ಪ್ರಗತಿಗೆ ಮುಳುವಾಗಿರುವ ರಾಜ್ಯ ಬಿಜೆಪಿ ಸರ್ಕಾರ; ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಿಸಿದ ಮಾತ್ರಕ್ಕೆ ಅಭಿವೃದ್ಧಿ ಆಗುವುದಿಲ್ಲ – ಈಶ್ವರ ಖಂಡ್ರೆ

ಕಲಬುರಗಿ,ಸೆ.16: ಕರ್ನಾಟಕದ ಬಿಜೆಪಿ ಸರ್ಕಾರ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಿದ್ದು, ಈ ಭಾಗದ ಬಗ್ಗೆ ಮಲತಾಯಿ ಧೋರಣೆ ತೋರುತ್ತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಹಾಗೂ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಆರೋಪಿಸಿದ್ದು, ಬಜೆಟ್ ನಲ್ಲಿ ಹಂಚಿಕೆ ಮಾಡಿದ್ದ ಹಣವನ್ನೂ ಕಡಿತ ಮಾಡಿರುವುದು ಇದಕ್ಕೆ ಜ್ವಲಂತ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯ ಹೆಸರನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಎಂದು ಮರುನಾಮಕರಣ ಮಾಡಿದ ಮಾತ್ರಕ್ಕೆ ತೀವ್ರ ಹಿಂದುಳಿದಿರುವ ಪ್ರದೇಶ ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ಸರ್ಕಾರ ಮನಗಾಣಬೇಕು, ಜನರನ್ನು ಮರುಳು ಮಾಡುವ ಪ್ರಯತ್ನ ಕೈಬಿಟ್ಟು ಪ್ರಾದೇಶಿಕ ಅಸಮತೋಲನದಿಂದ ಬಳಲುತ್ತಿರುವ ವಲಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು ಎಂದೂ ಆಗ್ರಹಿಸಿದ್ದಾರೆ.
ಮಂಜೂರಿ ಆಗಿರುವ ಯೋಜನೆಗಳು, ಟೆಂಡರ್ ಆಗಿರುವ ಕಾಮಗಾರಿಗಳೂ ಇನ್ನೂ ಆರಂಭವಾಗಿಲ್ಲ. ವಿಶೇಷ ಸ್ಥಾನಮಾನ ಪಡೆದಿರುವ ಭಾಗಕ್ಕೆ ವಿಶೇಷ ಅನುದಾನ ನೀಡುವುದಿರಲಿ, ನೀಡಿರುವ ಹಣವನ್ನಾದರೂ ಸರಿಯಾಗಿ ಸರ್ಕಾರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಕ್ಷೇತ್ರದಲ್ಲಿ ಬಿಜೆಪಿ ಸರ್ಕಾರ ಬಂದ, ಕಳೆದ ಒಂದೂ ಕಾಲು ವರ್ಷದಿಂದ ಅಭಿವೃದ್ಧಿ ಚಟುವಟಿಕೆ ಸಂಪೂರ್ಣ ಸ್ಥಗಿತವಾಗಿದೆ. 2019-20 ರ ಸಾಲಿನ ಬಜೆಟ್ ನಲ್ಲಿ ಘೋಷಣೆಯಾಗಿದ್ದ 1500 ಕೋಟಿ ಅನುದಾನದಲ್ಲಿ ರೂ 1125 ಕೋಟಿ ಬಿಡುಗಡೆಯಾಗಿದ್ದು ಉಳಿದ ಹಣ 375 ಕೋಟಿ ರೂ. ಖರ್ಗಾಗದೆ ಉಳಿದಿದೆ. ಇನ್ನು 2020-21 ರ ಸಾಲಿನಲ್ಲಿ 2000 ಕೋಟಿ ರೂ. ನೀಡುವಂತೆ ಕೇಳಿದ್ದರೂ, 1500 ಕೋಟಿ ಮೀಸಲಿಟ್ಟರು, ಈಗ ಅದನ್ನೂ 1136.86 ಕೋಟಿ ರೂ. ಕಡಿತ ಮಾಡಿದ್ದಾರೆ. 2020-21ರಲ್ಲಿ ಇಲ್ಲಿಯವರೆಗೆ ಆರು ತಿಂಗಳುಗಳಲ್ಲಿ ಒಂದೇ ಒಂದು ಕ್ರಿಯಾ ಯೋಜನೆಯೂ ಅನುಮೋದನೆ ನೀಡಿಲ್ಲ. ಇದು ಕಲ್ಯಾಣ ಕರ್ನಾಟಕಕ್ಕೆ ಮಾಡಿದ ಘನ ಘೋರ ಅನ್ಯಾಯ ಎಂದು ಹೇಳಿದ್ದಾರೆ.
