋಗ ಸಮ್ಮತಿ ಸೂಚಿಸಿದೆ. ಆದರೆ, ಹೊಸ ಯೋಜನೆಗಳ ಅನ್ವಯ ಕಾಮಗಾರಿಗಳಿಗೆ ಚಾಲನೆ ನೀಡಲು ನೀತಿ ಸಂಹಿತೆ ಅಡ್ಡಿಯಾಗಿದೆ. ಹೀಗಾಗಿ ಸರ್ಕಾರ ನೀಡಿದ್ದ ಭರವಸೆಗಳು ಸದ್ಯ ಹಾಗೇ ಉಳಿಯಲಿದೆ.ಈ ಕುರಿತು ಪ್ರತಿಕ್ರಿಯಿಸಿದ ಸರ್ಕಾರಿ ಅಧಿಕಾರಿಯೊಬ್ಬರು, ನೀರಾವರಿ, ಲೋಕೋಪಯೋಗಿ ಸೇರಿದಂತೆ ಈಗಾಗಲೇ ಕೆಲವೊಂದು ಯೋಜನೆಗಳ ಕಾರ್ಯ ಪ್ರಗತಿಯಲ್ಲಿದ್ದರೆ ಅವುಗಳನ್ನು ಮುಂದುವರೆಸಬಹುದು. ನೀತಿ ಸಂಹಿತೆ ಪ್ರಕಾರ ಯಾವುದೇ ಅಡ್ಡಿ ಇಲ್ಲ ಎಂದರು.
ಇದಲ್ಲದೆ ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ಯಾವೆಲ್ಲಾ ಯೋಜನೆಗಳು ಈಗಾಗಲೇ ಜಾರಿಯಲ್ಲಿ ಇದ್ದವೂ ಅವೆಲ್ಲ ಕಾರ್ಯಕ್ರಮಗಳನ್ನೂ ಮುಂದುವರೆಸಬಹುದು ಎಂದು ಅವರು ಹೇಳಿದರು.೫೦ ಲಕ್ಷ ರೂ. ನಷ್ಟ: ಮತ್ತೊಂದೆಡೆ, ಕರ್ನಾಟಕದಲ್ಲಿ ಮಾದರಿ ನೀತಿ ಸಂಹಿತೆ (ಎಂಸಿಸಿ) ಅನುಷ್ಠಾನಗೊಂಡಿದ್ದು, ಕೊಪ್ಪಳ ಜಿಲ್ಲೆಯ ಗ್ರಾಮಸ್ಥರಿಗೆ ಬಹುಕೋಟಿ ವೆಚ್ಚದ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಉದ್ಘಾಟನೆ ನಿನ್ನೆ ರದ್ದಾಗಿದೆ.ಯಲಬುರ್ಗಾ ತಾಲೂಕಿನ ೨೦ ಗ್ರಾಮಗಳಿಗೆ ಕೃಷ್ಣಾ ನದಿಯಿಂದ ಕುಡಿಯುವ ನೀರು ಒದಗಿಸುವ ಉದ್ದೇಶದ ಏತ ನೀರಾವರಿ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಚಾಲನೆ ನೀಡಬೇಕಿತ್ತು. ಆದರೆ ನೀತಿ ಸಂಹಿತೆ ಜಾರಿಗೆ ಬಂದ ನಂತರ ಕೊನೆಯ ಕ್ಷಣದಲ್ಲಿ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು. ಕಾರ್ಯಕ್ರಮ ರದ್ದು ಮಾಡಿದ್ದರಿಂದ ಜಿಲ್ಲಾಡಳಿತಕ್ಕೂ ನಷ್ಟವಾಗಿದೆ.ಕಾರ್ಯಕ್ರಮಕ್ಕಾಗಿ ಸ್ಥಳ ಮತ್ತು ವೇದಿಕೆ ಸಿದ್ಧಪಡಿಸಿದ್ದಕ್ಕಾಗಿ ಗುತ್ತಿಗೆದಾರರಿಗೆ ಹೆಚ್ಚಿನ ಹಣ ಪಾವತಿಸಬೇಕಾಗಿದೆ. ಒಟ್ಟಾರೆ, ೫೦ ಲಕ್ಷ ನಷ್ಟವಾಗಿದೆ ಎಂದು ಮೂಲಗಳು ದೃಢಪಡಿಸಿವೆ.ಈ ಬಗ್ಗೆ ಚುನಾವಣೆ ಆಯೋಗ ಅಧಿಕಾರಿಯೊಬ್ಬರು ಮಾತನಾಡಿ, ಸಚಿವರು ಬೆಂಗಳೂರನ್ನು ಬಿಟ್ಟು ಹೊರಗಡೆ ಹೋಗೋದಕ್ಕೆ ಚುನಾವಣಾ ಆಯೋಗದ ಅನುಮತಿ ಪಡೆಯಲೇಬೇಕು. ಸಚಿವರು, ಶಾಸಕರಿಗೆ ಕೆಲವೊಂದು ವಿನಾಯ್ತಿಗಳೂ ಇವೆ. ಬರ ಮತ್ತು ಪ್ರವಾಹ ಪರಿಸ್ಥಿತಿಯ ಪರಿಶೀಲನೆ ನಡೆಸಲು ಚುನಾವಣಾ ಆಯೋಗ ಅಡ್ಡಿ ಮಾಡಲ್ಲ. ಪರಿಹಾರ ಬಿಡುಗಡೆ ಮಾಡುವುದಕ್ಕೂ ಅಡ್ಡಿಯಿಲ್ಲ ಎಂದರು.ಕುಡಿಯುವ ನೀರು ಪೂರೈಕೆ ಮಾಡಲು ಗೋಶಾಲೆ ತೆರೆಯೋದಕ್ಕೂ ನೀತಿ ಸಂಹಿತೆ ಅಡ್ಡಿ ಆಗಲ್ಲ. ಆದರೆ, ಎಲ್ಲದಕ್ಕೂ ಚುನಾವಣಾ ಆಯೋಗದ ಅನುಮತಿ ಬೇಕೇ ಬೇಕು. ಇನ್ನು ಸೇತುವೆ, ರಸ್ತೆ ಸೇರಿದಂತೆ ಯಾವುದೇ ಕಾಮಗಾರಿ ಕೆಲಸ ಪೂರ್ಣ ಆಗಿದ್ದರೆ ಅಧಿಕಾರಿಗಳು ಉದ್ಘಾಟನೆ ಮಾಡಬಹುದು, ಸಾರ್ವಜನಿಕರ ಸೇವೆಗೆ ಅರ್ಪಣೆ ಮಾಡಬಹುದು ಎಂದು ಹೇಳಿದರು.