ಪ್ರಖ್ಯಾತಿಗಾಗಿ ಹತ್ಯೆ ಒಬ್ಬನ ಸೆರೆ

ಭೋಪಾಲ್, ಸೆ.೩- ಸಾಮಾಜಿಕ ಜಾಲತಾಣಗಳನ್ನು ನೋಡಿ ಪ್ರಸಿದ್ಧರಾಗಬೇಕು ಎನ್ನುವ ಉದ್ದೇಶದಿಂದ ಮೂವರು ಕಾವಲು ಸಿಬ್ಬಂದಿಗಳ ಹತ್ಯೆಗೈದಿರುವ ಆರೋಪದಡಿ ಓರ್ವನನ್ನು ಬಂಧಿಸಲಾಗಿದೆ.

ಮಧ್ಯಪ್ರದೇಶದ ಸಾಗರ್ ಪಟ್ಟಣದಲ್ಲಿ ಮೂವರು ಕಾವಲು ಸಿಬ್ಬಂದಿಗಳ ಹತ್ಯೆಯಲ್ಲಿ ಭಾಗಿಯಾಗಿರುವ ಶಂಕಿತ ವ್ಯಕ್ತಿ ಶಿವಪ್ರಸಾದ್ ಧ್ರುವೆಯನ್ನು ಬಂಧಿಸಲಾಗಿದೆ ಎಂದು ಸಾಗರ್ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಅನುರಾಗ್ ತಿಳಿಸಿದ್ದಾರೆ.

ಕಳೆದ ಐದು ದಿನಗಳಲ್ಲಿ ನಾಲ್ವರು ಗಾರ್ಡ್‌ಗಳನ್ನು ಕೊಲೆ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದು, ಮೇ ತಿಂಗಳಲ್ಲಿ ಶವವಾಗಿ ಪತ್ತೆಯಾದ ಇನ್ನೊಬ್ಬ ವಾಚ್‌ಮನ್‌ನ ಕೊಲೆಯಲ್ಲಿ ಅವನ ಪಾತ್ರ ಇದೆ ಎಂದು ತನಿಖೆ ತಿಳಿದು ಬಂದಿದೆ.

ಗುರುವಾರ ರಾತ್ರಿ ಪ್ರಾಥಮಿಕ ವಿಚಾರಣೆಯ ವೇಳೆ, ಆರೋಪಿ ಧ್ರುವ ಕೆಜಿಎಫ್‌ನ ರಾಕಿ ಭಾಯ್ ಚಿತ್ರದಿಂದ ಸ್ಫೂರ್ತಿ ಪಡೆದಿದ್ದೇನೆ ಮತ್ತು ಹಣವನ್ನು ಸಂಗ್ರಹಿಸಲು, ದರೋಡೆಕೋರರಾಗಲು ಮತ್ತು ಭವಿಷ್ಯದಲ್ಲಿ ಪೊಲೀಸರನ್ನು ಗುರಿಯಾಗಿಸಲು ಯೋಜಿಸಿದ್ದಾನೆ ಎಂದು ಅವರು ತಿಳಿಸಿದರು.

ಕಳೆದ ೭೨ ಗಂಟೆಗಳಲ್ಲಿ ಸಾಗರ್‌ನಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಮೂವರು ಭದ್ರತಾ ಸಿಬ್ಬಂದಿಯನ್ನು ಹತ್ಯೆ ಮಾಡಲಾಗಿತ್ತು, ಇದು ಭೀತಿಯನ್ನು ಸೃಷ್ಟಿಸಿತು. ಒಟ್ಟು ನಾಲ್ವರು ಭದ್ರತಾ ಸಿಬ್ಬಂದಿ ಮೇಲೆ ದಾಳಿ ನಡೆದಿದೆ. ಅವರಲ್ಲಿ ಮೂವರು ಸಾವನ್ನಪ್ಪಿದ್ದರೆ, ಒಬ್ಬನನ್ನು ಭೋಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೊದಲ ಪ್ರಕರಣವು ಮೇ ತಿಂಗಳಲ್ಲಿ ವರದಿಯಾಗಿದ್ದರೆ, ಎರಡನೆಯದು ಸೋಮವಾರ ಮತ್ತು ಮೂರನೇ ಮತ್ತು ನಾಲ್ಕನೆಯದನ್ನು ಮಂಗಳವಾರ ನಡೆಸಲಾಯಿತು. ಮೊದಲ ಕೊಲೆಯಾದವನು ಉತ್ತಮ್ ರಜಾಕ್ ಎಂದು ಗುರುತಿಸಲಾಗಿದ್ದು, ಸೋಮವಾರ ಮತ್ತು ಮಂಗಳವಾರ ಕ್ರಮವಾಗಿ ಸಂಭೂಶರಣ್ ದುಬೆ ಮತ್ತು ಕಲ್ಯಾಣ್ ಲೋಧಿ ಕೊಲ್ಲಲ್ಪಟ್ಟರು. ಮಂಗಲ್ ಅಹಿರ್ವಾರ್ ತಲೆಬುರುಡೆಗೆ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿದ್ದಾರೆ.

ಸದ್ಯ ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ, ಆರೋಪಿಯನ್ನು ಭೋಪಾಲ್‌ನಿಂದ ಮುಂಜಾನೆ ಕರೆತಂದಿದ್ದೇವೆ. ಈ ಬಗ್ಗೆ ತನಿಖೆಗಳು ನಡೆಯುತ್ತಿವೆ ಎಂದು ಅನುರಾಗ್ ಹೇಳಿದರು.