ಉಪ ಚುನಾವಣೆ ನಡೆದ ಒಂದೊಂದು ಕ್ಷೇತ್ರಕ್ಕೂ ಮುಖ್ಯಮಂತ್ರಿಗಳು ಸಾವಿರಾರು ಕೋಟಿ ರೂಪಾಯಿ ಯೋಜನೆ, ಪ್ಯಾಕೇಜ್ ಪ್ರಕಟಿಸಿದರು. ಆದರೆ, ಹೈ.ಕದ ಜಿಲ್ಲೆಗಳಿಗೆ ಏಕೆ ಇಂಥ ಪ್ಯಾಕೇಜ್ ನೀಡುತ್ತಿಲ್ಲ. ಹೈ.ಕ. ಜನರು ಕರ್ನಾಟಕದವರಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಈ‌ ಹಿಂದಿನ ಸರ್ಕಾರ ಕಲಂ 371 (ಜೆ) ಅನ್ವಯ ಹೈ ಕ ಭಾಗದ ಖಾಲಿಯಿರುವ 40,000 ಹುದ್ದೆಗಳನ್ನು ಭರ್ತಿ ಮಾಡುವ ನಿರ್ಣಯ ಕೈಗೊಂಡಿತ್ತು. ಇದು ಆರ್ಥಿಕ ಮಿತವ್ಯಯಕ್ಕೆ ಅನ್ವಯವಾಗುವುದಿಲ್ಲ. ಆದರೆ ಬಿಜೆಪಿ ಸರ್ಕಾರ 40 ಸಾವಿರ ಖಾಲಿ ಹುದ್ದೆ ಭರ್ತಿ ಮಾಡುವುದಿರಲಿ ಬ್ಯಾಕ್ ಲಾಗ್ ಹುದ್ದೆಗಳನ್ನೂ ತುಂಬಿಲ್ಲ. ಇದರಿಂದ ಕಲ್ಯಾಣ ಕರ್ನಾಟಕದಲ್ಲಿ ಆಡಳಿತ ಸಂಪೂರ್ಣ ಕುಸಿದಿದ್ದು, ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಯುತ್ತಿಲ್ಲ. ಇನ್ನು ಅನುದಾನಿತ ಪದವಿ ಕಾಲೇಜಿನಲ್ಲಿ ಮಂಜೂರಾದ ಹುದ್ದೆಗಳನ್ನು ತುಂಬುವ ಪ್ರಕ್ರಿಯೆಯನ್ನೂ ಸ್ಥಗಿತಗೊಳಿಸಲಾಗಿದೆ. ಇದೆಲ್ಲವೂ ಹೈ.ಕ. ಭಾಗದ ಬಗ್ಗೆ ಸರ್ಕಾರದ ದಿವ್ಯ ನಿರ್ಲಕ್ಷ್ಯ ಧೋರಣೆಗೆ ಸಾಕ್ಷಿಯಾಗಿದೆ, ಈ ಮೂಲಕ ಯುವಜನರ ಭವಿಷ್ಯವನ್ನು ಸರ್ಕಾರ ಕಮರುವಂತೆ ಮಾಡುತ್ತದೆ ಎಂದು ದೂರಿದ್ದಾರೆ.
14 ತಿಂಗಳಲ್ಲಿ ಹೊಸ ರಸ್ತೆಯಾಗಲೀ, ನೀರಾವರಿ ಕಾಮಗಾರಿಯಾಗಲೀ, ವಿವಿಧ ಹುದ್ದೆಗಳ ಭರ್ತಿ ಆಗಲೀ, ಯಾವುದೂ ನಡೆದಿಲ್ಲ. ಹಿಂದುಳಿದ ಕಲ್ಯಾಣ ಕರ್ನಾಟಕದ ಬಗ್ಗೆ ಸರ್ಕಾರಕ್ಕೆ ವಿಶೇಷ ಕಳಕಳಿ ಇರಲಿ ಕನಿಷ್ಠ ಕಾಳಜಿಯೂ ಇಲ್ಲ ಎಂದು ಆರೋಪಿಸಿದರು.
2013 ರಿಂದ 2019-20 ರವರೆಗೆ ಕಾಂಗ್ರೆಸ್ ಹಾಗೂ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಬಿಡುಗಡೆಯಾದ 4803.95 ಕೋಟಿ ಅನುದಾನ‌ ಹೊರತುಪಡಿಸಿ ಬಿಜೆಪಿ ಸರಕಾರ ಬಿಡುಗಡೆ ಮಾಡಿದ್ದು ಕೇವಲ 282.95 ಕೋಟಿ ಮಾತ್ರ. ಇದರ ಜೊತೆಗೆ ಗಾಯದ ಮೇಲೆ ಬರೆ ಎಳೆದಂತೆ ಹಂಚಿಕೆ ಮಾಡಿದ್ದ ಹಣಕ್ಕೂ ಸರ್ಕಾರ ಖೋತಾ ಮಾಡುತ್ತಿದೆ, ಕೂಡಲೇ ಸರ್ಕಾರ ಈ ಲೋಪ ಸರಿಪಡಿಸಿ, ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ತಕ್ಷಣ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಹಿಂದೆಲ್ಲಾ ಈ ಭಾಗದ ಶಾಸಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ ದೊರಕುತ್ತಿತ್ತು. ಹೈ.‌ಕ ಅಭಿವೃದ್ದಿ ಮಂಡಳಿಗೆ ಸಚಿವರೇ ಅಧ್ಯಕ್ಷರಾಗಿರುತ್ತಿದ್ದರು, ಇದರಿಂದ ಅವರು ಸಂಪುಟ ಸಭೆಯಲ್ಲಿ ಈ ಭಾಗದ ಅಭಿವೃದ್ಧಿಗಾಗಿ ಹೆಚ್ಚುವರಿ ಹಣ ನೀಡುವಂತೆ ಒತ್ತಾಯಿಸಲು ಸಾಧ್ಯವಾಗುತ್ತಿತ್ತು. ಆದರೆ, ಈಗ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ 1 ವರ್ಷದವರೆಗೆ ಅಧ್ಯಕ್ಷರನ್ನೇ ನೇಮಕ ಮಾಡದೆ ಈ ಭಾಗಕ್ಕೆ ಘೋರ ಅನ್ಯಾಯ ಮಾಡಿತ್ತು. ಈಗ ಸಚಿವರಲ್ಲದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಅವರನ್ನು ಮಾಡಿ, ಮಂಡಳಿಯನ್ನು ದುರ್ಬಲಗೊಳಿಸಲಾಗಿದೆ. ಸಂಪುಟದಲ್ಲಿ ಹೈ.ಕ. ಭಾಗದ ಧ್ವನಿಯೇ ಅಡಗಿ ಹೋಗಿದೆ ಎಂದು ಖಂಡ್ರೆ ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ದಿಗೆ ಹಣ ಬಾರದಾಗಿದೆ. ಬಳ್ಳಾರಿಯಲ್ಲಿ ಪ್ರಭಾವಿ ಸಚಿವರಿದ್ದರೂ ಅವರು ಈ ಭಾಗದ ಪ್ರಗತಿಯ ಬಗ್ಗೆ ಎಂದೂ ತಲೆಕಡೆಸಿಕೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಕೊರೊನಾ ಮಹಾಮಾರಿಯ ಸಂದರ್ಭದಲ್ಲೂ ಈ ಭಾಗವನ್ನು ಸರ್ಕಾರ ಕಡೆಗಣಿಸಿದೆ. ಕಲ್ಯಾಣ ಕರ್ನಾಟಕದ ಸರಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ, ಆಕ್ಸಿಜನ್, ಐ.ಸಿ.ಯು. ಬೇಡ್ ಸೇರಿದಂತೆ ವೈದ್ಯಕೀಯ ಮೂಲಸೌಕರ್ಯದ ಕೊರತೆ ಇದೆ. ಇದನ್ನು ಮನಗಂಡು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ಒಟ್ಟು 650 ಹಾಸಿಗೆಗಳನ್ನು ರಾಯಚೂರು, ಕಲಬುರಗಿ ಜಿಲ್ಲಾಡಳಿತಕ್ಕೆ ಕಳಿಸಿದ್ದರು, ಆದರೆ ಸರ್ಕಾರ ಬಡ ರೋಗಿಗಳ ನೆರವಿಗೆ ಇದನ್ನು ಬಳಸದೆ ಪ್ರತಿಷ್ಠೆ ತೋರುತ್ತಾ 450 ಹಾಸಿಗೆಗಳನ್ನು ಪಡೆದುಕೊಳ್ಳಲು ಕಲಬುರಗಿ ಜಿಲ್ಲಾಡಳಿತ ನಿರಾಕರಿಸುವ ಮೂಲಕ ರೋಗಿಗಳಿಗೆ ಅನ್ಯಾಯ ಮಾಡಿದೆ. ಇದು ಸರ್ಕಾರದ ನಿರ್ಲಕ್ಷ್ಯ ಮತ್ತು ದ್ವೇಷದ ರಾಜಕಾರಣವಾಗಿದ್ದು, ಜನರನ್ನು ಸಂಕಷ್ಟಕ್ಕೆ ತಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ಸರ್ಕಾರ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘಕ್ಕೆ 500 ಕೋಟಿ ರೂ. ಭರವಸೆ ನೀಡಿದ್ದು ಅದರ ಕ್ರಿಯಾ ಯೋಜನೆಯಾಗಿಲ್ಲ, ಅ ಸಂಘಕ್ಕೆ ಯಾವುದೇ ರೂಪು ರೇಷೆಯೂ ಇಲ್ಲ. ಹೀಗೆ ಕಾಗದದ ಮೇಲೆ ಯೋಜನೆ ರೂಪಿಸುವುದರಿಂದ ಏನು ಪ್ರಯೋಜನ. ತಕ್ಷಣವೇ ಇದಕ್ಕೆ 500 ಕೋಟಿ ರೂ. ಹಣ ಬಿಡುಗಡೆ ಮಾಡಿ ಹೈ.ಕ. ಅಭಿವೃದ್ಧಿಗೆ ನಾಂದಿ ಹಾಡಬೇಕು ಎಂದು ಈಶ್ವರ ಖಂಡ್ರೆ ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿಗಳು ಹೈ.ಕ. ವಿಮೋಚನಾ ದಿನದ ಅಂಗವಾಗಿ ಆಗಮಿಸುತ್ತಿದ್ದು, ಈ ಸಂದರ್ಭದಲ್ಲಿ ವಿಳಂಬವಾಗಿಯಾದರೂ ಸರ್ಕಾರ ಜಾಗೃತಗೊಂಡು ಅಸಮಾನತೆಯಿಂದ ನಲುಗಿರುವ ಕಲ್ಯಾಣ ಕರ್ನಾಟಕದಲ್ಲಿ ರಸ್ತೆ, ರೈಲು ಮಾರ್ಗ, ಬಸ್ ನಿಲ್ದಾಣ, ವಸತಿ ನಿಲಯ, ನೀರಾವರಿ ಯೋಜನೆ ಸೇರಿದಂತೆ ಮೂಲಭೂತ ಸೌಕರ್ಯ ಕಾಮಗಾರಿ ಆರಂಭಿಸಬೇಕು, 14 ತಿಂಗಳಲ್ಲಿ ಆಗಿರುವ ನಿರ್ಲಕ್ಷ್ಯ ಸರಿಪಡಿಸಿ, ತಕ್ಷಣವೇ ಅವಶ್ಯಕತೆ ಇರುವ 1500 ಕೋಟಿ ರೂ. ಗಳನ್ನು ಬಿಡುಗಡೆ ಮಾಡಿ ಉಳಿದ ಆರು ತಿಂಗಳಲ್ಲಿ ಅಭಿವೃದ್ಧಿಗೆ ಗಮನ ಹರಿಸಬೇಕು, ಖಾಲಿ ಹುದ್ದೆ ಭರ್ತಿಗೆ ಕ್ರಮವಹಿಸಬೇಕು ಎಂದು ಈಶ್ವರ ಖಂಡ್ರೆ ಒತ್ತಾಯಿಸಿದ್ದಾರೆ.